ಸಾರಾಂಶ
ಕನ್ನಡಪ್ರಭ ವಾರ್ತೆ ಮುನವಳ್ಳಿ: ಪಟ್ಟಣದಲ್ಲಿ ಶನಿವಾರ ಸಂಜೆ ಬಾರಿ ಬಿರುಗಾಳಿ, ಗುಡುಗು ಸಹಿತ ಧಾರಾಕಾರ ಸುರಿದ ಮಳೆಯಿಂದಾಗಿ ಗಾಂಧಿನಗರದ ಹಳೆ ಗೌಟನ್ ಹೊಸ ಗೌಟನ್, ರೇಣುಕಾ ಸಕ್ಕರೆ ಕಾರ್ಖಾನೆಯ ಮುಖ್ಯ ರಸ್ತೆ, ಕಟಕೋಳ ಮುಖ್ಯ ರಸ್ತೆ, ಬಜಾರದಲ್ಲಿ ಗಿಡ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಕಂಬ ಬಿದ್ದು ಮನೆಗಳು ಹಾಗೂ ಕಾರ್ ಜಖಂಗೊಂಡಿವೆ. ಪಂಚಲಿಂಗೇಶ್ವ ರೈತ ಸಂಪರ್ಕ ಕೇದ್ರದ ಗೋದಾಮಿನ ಮೇಲ್ಚಾವಣಿಯ ತಗಡುಗಳು ಬಿರುಗಾಳಿ ಹೊಡೆತಕ್ಕೆ ಹಾರಿ ಹೋಗಿವೆ. ಶೇಖರಣೆ ಮಾಡಿ ಇಡಲಾಗಿದ್ದ ಸುಮಾರು 250 ಟನ್ ಗೊಬ್ಬರ ನೀರುಪಾಲಾಗಿದ್ದು, ಮಳೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ. ವಿದ್ಯುತ್ ಕಂಬ ಹಾಗೂ ಮರಗಳು ಧರೆಗುರುಳಿದ ಪರಿಣಾಮ ಮುನವಳ್ಳಿ ಇಡೀ ಪಟ್ಟಣದಲ್ಲಿ ಶನಿವಾರ ಸಂಜೆಯಿಂದ ವಿದ್ಯುತ್ ಸಂಪರ್ಕ ಅಸ್ತವ್ಯಸ್ಥಗೊಂಡಿದೆ. ಇನ್ನು, ಪಟ್ಟಣ ಬಳಿಯ ಜಮೀನುಗಳಲ್ಲಿ ಬೆಳೆಯಲಾಗಿದ್ದ ಪಪ್ಪಾಯಿ, ಬಾಳೆ, ಮೆಕ್ಕೆಜೋಳ, ಕಬ್ಬು ಇನ್ನು ಬೆಳೆಗಳು ಹಾನಿಗೊಳಗಾಗಿವೆ. ಬಳಿಕ, ಹಾನಿಗೊಳಗಾದ ಸ್ಥಳಗಳಿಗೆ ತಹಶೀಲ್ದಾರ್ ಹಾಗೂ ಶಾಸಕ ವಿಶ್ವಾಸ ವೈದ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಹಾನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.
ಶೀಘ್ರ ಪರಿಹಾರಕ್ಕೆ ಸೂಚನೆ:ಮುನವಳ್ಳಿ ಪಟ್ಟಣದಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಶಾಸಕ ವಿಶ್ವಾಸ ವೈದ್ಯ ಪಟ್ಟಣದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ಥರಿಗೆ ಶೀಘ್ರವಾಗಿ ಸೂಕ್ತ ಪರಿಹಾರ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸೂಚನೆಯನ್ನು ನೀಡಿದರು. ಈ ವೇಳೇ ಪುರಸಭೆ ಮುಖ್ಯಾಧಿಕಾರಿ ಗದ್ದಿಗೌಡರ, ಪುರಸಭೆ ಸದಸ್ಯರಾದ ಸಿ.ಬಿ.ಬಾಳಿ, ಪಂಚು ಬಾರಕೇರ, ಸಲೀಮ ಚುರಿಖಾನ, ಎಪಿಎಂಸಿ ಅಧ್ಯಕ್ಷ ಜಂದ್ರು ಜಂಬ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಬಾಕ್ಸ್‌ಬಾಕ್ಸ್
ಸಿಡಿಲು ಬಡಿದು ಧಗಧಗಿಸಿ ತೆಂಗಿನ ಮರಬೈಲಹೊಂಗಲ: ಪಟ್ಟಣದಲ್ಲಿ ಶನಿವಾರ ಸಂಜೆ ಗುಡುಗು, ಸಿಡಿಲ ಆರ್ಭಟದೊಂದಿಗೆ ಮಳೆ ಸುರಿದಿದ್ದು, ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದಿದೆ. ಕಳೆದಕೆಲವು ದಿನಗಳಿಂದ 39,40,41 ಡಿಗ್ರಿ ಉಷ್ಣಾಂಶದೊಂದಿಗೆ ಬಿಸಿಲಿನ ತಾಪಕ್ಕೆ ಜನರು ಕೂಡ ಕಂಗಾಲಾಗಿ ಹೋಗಿದ್ದರು. ಮಧ್ಯಾಹ್ನದ ಹೊತ್ತು ಮನೆಯಿಂದ ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿತ್ತು.ಶನಿವಾರ ಸಂಜೆ ಸುರಿದ ಮಳೆಗೆ ಭೂಮಿ ತಂಪಾಗಿದ್ದು, ಬಿಸಿಲಿನ ತಾಪದಿಂದ ಹೈರಾಣಾಗಿದ್ದ ಜನರಿಗೆ ಇದೀಗ ಸ್ವಲ್ಪ ನೆಮ್ಮದಿ ಸಿಕ್ಕಂತಾಗಿದೆ. ಇನ್ನು, ಪಟ್ಟಣದ ಮಡಿವಾಳೇಶ್ವರ ಮಠದ ಸಮೀಪದ ಉಡಿಕೇರಿ ಪಿಡಿಒ ಆಸೀಫ ಲತಿಫ ಅವರ ಮನೆ ಹಿಂಭಾಗದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದಿದ್ದು, ಕ್ಷಣಾರ್ಧದಲ್ಲಿಯೇ ಬೆಂಕಿ ಹೊತ್ತಿಕೊಂಡು ತೆಂಗಿನ ಮರ ಧಗಧಗಿಸಿದೆ. ಮರದಲ್ಲಿ ಬೆಂಕಿಯ ಕಿಡಿ ಹಾರುತ್ತಿದ್ದರಿಂದ ಮುಂಜಗ್ರತಾ ಕ್ರಮವಾಗಿ ನೆರೆ ಹೊರೆಯವ ಜನರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅಗ್ನಿ ಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫಲರಾದರು. ಈ ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ.