ಕಾಂಪ್ರೆಸೆಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಬದಲು ಕಾಂಪ್ರೆಸೆಡ್ ಬಯೋ ಗ್ಯಾಸ್ (ಸಿಬಿಜಿ) ಭರ್ತಿ ಮಾಡುತ್ತಿರುವುದನ್ನು ಖಂಡಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಪಟ್ಟಣ ಯಲ್ಲಾಪುರ ರಸ್ತೆಯ ಕಾರಡಗಿ ಪೆಟ್ರೋಲ್ ಬಂಕ್‌ಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಕಾಂಪ್ರೆಸೆಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಬದಲು ಕಾಂಪ್ರೆಸೆಡ್ ಬಯೋ ಗ್ಯಾಸ್ (ಸಿಬಿಜಿ) ಭರ್ತಿ ಮಾಡುತ್ತಿರುವುದನ್ನು ಖಂಡಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಪಟ್ಟಣ ಯಲ್ಲಾಪುರ ರಸ್ತೆಯ ಕಾರಡಗಿ ಪೆಟ್ರೋಲ್ ಬಂಕ್‌ಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಸಿಎನ್‌ಜಿ ಎಂಜಿನ್ ವಾಹನಗಳಿಗೆ ಏನು ಹೇಳದೆ ಕೇಳದೆ ಸಿಬಿಜಿಯನ್ನು ಭರ್ತಿ ಮಾಡುತ್ತಿದ್ದಾರೆ. ಇದರಿಂದ ವಾಹನದ ಎಂಜಿನ್‌ಗೆ ಧಕ್ಕೆಯಾಗುತ್ತಿದ್ದು, ಸ್ಟಾರ್ಟಿಂಗ್ ಪ್ರಾಬ್ಲಂ ಸೇರಿದಂತೆ ಕೆಟ್ಟು ನಿಲ್ಲುತ್ತಿವೆ. ಅಲ್ಲದೇ ಮೈಲೇಜ್ ಕೂಡ ಕಡಿಮೆಯಾಗಿವೆ. ಈ ಬಗ್ಗೆ ಪ್ರಶ್ನಿಸಿದರೆ ಬೇಕಾದರೆ ಹಾಕಿಸಿಕೊಳ್ಳಿ ಅಥವಾ ಬಿಡಿ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಬಯೋ ಗ್ಯಾಸ್ ಅಭಿವೃದ್ಧಿ ಹಂತದಲ್ಲಿದೆ. ಅದು ಲಾಂಚ್ ಕೂಡ ಆಗಿಲ್ಲ. ಈಗಲೇ ಮಾರಾಟ ಮಾಡಲಾಗುತ್ತಿದೆ. ಸಿಎನ್‌ಜಿ ಮತ್ತು ಬಯೋ ಗ್ಯಾಸ್ ನಡುವೆ ದರದ ವ್ಯತ್ಯಾಸವಿದೆ. ಆದರೂ ಕೂಡ ಇವರು ₹೮೭ ರಂತೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದ ಪ್ರತಿಭಟನಾನಿರತರು, ಹೀಗಾದರೆ ಸಿಎನ್‌ಜಿ ವಾಹನ ಮಾಲೀಕರು ಏನು ಮಾಡಬೇಕು. ತಕ್ಷಣ ಸಿಬಿಜಿ ಬದಲು ಸಿಎನ್‌ಜಿ ಹಾಕುವಂತೆ ಒತ್ತಾಯಿಸಿ ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ಕೆಲ ಕಾಲ ವಾಗ್ವಾದ ನಡೆಸಿದರು. ಸಿಎನ್‌ಜಿ ಹಾಕಿ ಅಥವಾ ಬಂಕ್ ಬಂದ್ ಮಾಡಿ ಎಂದು ಪಟ್ಟುಹಿಡಿದರು. ಇದಕ್ಕೆ ಮಣಿದ ಪೆಟ್ರೋಲ್ ಬಂಕ್ ಮಾಲೀಕರು ಸಿಬಿಜಿ ವಾಲ್ ಬಂದ್ ಮಾಡಿದರು. ಬಳಿಕ ಸ್ಥಳಕ್ಕಾಗಮಿಸಿದ ಮುಂಡಗೋಡ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ರಂಗನಾಥ ನೀಲಮ್ಮನವರ ಹಾಗೂ ಆಹಾರ ನಿರೀಕ್ಷಕ ಸಂಜು ಲಮಾಣಿ ಪ್ರತಿಭಟನಾಕಾರರ ಅಹವಾಲನ್ನು ಸ್ವೀಕರಿಸಿ ವಿಚಾರಿಸಿದಾಗ, ಸಿಬಿಜಿ ಹಾಕಲಾಗುತ್ತಿರುವುದರಿಂದ ವಾಹನಗಳು ಹಾಳಾಗುತ್ತಿವೆ. ವಾಹನಗಳಿಗೆ ಸೆಟ್ ಆಗುತ್ತಿಲ್ಲ. ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನಗಳಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಜವಾಬ್ದಾರರು? ಯಾವುದೇ ಅನಾಹುತ ನಡೆಯುವುದಿಲ್ಲ ಎಂದು ಪೆಟ್ರೋಲ್ ಬಂಕ್ ಮಾಲೀಕರು ಬರೆದುಕೊಡುತ್ತಾರಾ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಪೆಟ್ರೋಲ್ ಬಂಕ್ ಮಾಲೀಕರು, ಕೇಂದ್ರ ಸರ್ಕಾರದ ಆದೇಶದಂತೆ ಸಿಎನ್‌ಜಿ ಹಾಗೂ ಸಿಬಿಜಿ ಎರಡೂ ಒಂದೇ ಹಾಗಾಗಿ ಇದನ್ನೇ ಮಾರಾಟ ಮಾಡುವಂತೆ ಕಂಪನಿ ತಮಗೆ ಸೂಚಿಸಿದೆ. ಹಾಗಾಗಿ ಸರ್ಕಾರದ ಆದೇಶದಂತೆ ನಾವು ಮಾರಾಟ ಮಾಡುತ್ತಿದ್ದೇವೆ. ಜನರ ಬೇಡಿಕೆ ಬಗ್ಗೆ ಕಂಪನಿಗೆ ಪತ್ರ ಬರೆಯುವುದಾಗಿ ಹೇಳಿದರು. ಬಳಿಕ ಗ್ಯಾಸ್ ಭರ್ತಿ ಮಾಡಿಕೊಂಡು ಬಂದಿದ್ದ ಟ್ಯಾಂಕರ್ ಪರೀಕ್ಷಿಸಿದಾಗ ವಾಹನದ ಮೇಲೆ ಸಿಎನ್‌ಜಿ ಸಾಗಾಟ ವಾಹನ ಎಂದು ನಮೂದಿಸಲಾಗಿತ್ತು. ಆದರೆ ಅದರ ಮೇಲೆ ಹೇರಿಕೊಂಡು ಬಂದ ಸಿಲಿಂಡರ್ ಮೇಲೆ ಸಿಬಿಜಿ ಎಂದು ಬರೆಯಲಾಗಿತ್ತು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಾಕಾರರು ಇದರಲ್ಲಿ ಏನೋ ಗೋಲ್ ಮಾಲ್ ನಡೆಯುತ್ತಿದೆ ಎಂದು ಆರೋಪಿಸಿದರು. ಬಳಿಕ ಈ ಬಗ್ಗೆ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.