ಸಾರಾಂಶ
ಇಟಗಾ ಅಹಮದಾಬಾದ್ ಗ್ರಾಮದಲ್ಲಿ ಬಸವರಾಜ ಬ್ಯಾಡರ್ ಮದುವೆ ಸಮಾರಂಭದ ಮೆರವಣಿಗೆ ವೇಳೆ ಹಾಡು ಹಾಕಿ ಕುಣಿದಾಡುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ತಾಲ್ಲೂಕಿನ ಇಟಗಾ ಅಹಮದಾಬಾದ್ ಗ್ರಾಮದಲ್ಲಿ ಬಸವರಾಜ ಬ್ಯಾಡರ್ ಮದುವೆ ಸಮಾರಂಭದ ಮೆರವಣಿಗೆ ವೇಳೆ ಹಾಡು ಹಾಕಿ ಕುಣಿದಾಡುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಗ್ರಾಮದ ಬಸವರಾಜ ಬ್ಯಾಡರ್ ಮದುವೆ ಸಮಾರಂಭದ ಮದುವೆ ಮೆರವಣಿಗೆ ವೇಳೆ ಹನುಮಾನ ಗುಡಿಯ ಹತ್ತಿರ ಟಿಪ್ಪು ಕಟ್ಟೆಯ ಮುಂದುಗಡೆ ರಸ್ತೆಯ ಮೇಲೆ ಬೆಂಗಳೂರಿನಿಂದ ಬಂದಿದ್ದ ಗೆಳೆಯ ಭೀಮಾಶಂಕರ ದಾಸರ ಸೇರಿ ಇತರರು ಡ್ಯಾನ್ಸ್ ಮಾಡುತ್ತಲಿದ್ದರು. ಇದಕ್ಕೆ ಗ್ರಾಮದ ಖಾನ್ ಪಾಶಾ, ಫಿರೋಜ್, ಖಾಜಾ ಮತ್ತು ಇತರರು ತಕರಾರು ತೆಗೆದ ಹಿನ್ನೆಲೆಯಲ್ಲಿ ಡ್ಯಾನ್ಸ್ ನಿಲ್ಲಿಸಲಾಗಿತ್ತು. ಮರುದಿನ ಭೀಮಾಶಂಕರ ದಾಸರ ಮತ್ತು ಇತರರು ಚಹಾ ಕುಡಿಯಲೆಂದು ಅಬ್ಬು ಹೋಟೆಲ್ ಹತ್ತಿರ ಹೋದಾಗ ಅಲ್ಲಿ ನಿಂತಿದ್ದ ಖಾನಪಾಶಾ ಮತ್ತು ಖಾಜಾ ಪಾಶ ಅವರು ಅವಾಚ್ಯವಾಗಿ ಬೈಯ್ದು, ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಭೀಮಾಶಂಕರ ದಾಸರ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಪ್ರತಿದೂರು: ಫಿರೋಜ್ ಮತ್ತು ನಾನು ಗ್ರಾಮದ ಅಬ್ಬು ಹೋಟೆಲ್ ಹತ್ತಿರ ನಿಂತಿದ್ದಾಗ ಅಲ್ಲಿಗೆ ಬಂದ ಭೀಮಾಶಂಕರ ದಾಸರ ಗೆಳೆಯರಾದ ಅಂಬರೀಶ ಇಟಗಾ, ಆಕಾಶ ಗೌಡ, ಯಲ್ಲಾಲಿಂಗ ನಾಯಿಕೋಡಿ ಅವರು ಡ್ಯಾನ್ಸ್ ಮಾಡಿದಕ್ಕೆ ಜಗಳ ತೆಗೆಯುತ್ತೀರಿ ಎಂದು ಫಿರೋಜ್ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಬಿಡಿಸಲು ಹೋಗಿದ್ದೇನೆ ಈ ವೇಳೆ ಅಂಬರೀಶ ಇಟಗಾ, ಆಕಾಶ ಗೌಡರ್ ಮತ್ತು ಯಲ್ಲಾಲಿಂಗ ನಾಯಿಕೋಡಿ ತಮ್ಮ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಕಾಂತ ನಾಗಪ್ಪ ದೊಡ್ಡಮನಿ ಪ್ರತಿದೂರು ನೀಡಿದ್ದಾರೆ.ದೂರು-ಪ್ರತಿದೂರಿನ ತನಿಖೆ ನಡೆಸುತ್ತಿರುವ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.