ಬೈಕ್‌ ಸವಾರನ ಅಡ್ಡಗಟ್ಟಿಹಲ್ಲೆ: ಮೂವರ ಬಂಧನ

| Published : Nov 24 2025, 02:15 AM IST

ಬೈಕ್‌ ಸವಾರನ ಅಡ್ಡಗಟ್ಟಿಹಲ್ಲೆ: ಮೂವರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ದ್ವಿಚಕ್ರ ವಾಹನ ಸವಾರನೊಬ್ಬನನ್ನು ಅಡ್ಡಗಟ್ಟಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದ್ವಿಚಕ್ರ ವಾಹನ ಸವಾರನೊಬ್ಬನನ್ನು ಅಡ್ಡಗಟ್ಟಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಿಲ್ಸನ್‌ ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಡುಗೋಡಿಯ ಎಲ್‌.ಆರ್‌ ನಗರ, ಸ್ಲಂ ಕ್ವಾರ್ಟರ್ಸ್‌ ವಾಸಿಗಳಾದ ಸುರೇಶ್‌ (19), ಶರವಣ (20) ಮತ್ತು ಸೂರ್ಯ(19) ಬಂಧಿತರು. ಆರೋಪಿಗಳಿಂದ 2 ಮಾರಕಾಸ್ತ್ರ, ಬೆಳ್ಳಿಯ ಸರ , ದ್ವಿಚಕ್ರ ವಾಹನ ಮತ್ತು ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ನ.15ರಂದು ಬೆಳಗಿನಜಾವ ಶಾಂತಿನಗರದ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ದ್ವಿಚಕ್ರ ವಾಹನ ಸವಾರನೊಬ್ಬನನ್ನು ಅಡ್ಡಗಟ್ಟಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಮೊಬೈಲ್‌ ಸೇರಿ ಇತರೆ ವಸ್ತುಗಳನ್ನು ದರೋಡೆ ಯತ್ನಿಸಿದ್ದರು. ದ್ವಿಚಕ್ರ ವಾಹನ ಸವಾರ ಇದಕ್ಕೆ ತೀವ್ರ ಪ್ರತಿರೋಧವೊಡ್ಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಇದಕ್ಕೂ ಮುನ್ನ ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ದರೋಡೆ ಮಾಡಿಕೊಂಡು ಬರುತ್ತಿದ್ದರು. ಇದೇ ವೇಳೆ ಶಾಂತಿನಗರದ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ದ್ವಿಚಕ್ರ ವಾಹನ ಸವಾರನನ್ನು ದರೋಡೆ ಮಾಡಲು ವಿಫಲ ಯತ್ನ ನಡೆಸಿದ್ದರು. ಆರೋಪಿಗಳ ಪೈಕಿ ಶರವಣ ವಿರುದ್ಧ ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ಈ ಹಿಂದೆ ಪ್ರಕರಣವೊಂದು ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಗಳ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಆ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.