ರೋಣದಲ್ಲಿ ಬೈಕ್‌ ಕಳ್ಳನ ಬಂಧನ: 10 ಬೈಕ್ ವಶಕ್ಕೆ

| Published : Jan 17 2024, 01:45 AM IST

ಸಾರಾಂಶ

ರೋಣ, ಬಾದಾಮಿ ಸೇರಿದಂತೆ ವಿವಿಧೆಡೆ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ರೋಣ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿ ಸಮೇತ 10 ಬೈಕ್ ಜಪ್ತಿ ಪಡಿಸಿಕೊಂಡಿದ್ದಾರೆ.

ರೋಣ: ರೋಣ, ಬಾದಾಮಿ ಸೇರಿದಂತೆ ವಿವಿಧೆಡೆ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ರೋಣ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿ ಸಮೇತ 10 ಬೈಕ್ ಜಪ್ತಿ ಪಡಿಸಿಕೊಂಡಿದ್ದಾರೆ.

ರೋಣದ ಶಿವಪೇಟೆಯ 7ನೇ ಕ್ರಾಸಿನಲ್ಲಿ ಚಪ್ಪಲಿ ಅಂಗಡಿ ಹೊಂದಿರುವ ಸಿರಾಜುಲಹಸನ ದಳವಾಯಿ (41) ಈ ಬೈಕ್‌ ಕಳ್ಳತನ ಮಾಡಿರುವ ಆರೋಪಿ.

ರೋಣ ಪಟ್ಟಣದಲ್ಲಿ 8, ಬೆಳಗಾವಿ ಜಿಲ್ಲೆಯ ಕುಡಚಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಮತ್ತು ಬದಾಮಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಬೈಕ್‌ ಕಳ್ಳತನ ಪ್ರಕರಣದಲ್ಲಿ ಈತ ಭಾಗಿಯಾಗಿದ್ದು, ಆರೋಪಿಯಿಂದ ಒಟ್ಟು 10 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಭಾಗಿಯಾದವರ ಮೇಲೆ‌ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಪಿ. ಬಿ.ಎಸ್.ನೇಮಗೌಡ್ರ ತಿಳಿಸಿದರು.

ಕಳ್ಳನ ಕರಾಮತ್ತಿಗೆ ಜನ ಪೇಚಿಗೆ: ಆರೋಪಿ ಸಿರಾಜುಲಹಸನ ದಳವಾಯಿ ಅತ್ಯಂತ ಚಾಲಾಕಿ ವ್ಯಕ್ತಿಯಾಗಿದ್ದು, ಕದ್ದಿರುವ ಬೈಕನ್ನು ತನ್ನದೇ ಎಂದು ನಂಬಿಸಿದ್ದಾನೆ. ಸಿರಾಜುದ್ದಿನ ಎಂಬುವರ ಆರ್.ಸಿ. ಕಾರ್ಡ್‌ನ್ನು ದುರ್ಬಳಕೆ ಮಾಡಿಕೊಂಡು, ಸಿರಾಜುದ್ದಿನ ಎಂಬ ಹೆಸರು ಸಿರಾಜುಲಹಸನ ಎಂಬ ಹೆಸರಿಗೆ ಸ್ವಲ್ಪ ಹೋಲಿಕೆಯಾಗುವುದನ್ನೆ ಬಂಡವಾಳ ಮಾಡಿಕೊಂಡು, ತಾನು ಕದ್ದಿರುವ 6 ಬೈಕ್‌ಗೆ ಒಂದೇ ನಂಬರ್ ಪ್ಲೇಟ್ ಅಳವಡಿಸಿ, ಅವುಗಳಲ್ಲಿ ಕೆಲವು ಬೈಕನ್ನು ಮಾರಾಟ ಮಾಡಿದ್ದಾನೆ. ಇನ್ನು ಕೆಲವು ಬೈಕನ್ನು ಇಂತಿಷ್ಟು ಹಣಕ್ಕೆ ಒತ್ತೆ (ಅಡಮಾನ) ಇಟ್ಟಿದ್ದಾನೆ. ಕಳ್ಳನ ಚಾಲಾಕಿತನಕ್ಕೆ ಜನತೆ ನಂಬಿ ಬೈಕನ್ನು ಕೊಂಡುಕೊಂಡಿದ್ದು, ಈಗ ಬಣ್ಣ ಬಯಲಾಗುತ್ತಿದ್ದಂತೆ ಬೈಕ್ ಕೊಂಡುಕೊಂಡವರು ಪೇಚಿಗೆ ಸಿಲುಕಿದ್ದಾರೆ.

ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ: ಸಾರ್ವಜನಿಕರಲ್ಲಿ ಭಯ ಮೂಡಿಸಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ರೋಣ ಪಿ.ಎಸ್.ಐ ಎಲ್.ಕೆ. ಜೂಲಕಟ್ಟಿ ನೇತೃತ್ವದ ತಂಡ ನಿರಂತರ ಕಾರ್ಯಾಚರಣೆ ನಡೆಸಿ ಬೈಕ್ ಸಮೇತ ಆರೋಪಿಯನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಗದಗ ಎಸ್.ಪಿ. ಬಿ.ಎಸ್.ನೇಮಗೌಡ್ರ, ಹೆಚ್ಚುವರಿ ಎಸ್ಪಿ ಬಿ.ಎಸ್. ಸುಂಕದ, ನರಗುಂದ ಡಿವೈಎಸ್ಪಿ ಪ್ರಭುಗೌಡ ಕೆ., ಸಿಪಿಐ ಎಸ್.ಎಸ್. ಬೀಳಗಿ ಮಾರ್ಗದರ್ಶನದಲ್ಲಿ ರೋಣ‌ ಪಿ.ಎಸ್.ಐ ಎಲ್.ಕೆ. ಜೂಲಕಟ್ಟಿ ನೇತೃತ್ವದಲ್ಲಿ ಎ.ಎಸ್.ಐ ಎಸ್‌.ಬಿ. ಪವಾಡಿ, ಮುಖ್ಯ ಪೇದೆಗಳಾದ ಹನಮಂತಪ್ಪ ಶಂಕ್ರಿ, ಪೇದೆಗಳಾದ ವ್ಹಿ.ಎಸ್. ರಾಯರ, ಕುಮಾರ ತಿಗರಿ, ಮಂಜುನಾಥ ಬಂಡಿವಡ್ಡರ, ಶಿವಕುಮಾರ ಹುಬ್ಬಳ್ಳಿ, ಮುತ್ತಪ್ಪ ಬಾವಿ, ಡಿ.ಎಂ. ಚಿತ್ರಗಾರ, ಮಂಜುನಾಥ ಕುರಿ, ಯಲ್ಲಪ್ಪ ಬೇವಿನಗಿಡದ, ಎಸ್.ಪಿ. ಬಗಲಿ, ಹನಮಂತ ಹುಲ್ಲೂರ, ಟೆಕ್ನಿಕಲ್ ಸೆಲ್ ಸಿಬ್ಬಂದಿ ಗುರುರಾಜ ಬೂದಿಹಾಳ, ಸಂಜೀವ ಕೊರಡೂರ ಒಳಗೊಂಡ ತಂಡವು ಸತತ ಕಾರ್ಯಾಚರಣೆ ನಡೆಸಿ ಕಳ್ಳತನ‌ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.‌