ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಮಣಿಪಾಲದ ಎಂಐಟಿಯ ಉದ್ಯೋಗಿ ಆರ್. ಮನೋಹರ್ ಅವರು ತಾವು ಅಭಿವೃದ್ಧಿ ಪಡಿಸಿದ 2 ದುರ್ಬೀನು ದೂರದರ್ಶಕಗಳು ವರ್ಲ್ಡ್ ಬುಕ್ ಅಫ್ ರೆಕಾರ್ಡ್, ಅಮೆರಿಕನ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಬ್ರಿಟಿಷ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್‌ಗಳಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾವು ಅಭಿವೃದ್ಧಿ ಪಡಿಸಿರುವ 4 ಅಡಿ ಉದ್ದದ ಬೈನಾವ್ಯೂವರ್, 2 ಕೆಜಿ ತೂಕವಿದ್ದು, ಪಿವಿಸಿ ಪೈಪುಗಳು ಮತ್ತು ದರ್ಪಣಗಳನ್ನು ಬಳಸಿ ರಚಿಸಲಾಗಿದೆ. 200 - 240 ಎಕ್ಸ್ ಝೂಮ್ ಹೊಂದಿರುವ ಈ ಬೈನಾವ್ಯೂವರ್‌ನಲ್ಲಿ ಚಂದ್ರನ ಮೇಲ್ಮೈಯ ಕುಳಿಗಳನ್ನು, 3 ಕಿ.ಮೀ. ದೂರದಲ್ಲಿರುವ ಗುಬ್ಬಚ್ಚಿಯನ್ನೂ ಸ್ಪಷ್ಟವಾಗಿ ನೋಡುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಸುಮಾರು 85 ಸಾವಿರ ರು. ವೆಚ್ಚವಾಗಿದೆ ಎಂದರು.
ಈ ಬೈನಾವ್ಯೂವರ್ ಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಅಮೆರಿಕನ್ ಬುಕ್ ಅಫ್ ರೆಕಾರ್ಡ್ಸ್ ನಿಂದ ಮಾನ್ಯತೆ ಸಿಕ್ಕಿದೆ ಎಂದರು.ಅಲ್ಲದೇ ತಾವು ಅಭಿವೃದ್ಧಿಪಡಿಸಿದ ಇನ್ನೊಂದು ಬೈನಾಕ್ಯುಲರ್ 1.50 ಅಡಿ ಉದ್ದವಿದ್ದು, 40-60 ಎಕ್ಸ್ ಝೂಮ್ ಹೊಂದಿದೆ. ಇದಕ್ಕೆ 35 ಸಾವಿರ ರು. ವೆಚ್ಚವಾಗಿದ್ದು, ಇದು ಬ್ರಿಟಿಷ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದರು.
ಮುಂದೆ ಬಾರತೀಯ ಸೈನ್ಯದಲ್ಲಿ ಬಳಸಬಹುದಾದ, ಬಂದೂಕಿಗೆ ಅಳವಡಿಸಬಹುದಾದ ಬೈನಾಕ್ಯೂಲರ್ ರಚಿಸುತ್ತಿದ್ದೇನೆ. ಸೈನ್ಯದ ಅಧಿಕಾರಿಗಳು ಒಂದು ಪ್ರಾಯೋಗಿಕ ಮಾದರಿಯನ್ನು ಕೇಳಿದ್ದು, ಅದನ್ನು ಅಲ್ಯುಮೀನಿಯಂನಿಂದ ತಯಾರಿಸುತಿದ್ದೇನೆ ಎಂದರು.ತಮ್ಮ ತಂದೆ ಸಿವಿಲ್ ಎಂಜಿನಿಯರ್ ಆಗಿದ್ದು, ಅವರಲ್ಲಿ ರಸ್ತೆ ನಿರ್ಮಾಣದಲ್ಲಿ ಬಳಸುವ ಸ್ಕೋಪ್ ಇತ್ತು. ಅದನ್ನು ನೋಡಿ ಬಾಲ್ಯದಿಂದಲೇ ತಮಗೆ ಸ್ಕೋಪ್, ಟೆಲಿಸ್ಕೋಪ್, ಬೈನಾಕ್ಯೂಲರ್ ಗಳ ಬಗ್ಗೆ ಆಸಕ್ತಿ ಮೂಡಿ, ತಾವೇ ಮನೆಯಲ್ಲಿ ಅವುಗಳ ಬ್‌ಗೆ ಅಧ್ಯಯನ ಮಾಡಿ ಈ ಬೈನಾಕ್ಯೂಲರ್ ಗಳನ್ನು ರಚಿಸಲಾರಂಭಿಸಿದ್ದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮನೋಹರ್ ಅವರ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವ ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಮತ್ತು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೆಬೆಟ್ಟು ಉಪಸ್ಥಿತರಿದ್ದರು.