ತಾಲೂಕಾ ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ತಂಡ ಶರಾವತಿ ಕಾಂಡ್ಲಾ (ಮ್ಯಾಂಗ್ರೋ) ಅರಣ್ಯ ಪ್ರದೇಶ, ಇಕೋ ಫಾರ್ಕ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಅಲ್ಲಿನ ವೈವಿಧ್ಯ ಸಂಗತಿಗಳ ಬಗ್ಗೆ ಅಧ್ಯಯನ ನಡೆಸಿತು.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ತಾಲೂಕಾ ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ತಂಡ ಶರಾವತಿ ಕಾಂಡ್ಲಾ (ಮ್ಯಾಂಗ್ರೋ) ಅರಣ್ಯ ಪ್ರದೇಶ, ಇಕೋ ಫಾರ್ಕ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಅಲ್ಲಿನ ವೈವಿಧ್ಯ ಸಂಗತಿಗಳ ಬಗ್ಗೆ ಅಧ್ಯಯನ ನಡೆಸಿತು.

ಕಡಲು ಕೊರೆತ, ಭೂಕುಸಿತ ತಡೆಯುವಲ್ಲಿ ಈ ಕಾಂಡ್ಲಾವನದ ಗಿಡಗಳು ಪ್ರಮುಖ ಪಾತ್ರವಹಿಸುತ್ತವಲ್ಲದೇ ವಿಶೇಷ ಜಾತಿಯ ಸಿಗಡಿ, ಮೀನುಗಳು ಜೊತೆಗೆ ಅನೇಕ ಜಾತಿಯ ಪಕ್ಷಿಗಳು ಇಲ್ಲಿ ವಾಸ ಮಾಡುವ ಸಂಗತಿಗಳ ಬಗ್ಗೆ ತಿಳಿದುಕೊಂಡ ತಂಡ ಮ್ಯಾಂಗ್ರೋವ್ ಅರಣ್ಯದಲ್ಲಿ ಜಾಥಾ ನಡೆಸಿತು.

ಕಾಂಡ್ಲಾವನ ಪ್ರದೇಶದಲ್ಲಿ ಸುರಕ್ಷತೆ ಮತ್ತು ಜೀವ ವೈವಿಧ್ಯ ಸಂಗತಿಗಳ ರಕ್ಷಣೆಗೆ ಕೈಗೊಂಡ ಕ್ರಮಗಳನ್ನು ವೀಕ್ಷಿಸಲಾಯಿತು. ಈ ರೀತಿಯ ಅಪರೂಪದ ಕಾಂಡ್ಲಾವನ ಜಿಲ್ಲೆಯಲ್ಲಿ ಮತ್ತೆಲ್ಲೂ ನೋಡಸಿಗದು. ಈ ರೀತಿಯ ವನ ಸಾರ್ವಜನಿಕರಿಗೆ ಪ್ರವಾಸಿಗರಿಗೆ ವೀಕ್ಷಿಸಿ ಅಧ್ಯಯನ ನಡೆಸಲು ಅರಣ್ಯ ಇಲಾಖೆ ಇಲ್ಲಿ ಅವಕಾಶ ಕಲ್ಪಿಸಿ, ಸ್ವಚ್ಚತೆ, ಸುರಕ್ಷತೆಗೆ ಆದ್ಯತೆ ನೀಡಿರುವ ಬಗ್ಗೆ ಜೀವ ವೈವಿಧ್ಯ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿತು. ಕಾಂಡ್ಲಾ ವನದ ವೈಶಿಷ್ಠ್ಯತೆ ಬಗ್ಗೆ ಪ್ರದೇಶಗಳನ್ನು ಸುತ್ತಿ, ಪ್ರವಾಸಿಗರೊಂದಿಗೆ ಅಭಿಪ್ರಾಯ ಪಡೆದು ಸಮಾಲೋಚಿಸಿ ನಂತರ ಗುಂಪು ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಲಾಯಿತು.

ಸಮಿತಿಯ ಸದಸ್ಯ ಕಾರ್ಯದರ್ಶಿ ತಾಪಂ ಇಒ ರಾಜೇಶ ಧನವಾಡಕರ್ ಅಧ್ಯಯನ ಪ್ರವಾಸಕ್ಕೆ ತಾಪಂನಲ್ಲಿ ಚಾಲನೆ ನೀಡಿದರು. ತಾಪಂ ಯೋಜನಾಧಿಕಾರಿ ರಾಘವ ಮಾರ್ಗದರ್ಶನದಲ್ಲಿ ಈ ಅಧ್ಯಯನ ತಂಡ ಈ ಪ್ರದೇಶಗಳಲ್ಲಿ ಸಂಚರಿಸಿತು. ಕೆ.ಎಸ್. ಭಟ್ಟ, ನರಸಿಂಹ ಸಾತೊಡ್ಡಿ, ಶ್ರೀಲತಾ ರಾಜೀವ ಹೆಗಡೆ, ರಂಜಿತಾ ಆರ್. ನಾಯ್ಕ, ರಾಜೇಶ್ವರೀ ಸಿದ್ದಿ, ರಂಜಿತಾ ಉಲ್ಲಾಸ ನಾಯ್ಕ್, ಮಾಲಿನಿ ಸುರೇಶ ಹೆಗಡೆ, ತಾಪಂ ವಿಷಯ ನಿರ್ವಾಹಕಿ ಸಂಗೀತಾ ಗೌಡ ಅಧ್ಯಯನ ತಂಡದಲ್ಲಿದ್ದರು.