ಬಿಂಡಿಗನವಿಲೆ ಕೃಷಿ ಪತ್ತಿನ ಸಹಕಾರ ಸಂಘ ಕಾಂಗ್ರೆಸ್‌ ಮಡಿಲಿಗೆ

| Published : Mar 29 2025, 12:38 AM IST

ಸಾರಾಂಶ

ಚುನಾವಣೆಯಲ್ಲಿ ಕೆ.ಎನ್.ನೂತನ್ ಮತ್ತು ಪುಟ್ಟಸ್ವಾಮಿ ತಲಾ 7 ಮತ ಪಡೆದು ಗೆಲುವು ಸಾಧಿಸಿದರೆ, ಜೆಡಿಎಸ್ ಬೆಂಬಲಿತ ಜಿ.ಎಸ್.ಅಭಿಷೇಕ್ 4 ಮತ, ವೆಂಕಟರಾಮು 5 ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಅನಂದನಾಯಕ್ ಕರ್ತವ್ಯ ನಿರ್ವಹಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಬಿಂಡಿಗನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೆ.ಎನ್.ನೂತನ್ ಮತ್ತು ಪುಟ್ಟಸ್ವಾಮಿ ಆಯ್ಕೆಯಾದರು.

ಸಂಘದ ಆಡಳಿತ ಮಂಡಳಿ 12 ಮಂದಿ ನಿರ್ದೇಶಕರ ಸ್ಥಾನಗಳಿಗೆ ಮಾ.16ರಂದು ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ತಲಾ 6 ಮಂದಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎರಡೂ ಪಕ್ಷಗಳ ನಾಯಕರು ತೀವ್ರ ಕಸರತ್ತು ನಡೆಸಿದ್ದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್.ನೂತನ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟಸ್ವಾಮಿ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಜಿ.ಎಸ್.ಅಭಿಷೇಕ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟರಾಮು ಉಮೇದುವಾರಿಕೆ ಸಲ್ಲಿಸಿದ್ದರು. ಒಟ್ಟು 12 ಮಂದಿ ನಿರ್ದೇಶಕರ ಪೈಕಿ ಜೆಡಿಎಸ್‌ನ ಕುಮಾರ್ ಚುನಾವಣೆಗೆ ಗೈರಾಗಿದ್ದರು.

ನಂತರ ನಡೆದ ಚುನಾವಣೆಯಲ್ಲಿ ಕೆ.ಎನ್.ನೂತನ್ ಮತ್ತು ಪುಟ್ಟಸ್ವಾಮಿ ತಲಾ 7 ಮತ ಪಡೆದು ಗೆಲುವು ಸಾಧಿಸಿದರೆ, ಜೆಡಿಎಸ್ ಬೆಂಬಲಿತ ಜಿ.ಎಸ್.ಅಭಿಷೇಕ್ 4 ಮತ, ವೆಂಕಟರಾಮು 5 ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಅನಂದನಾಯಕ್ ಕರ್ತವ್ಯ ನಿರ್ವಹಿಸಿದರು.

ಸಂಘದ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂಘದ ಮುಂಭಾಗದಲ್ಲಿ ಬೃಹತ್ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಜೊತೆಗೆ ಸಚಿವ ಎನ್.ಚಲುವರಾಯಸ್ವಾಮಿ ಪರ ಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ನೂತನ ಅಧ್ಯಕ್ಷ ಕೆ.ಎನ್.ನೂತನ್ ಮಾತನಾಡಿ, ಸಂಘದಲ್ಲಿ ಸದಸ್ಯತ್ವ ಹೊಂದಿರುವ ರೈತರಿಗೆ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಸರ್ಕಾರದಿಂದ ಸಿಗುವ ಶೂನ್ಯ ಬಡ್ಡಿದರದ ಸಾಲ ಸೌಲಭ್ಯ ಸೇರಿದಂತೆ ಹಲವು ಸವಲತ್ತುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.

ಹಿರಿಯ ಸಹಕಾರಿಗಳು ಮತ್ತು ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಸಲಹೆ ಮಾರ್ಗದರ್ಶನ ಪಡೆದು ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಜೊತೆಗೆ, ಹೋಬಳಿ ಕೇಂದ್ರವಾದ ಬಿಂಡಿಗನವಿಲೆಯಲ್ಲಿ ಸಂಘದಿಂದ ಪೆಟ್ರೋಲ್ ಬಂಕ್ ಸ್ಥಾಪಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದರು.

ಸಹಕಾರ ಸಂಘಕ್ಕೆ ಅಧ್ಯಕ್ಷನಾಗಲು ನನಗೆ ಸಹಕರಿಸಿದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಆಡಳಿತ ಮಂಡಳಿ ಎಲ್ಲಾ ನಿರ್ದೇಶಕರು ಮತ್ತು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದಿಸುವುದಾಗಿ ತಿಳಿಸಿದರು.

ಸಂಘದ ನೂತನ ಉಪಾಧ್ಯಕ್ಷ ಪುಟ್ಟಸ್ವಾಮಿ, ನಿರ್ದೇಶಕರಾದ ಕಂಚಹಳ್ಳಿ ಗೌಡ, ಎ.ಕುಮಾರ್, ಕೆ.ಯು.ನಂಜುಂಡೇಗೌಡ, ಜಿ.ಎಸ್.ಅಭಿಷೇಕ್, ಎನ್.ಎಂ.ನಾಗರಾಜು, ಎನ್.ಆರ್.ಗೀತಾ, ಮಂಜುಳ, ಗುರುಮೂರ್ತಿ, ವೆಂಕಟರಾಮು, ಮಾಜಿ ಅಧ್ಯಕ್ಷರಾದ ಇಂದ್ರಮ್ಮ, ಕೋಳಿತಮ್ಮಣ್ಣ, ಸಂಘದ ಸಿಇಓ ಮೋಹನ್‌ಕುಮಾರ್, ಮುಖಂಡರಾದ ಸುಬ್ಬಣ್ಣ, ರವಿಕುಮಾರ್, ಸುಪ್ರಿತ್‌ಕುಮಾರ್, ರಾಜು, ಗಿರೀಶ್, ಮಹೇಶ್, ಪುರುಷೋತ್ತಮ್, ನಾರಗೋನಹಳ್ಳಿ ಲೋಕೇಶ್ ಸೇರಿದಂತೆ ಸ್ಥಳೀಯ ಗ್ರಾ.ಪಂ.ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.