ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಶನಿವಾರ ಸಂಜೆ ಸುರಿದ ಮಳೆಯು ಹಲವು ಅವಾಂತರಕ್ಕೆ ಸಾಕ್ಷಿಯಾಗಿದೆ. ಒಂದು ಕಡೆ ರಸ್ತೆಗಳೆಲ್ಲ ಕೆಸರುಮಯವಾಗಿದ್ದರೆ, ಮತ್ತೊಂದೆಡೆ ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿ ರಾತ್ರಿಯಿಡಿ ತೊಂದರೆ ಅನುಭವಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ 50ಕ್ಕೂ ಅಧಿಕ ಮರಗಳು ಧರೆಗುರುಳಿದರೆ, 150ಕ್ಕೂ ಅಧಿಕ ಮರಗಳಿಗೆ ಹಾನಿಯಾಗಿದೆ. ರಾತ್ರಿಯಿಡಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನತೆ ಹೈರಾಣಾಗಿ ಹೋದರು.ಕಳೆದ ಹಲವು ದಿನಗಳಿಂದ ಬಿಸಿಲಿನಿಂದ ಬಸವಳಿದಿದ್ದ ಹುಬ್ಬಳ್ಳಿ ಜನತೆಗೆ ಶನಿವಾರ ಸುರಿದ ಮಳೆ ತಂಪನ್ನೆರೆಯಿತು. ಶನಿವಾರ ಮಧ್ಯಾಹ್ನ 3 ಗಂಟೆಯ ನಂತರ ಆರಂಭವಾದ ರಭಸದ ಮಳೆಯು 15 ನಿಮಿಷಗಳ ಕಾಲ ಸುರಿದು ನಿಂತಿತು. ಇನ್ನೇನು ಮಳೆ ನಿಂತಿತು ಎಂದು ಸವಾರರು ತಮ್ಮ ಮನೆಗಳಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು. ಆಗ ಮತ್ತೆ ಭಾರಿ ಗಾಳಿ, ಸಿಡಿಲಿನೊಂದಿಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಜನ ಪರದಾಡಿದರು. ರಭಸವಾಗಿ ಬೀಸಿದ ಗಾಳಿಯಿಂದಾಗಿ ನಗರದ ಹಲವು ಕಡೆಗಳಲ್ಲಿ ಬೃಹತ್ ಮರಗಳು ರಸ್ತೆಗಳ ಮೇಲೆಯೇ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದವು.
ಧರೆಗುರುಳಿದ 50ಕ್ಕೂ ಅಧಿಕ ಮರಗಳುಭೀಕರ ಗಾಳಿಯಿಂದಾಗಿ ನಗರದ ಹಲವು ಕಡೆಗಳಲ್ಲಿ 50ಕ್ಕೂ ಅಧಿಕ ಮರಗಳು ಧರೆಗುರುಳಿದರೆ, 150ಕ್ಕೂ ಅಧಿಕ ಮರಗಳಿಗೆ ಹಾನಿಯಾಗಿದೆ. ದುರ್ಗದಬೈಲ್ ಬಳಿ ಗಿಡಮರಗಳ ಟೊಂಗೆಗಳು ರಸ್ತೆಗಳ ಮೇಲೆ ಮಳೆ ನೀರಿನೊಂದಿಗೆ ಹರಿಯುತ್ತಿದ್ದ ವೇಳೆ ಅವುಗಳು ವಾಹನಕ್ಕೆ ಬಡಿದು ಇಬ್ಬರು ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ.
40ಕ್ಕೂ ಅಧಿಕ ಬೈಕ್ ಹಾನಿಇಲ್ಲಿನ ದೇಶಪಾಂಡೆ ನಗರದಲ್ಲಿರುವ ಪಂಚರತ್ನ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ದ್ವಿಚಕ್ರ ವಾಹನಗಳ ಮೇಲೆ ಬಿದ್ದ ಪರಿಣಾಮ 40ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಹಾಗೂ 2 ಕಾರುಗಳು ಜಖಂ ಆಗಿರುವ ಘಟನೆ ನಡೆದಿದೆ. ನೆಲಮಹಡಿಯಲ್ಲಿ 4 ಅಡಿಗೂ ಹೆಚ್ಚು ನೀರು ನಿಂತಿತ್ತು. ಮೂರು ಪಂಪ್‌ಸೆಟ್‌ಗಳಿಂದ ನೀರು ಹೊರಹಾಕಲಾಗುತ್ತಿದ್ದು, ಭಾರಿ ಪ್ರಮಾಣದಲ್ಲಿ ಕೆಸರು ಸಂಗ್ರಹವಾಗಿತ್ತು. ಅಲ್ಲದೇ ಮಳೆ ನೀರೆಲ್ಲ ಅಪಾರ್ಟಮೆಂಟ್‌ನ ಪಾರ್ಕಿಂಗ್‌ಗೆ ನುಗ್ಗಿ ದ್ವಿಚಕ್ರ ವಾಹನ ಹಾಗೂ ಕಾರುಗಳು ಹಾಳಾಗಿವೆ. ಭಾನುವಾರ ಬೆಳಗ್ಗೆ ವಾಹನಗಳ ಮಾಲೀಕರು ಮೆಕ್ಯಾನಿಕ್ ಕರೆಸಿ ವಾಹನಗಳ ದುರಸ್ತಿ ಮಾಡಿಕೊಂಡ ಘಟನೆ ನಡೆಯಿತು. ಇದಲ್ಲದೇ ಹಲವು ವಾಣಿಜ್ಯ ಕಟ್ಟಡಗಳ ಪಾರ್ಕಿಂಗ್ ಸ್ಥಳಗಳಲ್ಲಿ ಚರಂಡಿ ನೀರು ನುಗ್ಗಿ ದ್ವಿಚಕ್ರ ವಾಹನಗಳು ನೀರಿನಲ್ಲಿಯೇ ರಾತ್ರಿಯಿಡಿ ನಿಲ್ಲುವಂತಾಯಿತು.ರಾತ್ರಿಯಿಂದಲೇ ಕಾರ್ಯಾಚರಣೆ:
ಇಲ್ಲಿನ ಮೂರುಸಾವಿರ ಮಠದ ರಸ್ತೆ, ತುಳಜಾಭವಾನಿ ದೇವಸ್ಥಾನ, ಮಹಾವೀರ ಗಲ್ಲಿ, ದಾಜಿಬಾನ್ ಪೇಟದಿಂದ ಮ್ಯಾದರ ಓಣಿಗೆ ಹೋಗುವ ರಸ್ತೆಯಲ್ಲಿ ಅಂಗಡಿ ಹಾಗೂ ಮನೆಗಳಿಗೆ ಚರಂಡಿ ನೀರು ನುಗ್ಗಿ ತೊಂದರೆ ಅನುಭವಿಸಿದ್ದರು. ಇನ್ನು ಇದೇ ರಸ್ತೆಯ ಅಕ್ಕಪಕ್ಕದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ, ತ್ರಿಚಕ್ರ ವಾಹನಗಳು ಚರಂಡಿ ನೀರಿನಲ್ಲಿ ತೇಲಿಕೊಂಡು ಹೋಗಿವೆ. ಕೂಡಲೇ ಎಚ್ಚೆತ್ತ ಪಾಲಿಕೆ ಸಿಬ್ಬಂದಿ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ ಹೂಳು ತುಂಬಿದ್ದ ಒಳಚರಂಡಿಗಳನ್ನು ದುರಸ್ತಿಗೊಳಿಸಿ ಚರಂಡಿ ನೀರೆಲ್ಲ ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿದರು. ಅಲ್ಲದೇ ರಸ್ತೆಯ ಮೇಲೆ ಸಂಗ್ರಹಗೊಂಡಿದ್ದ ಕೆಸರನ್ನೆಲ್ಲ ಪಾಲಿಕೆ ವಾಹನ ತಂದು ತೆರವುಗೊಳಿಸುವ ಕಾರ್ಯ ಭಾನುವಾರ ಸಂಜೆಯ ವರೆಗೆ ನಡೆಯಿತು.ಧಾರಾಕಾರ ಮಳೆ ಸುರಿದು ನಿಲ್ಲುತ್ತಿದ್ದಂತೆ ಪಾಲಿಕೆಗೆ ದೂರುಗಳ ಸುರಿಮಳೆಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದರು. ದಿನದ 24 ಗಂಟೆಗಳ ಕಾಲ ನಿರಂತರವಾಗಿ ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಪಾಲಿಕೆ ಸಿಬ್ಬಂದಿ ಕಳಿಸಿ ಕಸ ತೆರವುಗೊಳಿಸುವ ಕಾರ್ಯ, ಬಂದಾಗಿರುವ ನಾಲೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು. ಭಾನುವಾರ ಬೆಳಗ್ಗೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಳೆಯಿಂದಾಗಿ ಸಮಸ್ಯೆಗಳು ಈಡಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ತೀವ್ರ ಗತಿಯ ಕಾಮಗಾರಿ ಕೈಗೊಂಡು ಸಮಸ್ಯೆ ಪರಿಹರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.
ವಿದ್ಯುತ್ ಕಣ್ಣಾಮುಚ್ಚಾಲೆ:ಮಳೆಯೊಂದಿಗೆ ಬೀಸಿದ ಭಾರಿ ಪ್ರಮಾಣದ ಗಾಳಿಯಿಂದಾಗಿ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳ ಮೇಲೆಯೇ ಬೃಹತ್ ಪ್ರಮಾಣದ ಮರಗಿಡಗಳು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯನ್ನುಂಟು ಮಾಡಿದೆ. ಶನಿವಾರ ರಾತ್ರಿಯೇ 2 ವಿದ್ಯುತ್ ಟ್ರಾನ್ಸಫಾರ್ಮರ್ ಹಾಳಾಗಿದ್ದು, 20ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದಾಗಿ ಹುಬ್ಬಳ್ಳಿಯ ಅರ್ಧಭಾಗದಷ್ಟು ಪ್ರದೇಶಗಳಲ್ಲಿ ರಾತ್ರಿಯಿಡಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 10ಗಂಟೆಯ ನಂತರ ವಿದ್ಯುತ್ ಬಂದರೆ ಇನ್ನು ಕೆಲವು ಪ್ರದೇಶಗಳಲ್ಲಿ ಮಧ್ಯಾಹ್ನ 12ಕ್ಕೆ ಇನ್ನು ಕೆಲವೆಡೆ 2 ಗಂಟೆಯ ನಂತರ ವಿದ್ಯುತ್ ನೀಡಲಾಯಿತು. ಇದರಿಂದಾಗಿ ಜನತೆ ರಾತ್ರಿಯಿಡಿ ಕಗ್ಗತ್ತಲಿನಲ್ಲಿಯೇ ಕಾಲ ಕಳೆಯುವಂತಾಯಿತು.
ನಗರದ ಚನ್ನಪೇಟೆ ಸರ್ಕಾರಿ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ವಿದ್ಯಾನಗರದ ರಾಯಲ್ ಅಪಾರ್ಟ್‌ಮೆಂಟ್‌ನ ನೆಲಮಹಡಿಯಲ್ಲಿ ಸಂಗ್ರಹವಾಗಿದ್ದ ನೀರನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಸಕ್ಕಿಂಗ್ ಯಂತ್ರಗಳ ಸಹಾಯದಿಂದ ಹೊರಹಾಕಿದರು. 4 ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ನಾಲಾಗಳಲ್ಲಿ ತುಂಬಿದ್ದ ಕಸವನ್ನು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಯಿತು.