ಕಾಲಕಾಲಕ್ಕೆ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿ

| Published : Jul 04 2024, 01:03 AM IST

ಕಾಲಕಾಲಕ್ಕೆ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಜನ ಸಂಪತ್ತಾಗಿರುವ ಪಶುಗಳ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ರೈತರು ಆರ್ಥಿಕವಾಗಿ ಸುಭದ್ರವಾಗಿರಲು ಸಾಧ್ಯ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕದರನಹಳ್ಳಿ ಗ್ರಾಮದಲ್ಲಿ ನೊವೆಶಿಯ ಲೈಫ್ ಸೈನ್ಸ್ ಸಂಸ್ಥೆ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾಮಧೇನು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವೃತ್ತಿಪರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

- ಕದರನಹಳ್ಳಿಯಲ್ಲಿ ಶಿಬಿರ ಉದ್ಘಾಟಿಸಿ ಶಾಸಕ ಕೆ.ಎಸ್‌.ಬಸವಂತಪ್ಪ ಸಲಹೆ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಗ್ರಾಮೀಣ ಜನ ಸಂಪತ್ತಾಗಿರುವ ಪಶುಗಳ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ರೈತರು ಆರ್ಥಿಕವಾಗಿ ಸುಭದ್ರವಾಗಿರಲು ಸಾಧ್ಯ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕದರನಹಳ್ಳಿ ಗ್ರಾಮದಲ್ಲಿ ನೊವೆಶಿಯ ಲೈಫ್ ಸೈನ್ಸ್ ಸಂಸ್ಥೆ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾಮಧೇನು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವೃತ್ತಿಪರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ಶೀತ, ಕೆಮ್ಮು, ಜ್ವರ ಬಂದರೆ ಕೂಡಲೇ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆದು ಗುಣ ಮಾಡಿಕೊಳ್ಳುತ್ತಾನೆ. ಅದೇ ಮೂಕ ಪ್ರಾಣಿಗಳಿಗೆ ಆರೋಗ್ಯ ಹದಗೆಟ್ಟರೆ ಅವುಗಳಿಗೆ ಹೇಳಿಕೊಳ್ಳಲು ಆಗುವುದಿಲ್ಲ. ಹೀಗಾಗಿ, ಜಾನುವಾರು ಸಾಕಿದ ಪ್ರತಿಯೊಬ್ಬ ರೈತರು ಅವುಗಳನ್ನು ಜೋಪಾನವಾಗಿ ನೋಡಿಕೊಳ್ಳುವ ಮೂಲಕ ಕಾಲಕಾಲಕ್ಕೆ ಪಶು ವೈದ್ಯರ ಬಳಿ ತಪಾಸಣೆಗೊಳಪಡಿಸಬೇಕು. ಆ ಮೂಲಕ ಜಾನುವಾರುಗಳ ಆರೋಗ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಜಾನುವಾರುಗಳಿಗೆ ಆರೋಗ್ಯದಲ್ಲಿ ಏರುಪೇರಾದರೆ ರೈತರೇ ಅವುಗಳಿಗೆ ನಾಟಿ ಔಷಧಿ ಕೊಡುವ ಮೂಲಕ ಗುಣಪಡಿಸುವ ಪರಿಣಿತಿ ಹೊಂದಿದ್ದರು. ಆದರೆ ಈಗ ಕೆಲವು ರೈತರು ಜಾನುವಾರುಗಳಿಗೆ ರೋಗಗಳು ಬಂದಾಗ ಅವುಗಳ ಚಲನವಲನ ಕಂಡುಹಿಡಿದು ಪಶು ವೈದ್ಯರ ಬಳಿ ತೋರಿಸುವ ಗೋಜಿಗೆ ಹೋಗುವುದಿಲ್ಲ. ಅವುಗಳು ಗಂಭೀರ ಸ್ಥಿತಿಗೆ ತಲುಪಿದಾಗ ವೈದ್ಯರ ಬಳಿ ಹೋಗುತ್ತಾರೆ. ಕೈ ಮೀರಿದಾಗ ಕೊನೆಗೆ ಅವುಗಳ ಸಾವಿಗೆ ಕಾರಣರಾಗುತ್ತಾರೆ. ಹೀಗಾಗಬಾರದು. ಪ್ರತಿಯೊಬ್ಬ ರೈತರು ಜಾನುವಾರುಗಳ ಆರೋಗ್ಯ ಕಾಪಾಡಬೇಕು ಎಂದು ಹೇಳಿದರು.

ಗ್ರಾಪಂ ಸದಸ್ಯರಾದ ಲೀಲಾಬಾಯಿ, ಬಿ.ಮುರುಗೇಂದ್ರಪ್ಪ, ಎಚ್.ಎಸ್. ಮಲ್ಲಿಕಾರ್ಜುನ, ಪ್ರಕಾಶ್‌ ನಾಯ್ಕ್, ತಾರಾಚಂದ್, ಕೆ.ಎಚ್.ಗುಡ್ಡಪ್ಪ, ಕುಮಾರ್‌ ನಾಯ್ಕ್, ಆಯುರ್ವೇದ ವೈದ್ಯೆ ಡಾ. ಡಿ.ಶಾಲಿನಿ, ಪಶು ವೈದ್ಯರಾದ ಡಾ.ಉಮೇಶ್, ಡಾ. ಬಿ.ಕೆ. ಜಯದೇವಪ್ಪ, ರಾಜಣ್ಣ, ಗ್ರಾಮಸ್ಥರು ಭಾಗವಹಿಸಿದ್ದರು.

ಸರ್ಕಾರಿ ಆಯುರ್ವೇದಿಕ್ ಚಿಕಿತ್ಸಾಲಯಕ್ಕೆ ಭೇಟಿ:

ಕದರನಹಳ್ಳಿ ಸರ್ಕಾರಿ ಆಯುರ್ವೇದಿಕ್ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಪರಿಶೀಲನೆ ನಡೆಸಿದರು. ಔಷಧಿ ದಾಸ್ತಾನು, ರೋಗಿಗಳು ತಪಾಸಣೆಗೊಳಪಡಿಸಿಕೊಂಡ ಹಾಜರಿ, ವೈದ್ಯರು ಹಾಗೂ ಸಿಬ್ಬಂದಿ ಪ್ರತಿನಿತ್ಯ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಗೆ ಬರುವ ಜನರಿಗೆ ಯಾವುದೇ ರೀತಿಯ ತೊಂದರೆ ಕೊಡದೆ ಅವರ ಆರೋಗ್ಯ ಗುಣಪಡಿಸಬೇಕೆಂದು ಸೂಚನೆ ನೀಡಿದರು.

- - -

-1ಕೆಡಿವಿಜಿ34ಃ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕದರನಹಳ್ಳಿ ಗ್ರಾಮದಲ್ಲಿ ಕಾಮಧೇನು ಆರೋಗ್ಯ ತಪಾಸಣಾ ಶಿಬಿರ, ವೃತ್ತಿಪರ ತರಬೇತಿ ಶಿಬಿರಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಚಾಲನೆ ನೀಡಿದರು.

-1ಕೆಡಿವಿಜಿ35ಃ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕದರನಹಳ್ಳಿ ಗ್ರಾಮದ ಸರ್ಕಾರಿ ಆಯುರ್ವೇದಿಕ್ ಚಿಕಿತ್ಸಾಲಯಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲಿಸಿದರು.