ಕಾಯಕ, ದಾಸೋಹ ಮಾನವನ ಸಾರ್ಥಕ ಬದುಕಿಗೆ ಕಾರಣ: ಮಹಾದೇವ ಬಸರಕೋಡ

| Published : May 13 2024, 01:02 AM IST / Updated: May 13 2024, 01:03 AM IST

ಕಾಯಕ, ದಾಸೋಹ ಮಾನವನ ಸಾರ್ಥಕ ಬದುಕಿಗೆ ಕಾರಣ: ಮಹಾದೇವ ಬಸರಕೋಡ
Share this Article
  • FB
  • TW
  • Linkdin
  • Email

ಸಾರಾಂಶ

ಹನ್ನೆರಡನೇ ಶತಮಾನದಲ್ಲಿ ಸಮಾನತೆಯ ಪರಿಕಲ್ಷಪನೆಯೇ ಇಲ್ಲದಂಥ ಸಂದರ್ಭದಲ್ಲಿ ಬಸವಣ್ಣನವರು ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ ವಿಶ್ವಗುರು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಹೇಳಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ಹನ್ನೆರಡನೇ ಶತಮಾನದಲ್ಲಿ ಸಮಾನತೆಯ ಪರಿಕಲ್ಷಪನೆಯೇ ಇಲ್ಲದಂಥ ಸಂದರ್ಭದಲ್ಲಿ ಬಸವಣ್ಣನವರು ಬಹುದೊಡ್ಡ ಕ್ರಾಂತಿಯನ್ನೇ ಮಾಡಿ, ಮಾನವೀಯತೆಯ ಹಿನ್ನೆಲೆಯಲ್ಲಿ ಸಮಾನತೆಯ ದಿಟ್ಟತನದ ಹೆಜ್ಜೆ ಇಟ್ಟ ವಿಶ್ವಗುರು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಹೇಳಿದರು.

ಪಟ್ಟಣದ ಶ್ರೀ ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಕಾಯಕ ಮತ್ತು ದಾಸೋಹ ವಿಷಯ ಕುರಿತು ಮಾತನಾಡಿ, ಸಮಾನತೆಗಾಗಿ ತನ್ನ ಬದುಕನ್ನೇ ಸಮರ್ಪಿಸಿಕೊಂಡರು ಬಸವಣ್ಣನವರು. 12ನೇ ಶತಮಾನದಲ್ಲಿ ಬಸವಣ್ಣವರ ನೇತೃತ್ವದಲ್ಲಿ ವಚನ ಸಾಹಿತ್ಯ, ವಚನ ಚಳವಳಿ, ವಚನ ಕ್ರಾಂತಿ ಹಾಗೂ ಸಮಾಜಮುಖಿ ಕಾರ್ಯಗಳು ವಿಶ್ವದ ಗಮನ ಸೆಳೆದಿದ್ದವು. ಸನಾತನ, ಬೌದ್ಧ, ಜೈನ ಧರ್ಮಗಳು ಮನುಷ್ಯನ ಒಳಿತಿಗಾಗಿ ಹುಟ್ಟಿಕೊಂಡರೂ ವೈಯುಕ್ತಿಕ ಬದುಕಿಗೆ ಹೆಚ್ಚು ಒತ್ತು ನೀಡಿದ್ದವು. ಆದರೆ, ಬಸವಣ್ಣವರು ಹುಟ್ಟುಹಾಕಿದ ಶರಣಧರ್ಮ ಸಮಾನತೆಯ ಕ್ರಾಂತಿ ಮಾಡಿತು. ಬಹುಮುಖ್ಯವಾದುದು ಕಾಯಕ ಹಾಗೂ ದಾಸೋಹಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಆ ಮೂಲಕ ಕೆಳಸ್ತರದ ವ್ಯಕ್ತಿಗಳನ್ನೂ ಸಮಾನತೆಯ ಹಾದಿಯಲ್ಲಿ ತರಲಾಗಿತ್ತು. ಸಮರ್ಪಣೆಯ ದಾಸೋಹ, ನಿಷ್ಠೆಯ ಕಾಯಕವೇ ಶ್ರೇಷ್ಠವೆಂಧು ಸಾರಿದ ಬಸವಣ್ಣನವರು ಶಾಶ್ವತ ಶರಣ ಧರ್ಮ ನೀಡಿದವರು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಹುನಗುಂದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಮಾತನಾಡಿ, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನವರನ್ನು ನೇಮಿಸಿಕೊಳ್ಳುವುದರ ಮೂಲಕ, ವೈಚಾರಿಕತೆ ಪ್ರಜ್ಞೆ, ಮೂಢನಂಬಿಕೆ ತೊರೆಯುವ ಮೂಲಕ ಸರ್ವಸಮನತೆಯನ್ನು ಬಸವಣ್ಣನವರು ಹಾಕಿದ ಮೇಲ್ಪಂಕ್ತಿ, ಇಂದು ಅನೇಕ ಶರಣರು, ದಾರ್ಶನಿಕರು,ಸಾಧು ಸಂತರು ನೀಡಿದ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ, ಜೀವನ ಶೈಲಿ ಸರಳತೆಯಿಂದ ನಡೆಯುತ್ತದೆ. ಗುರುಲಿಂಗ ಜಂಗಮರನ್ನೂ ಮರೆಸುವಂತೆ ಮಾಡುವುದೇ ನಿಜವಾದ ಕಾಯಕ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ವಿಜಯಪುರದ ಪ್ರಶಾಂತದೇವರು, ಬಸವಣ್ಣನವರು ಸ್ತ್ರೀ ಸ್ವಾತಂತ್ರ್ಯಕ್ಕೆ ಒತ್ತು ನೀಡಿದವರು. ಶರಣರ ವಚನಗಳನ್ನು ಅಳವಡಿಸಿಕೊಂಡಾಗ ಬದುಕಿನ ರೀತಿ-ನೀತಿಗಳು ಬದಲಾಗಿ ಶಾಂತಿ, ಸೌಹಾರ್ದತೆಗಳು ನೆಲೆಗೊಳ್ಳುತ್ತವೆ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಶಂಕರರಾಜೇಂದ್ರ ಶ್ರೀಗಳು, ಪ್ರತಿಯೊಬ್ಬರು ಲಿಂಗದೀಕ್ಷೆ ಪಡೆಯುವ ಮೂಲಕ, ಲಿಂಗಾಯತ ಧರ್ಮ ಪಾಲಿಸಬೇಕು. ಮಠಮಾನ್ಯಗಳನ್ನು ನಿರಂತರ ಕ್ರಿಯಾಶೀಲವಾಗಿರಬೇಕು. ಶ್ರೀಮಠದಲ್ಲಿ ಪ್ರತಿ ಹುಣ್ಣಿಮೆಯಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದ ಎಂದರು. ಅತಿಥಿಗಳಾಗಿ ಕಸಾಪ ವಲಯ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷ ಅಜಮೀರ್‌ ಮುಲ್ಲಾ ಮಾತನಾಡಿದರು. ಸಂಗಮೇಶ್ವರ ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಎನ್. ವಂದಾಲ, ಉಪ ಪ್ರಾಚಾರ್ಯ ಆರ್.ಜಿ. ಸನ್ನಿ ಉಪಸ್ಥಿತರಿದ್ದರು. ಅಕ್ಕನ ಬಳಗ ಹಾಗೂ ಶರಣರು ಪಾಲ್ಗೂಂಡಿದ್ದರು. ವಿದ್ಯಾರ್ಥಿನಿಯರಿಂದ ವಚನ ಗಾಯನ, ಶಿಕ್ಷಕ ಶ್ರೀಕಾಂತ ಹೊಸಮನಿ ನಿರೂಪಿಸಿದರು. ಶಿಕ್ಷಕ ಕಂಬಾಳಿಮಠ ಸ್ವಾಗತಿಸಿದರು. ಎಂ.ಎನ್. ವಂದಾಲ ವಂದಿಸಿದರು.ಲಿಂಗಾಯಿತ ಮಠಗಳೇ ಶೈಕ್ಷಣಿಕ ಪ್ರಗತಿಗೇ ಕಾರಣ. ಲಿಂಗ ಧರಿಸಿದವರೆಲ್ಲರೂ ಲಿಂಗಾಯಿತರೇ, ಈ ಭಾಗದಲ್ಲಿ ಲಿಂಗೈಕ್ಯ ರಾಜಗುರು ಪ್ರಭುರಾಜೇಂದ್ರ ಶ್ರೀಗಳ ಶೈಕ್ಷಣಿಕ ಕ್ರಾಂತಿಯೇ ಇಂದು ಅನೇಕ ಕುಟುಂಬಗಳ ಆಸರೆಗೆ ಕಾರಣವಾಗಿವೆ. ಮಾಲಿನ್ಯಗೊಂಡ ಮನಸ್ಸು, ಭಾವನೆಗಳಿಗೆ ಶರಣರ ವಚನಗಳು ಸ್ಫೂರ್ತಿಯಾಗಿವೆ.

- ಮಲ್ಲಿಕಾರ್ಜುನ ಸಜ್ಜನ ಕಸಾಪ ಹುನಗುಂದ ತಾಲೂಕು ಅಧ್ಯಕ್ಷ