ಪರಿಸರ ಸಂರಕ್ಷಿಸದಿದ್ದರೆ ಜೀವರಾಶಿಗೆ ಅಪಾಯ

| Published : Nov 11 2024, 12:49 AM IST

ಸಾರಾಂಶ

ಪರಿಸರ ಉಳಿಸಿದರೆ ಮಾತ್ರ ಅಂತರ್ಜಲ, ಶುದ್ಧ ಆಮ್ಲಜನಕ ಎಲ್ಲವೂ ಸಿಗಲಿದ್ದು, ಈ ನಿಟ್ಟಿನಲ್ಲಿ ಮರ, ಗಿಡಗಳನ್ನು ಹೆಚ್ಚು ಬೆಳೆಸುವ ಮೂಲಕ ಮಳೆ ನೀರನ್ನು ಸಮರ್ಪಕವಾಗಿ ಬಳಸುವಲ್ಲಿ ಎಲ್ಲರೂ ಗಮನಹರಿಸಬೇಕು. ಪರಿಸರ ನಮ್ಮ ಜೀವನಕ್ಕೆ ಎಲ್ಲವನ್ನೂ ಕೊಟ್ಟಿದೆ, ಆದರೆ ನಾವು ಪರಿಸರಕ್ಕೆ ಏನನ್ನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಂಡಾಗ ನಿಜ ಅರಿವಾಗಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪರಿಸರ ಸಂರಕ್ಷ ಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರೂ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಶಿಲ್ಪ.ಬಿ. ಹೇಳಿದರು.

ತಾಲೂಕಿನ ಮಂಡಿಕಲ್ಲು ಹೋಬಳಿಯ ಜೀಗಾನಹಳ್ಳಿ ಹಾಗೂ ರಾಮಪಟ್ಟಣ ಗ್ರಾಮದ ರಸ್ತೆ ಬದಿಯಲ್ಲಿ ಗಿಡನೆಡುವ ಮೂಲಕ ಕಾನೂನು ಅರಿವು- ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರದ ಬಗ್ಗೆ ನಿರ್ಲಕ್ಷ್ಯ

ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತ ಆತಂಕ ಸೃಷ್ಟಿ ಮಾಡುತ್ತಿದೆ. ಇದಕ್ಕೆ ಪರಿಸರದ ಮೇಲಿನ ಆಕ್ರಮಣವೇ ಕಾರಣ. ಪರಿಸರ ಉಳಿಸಿ ಬೆಳೆಸುವಲ್ಲಿ ಎಲ್ಲರಲ್ಲೂ ಆಸಕ್ತಿಗಿಂತ ನಿರ್ಲಕ್ಷವೇ ಹೆಚ್ಚಿದ್ದು, ಈ ಬೆಳವಣಿಗೆ ಹೀಗೇ ಮುಂದುವರೆದರೆ ಮುಂದೊಂದು ದಿನ ಭೂಮಿಯ ಮೇಲೆ ಜೀವರಾಶಿಗಳ ಉಳಿವು ಇಲ್ಲದೇ ಹೋಗಲಿದೆ ಎಂದರು.

ತಹಸೀಲ್ದಾರ್‌ ಎಂ.ಅನಿಲ್ ಮಾತನಾಡಿ, ಪರಿಸರ ಉಳಿಸಿದರೆ ಮಾತ್ರ ಅಂತರ್ಜಲ, ಶುದ್ಧ ಆಮ್ಲಜನಕ ಎಲ್ಲವೂ ಸಿಗಲಿದ್ದು, ಈ ನಿಟ್ಟಿನಲ್ಲಿ ಮರ, ಗಿಡಗಳನ್ನು ಹೆಚ್ಚು ಬೆಳೆಸುವ ಮೂಲಕ ಮಳೆ ನೀರನ್ನು ಸಮರ್ಪಕವಾಗಿ ಬಳಸುವಲ್ಲಿ ಎಲ್ಲರೂ ಗಮನಹರಿಸಬೇಕು. ಪರಿಸರ ನಮ್ಮ ಜೀವನಕ್ಕೆ ಎಲ್ಲವನ್ನೂ ಕೊಟ್ಟಿದೆ, ಆದರೆ ನಾವು ಪರಿಸರಕ್ಕೆ ಏನನ್ನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಂಡಾಗ ನಿಜ ಅರಿವಾಗಲಿದೆ. ಪರಿಸರದ ಮೇಲಿನ ದಾಳಿಯಿಂದ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ ಎಂದರು.

ಗುಡಿಬಂಡೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜಶೇಖರ್, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.