ಡೆಂಘೀ ಸೊಳ್ಳೆ ನಿಯಂತ್ರಣಕ್ಕೆ ‘ಇಕೋ ಬಯೋ ಟ್ರ್ಯಾಪ್‌’ ಸಾಧನ ಅಳವಡಿಕೆ : ಬಿಬಿಎಂಪಿ

| Published : Aug 08 2024, 01:30 AM IST / Updated: Aug 08 2024, 10:25 AM IST

ಡೆಂಘೀ ಸೊಳ್ಳೆ ನಿಯಂತ್ರಣಕ್ಕೆ ‘ಇಕೋ ಬಯೋ ಟ್ರ್ಯಾಪ್‌’ ಸಾಧನ ಅಳವಡಿಕೆ : ಬಿಬಿಎಂಪಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಘೀ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ನಗರದಲ್ಲಿ ‘ಇಕೋ ಬಯೋ ಟ್ರ್ಯಾಪ್‌’ ಸಾಧನ ಅಳವಡಿಕೆಗೆ ಬಿಬಿಎಂಪಿ ಮುಂದಾಗಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಘೀ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ನಗರದಲ್ಲಿ ‘ಇಕೋ ಬಯೋ ಟ್ರ್ಯಾಪ್‌’ ಸಾಧನ ಅಳವಡಿಕೆಗೆ ಬಿಬಿಎಂಪಿ ಮುಂದಾಗಿದೆ.

ಬೆಂಗಳೂರಿನಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 10 ಸಾವಿರ ಡೆಂಘೀ ಪ್ರಕರಣ ಕಾಣಿಸಿಕೊಂಡಿದ್ದು, ಮೂವರು ಡೆಂಘೀ ನಿಂದ ಮೃತಪಟ್ಟಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಒಟ್ಟು 20 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಡೆಂಘೀ ದೃಢಪಟ್ಟಿದ್ದು, 10 ಮಂದಿ ಈವರೆಗೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಡೆಂಘೀ ಪ್ರಕರಣ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿಯು ಹರಸಾಹಸ ಪಡುತ್ತಿದೆ. ಈಗಾಗಲೇ ಸೊಳ್ಳೆ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ, ಫಾಗಿಂಗ್‌ ಸೇರಿದಂತೆ ಮೊದಲಾದ ಕಾರ್ಯಗಳನ್ನು ಮಾಡಲಾಗುತ್ತಿದೆ. ಆದರೂ ಡೆಂಘೀ ಪತ್ತೆ ಮಾತ್ರ ನಿಂತಿಲ್ಲ. ಹೀಗಾಗಿ, ಮುಂಬೈನ ಧಾರವಿ ಕೊಳಗೇರಿಯಲ್ಲಿ ಡೆಂಘೀ ಹರಡು ಸೊಳ್ಳೆಗಳ ನಿಯಂತ್ರಣಕ್ಕೆ ಅಳವಡಿಕೆ ಮಾಡಲಾಗಿರುವ ಇಕೋ ಬಯೋ ಟ್ರ್ಯಾಪ್‌ ಸಾಧನವನ್ನು ಅಳವಡಿಕೆ ಮಾಡುವಂತೆ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಬಿಬಿಎಂಪಿಯಲ್ಲಿ ಪ್ರಾಯೋಗಿಕವಾಗಿ ಈ ಸಾಧನ ಅಳವಡಿಕೆ ಮಾಡುವಂತೆ ಪಾಲಿಕೆ ಸಾರ್ವಜನಿಕ ಆರೋಗ್ಯ ವಿಭಾಗಕ್ಕೆ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿಯು ಇಕೋ ಬಯೋ ಟ್ರ್ಯಾಪ್‌ ಅಳವಡಿಕೆಗೆ ಮುಂದಾಗಿದೆ.

ಸೊಳ್ಳೆ ಆಕರ್ಷಿಸುವ ಪಾಟ್‌

ಇಕೋ ಬಯೋ ಟ್ರ್ಯಾಪ್‌ ಇದೊಂದು ಹೂವಿನ ಕುಂಡದ ಮಾದರಿಯಲ್ಲಿ ಇರಲಿದೆ. ಈ ಪಾಟ್‌ನಲ್ಲಿ ನೀರಿನೊಂದಿಗೆ ರಾಸಾಯನಿಕವನ್ನು ಬೆರೆಸಲಾಗುತ್ತದೆ. ರಾಸಾಯನಿಕದ ವಾಸನೆಗೆ ಸೊಳ್ಳೆಗಳು ಬಂದು ಪಾಟ್‌ನಲ್ಲಿ ಬಿದ್ದು ಸಾವನ್ನಪ್ಪಲಿವೆ. ಪ್ರತಿ 400 ಚದರ ಅಡಿಗೆ ಒಂದು ಬಯೋ ಟ್ರ್ಯಾಪ್‌ ಇಡಲಾಗುತ್ತದೆ. ಈ ಬಯೋ ಟ್ರ್ಯಾಪ್‌ ಸುಮಾರು 30 ದಿನ ಕಾರ್ಯ ನಿರ್ವಹಿಸಲಿದೆ. ಇದರಿಂದ ಸೊಳ್ಳೆಗಳು ಶೇ.70 ರಷ್ಟು ಕಡಿಮೆಯಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋರಮಂಗಲದಲ್ಲಿ ಅಳವಡಿಕೆ

ಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ವಿಭಾಗದ ಅಧಿಕಾರಿಗಳು ನಗರದ ಕೋರಮಂಗಲದ ಆಡುಗೋಡಿ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಇಕೋ ಬಯೋ ಟ್ರ್ಯಾಪ್‌ ಅಳವಡಿಕೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸುಮಾರು 400 ಸಂಖ್ಯೆಯ ಬಯೋ ಟ್ರ್ಯಾಪ್‌ ಅಳವಡಿಕೆ ಮಾಡಲಾಗುತ್ತಿದೆ.

ಸಿಎಸ್‌ಆರ್‌ ಅನುದಾನಕ್ಕೆ ಪ್ರಸ್ತಾವನೆ:

ಪ್ರಾಯೋಗಿಕವಾಗಿ ಇಕೋ ಬಯೋ ಟ್ರ್ಯಾಪ್‌ ಅಳವಡಿಕೆ ಕಾರ್ಯಕ್ಕೆ ಬಿಬಿಎಂಪಿಯು ಸಿಎಸ್‌ಆರ್‌ (ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ) ನಿಧಿ ಪಡೆಯುವುದಕ್ಕೆ ಮುಂದಾಗಿದೆ. ಈಗಾಗಲೇ ಖಾಸಗಿ ಸಂಸ್ಥೆಯೊಂದಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ. ಪ್ರತಿ ಬಯೋ ಟ್ರ್ಯಾಪ್‌ಗೆ 400 ರಿಂದ 500 ರು. ಆಗಬಹುದು. ಹೆಚ್ಚಿನ ಸಂಖ್ಯೆಯ ಬಯೋ ಟ್ರ್ಯಾಪ್‌ ಖರೀದಿ ಮಾಡಿದರೆ ದರ ಇನ್ನಷ್ಟು ಕಡಿಮೆ ಆಗಬಹುದು. ಪ್ರಾಯೋಗಿಕ ಯೋಜನೆಗೆ ಸುಮಾರು 2 ರಿಂದ 3 ಲಕ್ಷ ರು. ವೆಚ್ಚವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿ 25 ಡೆಂಘೀ ಹಾಟ್‌ಸ್ಪಾಟ್‌

ನಗರದಲ್ಲಿ ಸುಮಾರು 10 ಸಾವಿರ ಡೆಂಘೀ ಪ್ರಕರಣ ಕಾಣಿಸಿಕೊಂಡಿದ್ದು, ಎರಡು ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಡೆಂಘೀ ಪ್ರಕರಣ ಒಂದೇ ಸ್ಥಳದಲ್ಲಿ ಪತ್ತೆಯಾದರೆ ಅದನ್ನು ಡೆಂಘೀ ಹಾಟ್‌ ಸ್ಪಾಟ್‌ ಎಂದು ಗುರುತಿಸಲಾಗುತ್ತಿದೆ. ಈ ರೀತಿ ನಗರದಲ್ಲಿ ಬರೋಬ್ಬರಿ 25 ಡೆಂಘೀ ಹಾಟ್‌ ಸ್ಪಾಟ್‌ಗಳನ್ನು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಗುರುತಿಸಿದ್ದಾರೆ. ಈ ಪೈಕಿ ಮಹದೇವಪುರ ವಲಯದಲ್ಲಿಯೇ ಅತಿ ಹೆಚ್ಚು 11 ಹಾಟ್‌ಸ್ಪಾಟ್‌ ಪತ್ತೆಯಾಗಿವೆ, ಉಳಿದಂತೆ ದಕ್ಷಿಣ ವಲಯದಲ್ಲಿ 7, ಪಶ್ಚಿಮದಲ್ಲಿ 3, ಪೂರ್ವದಲ್ಲಿ 2 ಹಾಗೂ ದಾಸರಹಳ್ಳಿ ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ತಲಾ 1 ಡೆಂಘೀ ಹಾಟ್‌ಸ್ಪಾಟ್‌ ಗುರುತಿಸಲಾಗಿದೆ.