ಚಾಣಕ್ಯ ವಿವಿಯಲ್ಲಿ ಜೈವಿಕ ವಿಜ್ಞಾನ ಲ್ಯಾಬ್‌ ಶುರು

| Published : May 13 2024, 01:03 AM IST

ಸಾರಾಂಶ

ನಗರದ ಹೊರವಲಯದ ಚಾಣಕ್ಯ ವಿಶ್ವವಿದ್ಯಾಲಯದ ಜಾಗತಿಕ ಕ್ಯಾಂಪಸ್‌ನಲ್ಲಿ ಬಯೋಕಾನ್‌ ಲಿಮಿಟೆಡ್‌ನ ಬೆಂಬಲದೊಂದಿಗೆ ಅತ್ಯಾಧುನಿಕ ಜೈವಿಕ ವಿಜ್ಞಾನ ಪ್ರಯೋಗಾಲಯ ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಹೊರವಲಯದ ಚಾಣಕ್ಯ ವಿಶ್ವವಿದ್ಯಾಲಯದ ಜಾಗತಿಕ ಕ್ಯಾಂಪಸ್‌ನಲ್ಲಿ ಬಯೋಕಾನ್‌ ಲಿಮಿಟೆಡ್‌ನ ಬೆಂಬಲದೊಂದಿಗೆ ಅತ್ಯಾಧುನಿಕ ಜೈವಿಕ ವಿಜ್ಞಾನ ಪ್ರಯೋಗಾಲಯ ಆರಂಭಿಸಲಾಗಿದೆ.

ವಿವಿಯ ಅಂತಾರಾಷ್ಟ್ರೀಯ ಸಲಹಾ ಮಂಡಳಿಯ ಗೌರವಾನ್ವಿತ ಸದಸ್ಯರೂ ಆಗಿರುವ ಬಯೋಕಾನ್‌ ಸಂಸ್ಥೆಯ ಮುಖ್ಯಸ್ಥೆ ಡಾ। ಕಿರಣ್ ಮಜುಂದಾರ್ ಶಾ ಶನಿವಾರ ಈ ನೂತನ ಪ್ರಯೋಗಾಲಯವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಈ ಸಂಶೋಧನಾ ಕೇಂದ್ರದ ಸ್ಥಾಪನೆಯು ಜಾಗತಿಕ ಸವಾಲುಗಳು ಹಾಗೂ ಒತ್ತಡವನ್ನು ಎದುರಿಸಲು ಚಾಣಕ್ಯ ವಿವಿ ಮತ್ತು ಬಯೋಕಾನ್‌ ಸಾಮೂಹಿಕವಾಗಿ ಶಿಕ್ಷಣ ಮತ್ತು ಸಂಶೋಧನೆಗಳ ಸದುಪಯೋಗಕ್ಕೆ ಒಂದು ದಿಟ್ಟ ಹೆಜ್ಜೆಯಾಗಿದೆ. ಹೊಸ ಸಂಶೋಧನಾ ಕೇಂದ್ರವು ಬಯೋ ಎಂಜಿನಿಯರಿಂಗ್, ಡೀಸೆಲ್ ಬಯಾಲಜಿ, ಕಂಪ್ಯೂಟೇಶನಲ್ ಬಯಾಲಜಿ ಸೇರಿದಂತೆ ಇನ್ನಿತರೆ ಕ್ಷೇತ್ರದ ಸಂಶೋಧನಾ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದರು.ಆರೋಗ್ಯ, ಕೃಷಿ ಮತ್ತು ಪರಿಸರ ಸುಸ್ಥಿರತೆಯ ಸವಾಲುಗಳನ್ನು ಎದುರಿಸಲು ನುರಿತ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಅಂತರಶಿಸ್ತೀಯ ಸಹಯೋಗಕ್ಕಾಗಿ ಇದು ಕಾರ್ಯನಿರ್ವಹಿಸುತ್ತದೆ. ಈ ವಿಷಯಗಳಲ್ಲಿ ವಿಶ್ವವಿದ್ಯಾನಿಲಯವು ಪಿಎ್‌ಡಿ ಜೊತೆಗೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳನ್ನೂ ನೀಡಲು ಯೋಜಿಸಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಭವಿಷ್ಯದ ದೃಷ್ಟಿಕೋನಗಳಿಗೆ ಅನುಗುಣವಾಗಿ ವೈವಿಧ್ಯಮಯ ಕೋರ್ಸ್‌ಗಳನ್ನು ನೀಡುವ ಮೂಲಕ ಜೀವ ವಿಜ್ಞಾನದ ಉತ್ಸಾಹಿಗಳಿಗೆ ಹೆಚ್ಚು ಪ್ರಯೋಜನವನ್ನು ನೀಡಬೇಕಾಗುತ್ತದೆ. ವೈಜ್ಞಾನಿಕ ಸಂಶೋಧನೆ ಮತ್ತು ಆವಿಷ್ಕಾರದ ಮೇಲೆ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಉತ್ಸಾಹ ಹೊಂದಬೇಕು. ಶಿಕ್ಷಣದಲ್ಲಿ ನಾವೀನ್ಯತೆ ಮತ್ತು ಸಹಯೋಗಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಲು ಉದ್ಯಮಗಳು ಒತ್ತು ನೀಡಬೇಕಾಗಿದೆ ಎಂದು ಹೇಳಿದರು.

ಚಾಣಕ್ಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಚ್ ಎಸ್ ಅಶೋಕ್ ಮಾತನಾಡಿ, ಬಯೋಕಾನ್‌ ಲಿಮಿಟೆಡ್‌ನ ಬೆಂಬಲದೊಂದಿಗೆ ಈ ಪ್ರಯೋಗಾಲಯ ಆರಂಭಿಸಲಾಗಿದ್ದು, ತನ್ಮೂಲಕ ವಿಶ್ವವಿದ್ಯಾಲಯವು ವೈಜ್ಞಾನಿಕ ನಾವೀನ್ಯತೆಗಳನ್ನು ಚಾಲನೆ ಮಾಡುವಲ್ಲಿ ಮತ್ತು ನೈಜ-ಪ್ರಪಂಚದ ಸವಾಲುಗಳನ್ನು ಎದುರಿಸುವಲ್ಲಿ ಉದ್ಯಮ-ಅಕಾಡೆಮಿಯಾ ಸಹಯೋಗದಲ್ಲಿ ಒಂದು ಹೆಗ್ಗುರುತಾಗಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಉತ್ಪತ್ತಿಯಾಗುವ ಜ್ಞಾನದ ಸಂಪತ್ತನ್ನು ಕೈಗಾರಿಕೆಗಳಿಗೆ ಮತ್ತು ಉದ್ಯಮದ ಪ್ರವೃತ್ತಿಗಳಿಗೆ ಅನುಗುಣವಾಗಿರಲು ಅಕಾಡೆಮಿಯ ಅವಶ್ಯಕತೆಯಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಯ ಗೌರವ ಕುಲಪತಿ ಪದ್ಮಶ್ರೀ ಪ್ರೊ.ಎಂ.ಕೆ.ಶ್ರೀಧರ್, ಸಹ ಕುಲಪತಿ ಎಂ.ಪಿ.ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ನಾಗರಾಜ್ ರೆಡ್ಡಿ, ಕುಲಸಚಿವ ಡಾ। ಸುಶಾಂತ್ ಜೋಶಿ ಇದ್ದರು.