ಎಲ್ಲೆಡೆ ಹಕ್ಕಿಜ್ವರದ ಭೀತಿ; ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮದಲ್ಲಿಲ್ಲ ಮುನ್ನೆಚ್ಚರಿಕೆ..!

| Published : Mar 13 2025, 12:46 AM IST

ಎಲ್ಲೆಡೆ ಹಕ್ಕಿಜ್ವರದ ಭೀತಿ; ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮದಲ್ಲಿಲ್ಲ ಮುನ್ನೆಚ್ಚರಿಕೆ..!
Share this Article
  • FB
  • TW
  • Linkdin
  • Email

ಸಾರಾಂಶ

ಹಕ್ಕಿಜ್ವರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಹುತೇಕ ಕೋಳಿ ಫಾರಂಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ವಹಿಸುವಂತೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಆದರೆ, ಮದ್ದೂರು ತಾಲೂಕಿನಲ್ಲಿರುವ ವಿಶ್ವ ವಿಖ್ಯಾತಿ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮದತ್ತ ಇದುವರೆಗೂ ಯಾವುದೇ ಅಧಿಕಾರಿಗಳು ತಿರುಗಿ ನೋಡದೆ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಬಿ.ಎಸ್. ಸುನೀಲ್

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಎಲ್ಲೆಡೆ ಹಕ್ಕಿಜ್ವರದ ಭೀತಿ ಎದುರಾಗಿದ್ದರೂ ವಿಶ್ವವಿಖ್ಯಾತಿ ಕೊಕ್ಕರೆ ಬೆಳ್ಳೂರಿನ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಅಧಿಕಾರಿಗಳು ಮೌನವಾಗಿರುವುದಕ್ಕೆ ಸ್ಥಳೀಯರು ಹಾಗೂ ಪಕ್ಷಿಪ್ರಿಯಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಹಕ್ಕಿಜ್ವರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಹುತೇಕ ಕೋಳಿ ಫಾರಂಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ವಹಿಸುವಂತೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಆದರೆ, ಮದ್ದೂರು ತಾಲೂಕಿನಲ್ಲಿರುವ ವಿಶ್ವ ವಿಖ್ಯಾತಿ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮದತ್ತ ಇದುವರೆಗೂ ಯಾವುದೇ ಅಧಿಕಾರಿಗಳು ತಿರುಗಿ ನೋಡದೆ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನತಿಟ್ಟು ಮತ್ತು ಮದ್ದೂರಿನ ಕೊಕ್ಕರೆ ಬೆಳ್ಳೂರು ಎರಡು ಪ್ರಮುಖ ಪಕ್ಷಿಧಾಮಗಳಿವೆ. ಹಕ್ಕಿ ಜ್ವರದ ಭೀತಿ ಎದುರಾಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಪಕ್ಷಿಧಾಮಕ್ಕೆ ಆಗಮಿಸಿ ಮುನ್ನಚ್ಚರಿಕೆ ಕ್ರಮ ವಹಿಸುವ ಸೂಚನೆಗಳನ್ನು ನೀಡಿಲ್ಲ.

ದೇಶ ವಿದೇಶಗಳಿಂದ ಸಾವಿರಾರು ಕೊಕ್ಕರೆಗಳು ಸಂತಾನೋತ್ಪತ್ತಿಗಾಗಿ ಬರುವುದರಿಂದ ಕೊಕ್ಕರೆ ಬೆಳ್ಳೂರು ಎಂದು ಗ್ರಾಮ ಪ್ರಸಿದ್ಧಿ ಪಡೆದಿದೆ. ಫೆಲಿಕಾನ್, ಸ್ಟಾರ್ಕ್ , ಸ್ಪಾಟ್-ಬಿಲ್ಡ್ ಸೇರಿದಂತೆ ಹಲವು ಜಾತಿಯ ಕೊಕ್ಕರೆಗಳು ಇಲ್ಲಿಗೆ ಆಗಮಿಸುತ್ತವೆ. ಫೆಲಿಕಾನ್ ಕೊಕ್ಕರೆಗಳು ಅಕ್ಟೋಬರ್ ತಿಂಗಳಿನಲ್ಲಿ ಆಗಮಿಸಿದರೆ, ಉಳಿದ ಕೊಕ್ಕರೆಗಳು ಜನವರಿಗೆ ಆಗಮಿಸಿ, ಜೂನ್ ತಿಂಗಳ ತನಕ ಕೊಕ್ಕರೆ ಬೆಳ್ಳೂರು ಹೊಂದಿಕೊಂಡಂತೆ ಇರುವ ಶಿಂಷನದಿ, ಸೂಳೆಕೆರೆ ಸೇರಿದಂತೆ ಹಲವು ಕೆರೆಗಳಲ್ಲಿ ವಿಹರಿಸುತ್ತ ಸಂತೋನೋತ್ಪತ್ತಿಯಲ್ಲಿ ತೋಡಗುತ್ತವೆ.

ಕಳೆದ ನಾಲ್ಕೈದು ವರ್ಷಗಳಿಂದ ಸುಮಾರು 200ಕ್ಕೂಹೆಚ್ಚು ಫೆಲಿಕಾನ್ ಕೊಕ್ಕರೆಗಳು ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿವೆ. ವಿವಿಧ ಪರೀಕ್ಷೆಗಳ ನಂತರ ಕೊಕ್ಕರೆಗಳ ಸಾವಿಗೆ ಜಂತುಹುಳು ಕಾರಣ ಎಂದು ವೈದ್ಯರು ಉತ್ತರ ಕಂಡುಕೊಂಡಿದ್ದಾರೆ. ಆದರೆ, ಕಳೆದ ಒಂದು ವರ್ಷದಿಂದ ಕೊಕ್ಕರೆಗಳ ಸಾವಿನ ಪ್ರಮಾಣ ಕಡಿಮೆಯಾಗಿದೆ.

ಫೆಲಿಕಾನ್ ಹೊರತುಪಡಿಸಿ ಇತರೆ ಪಕ್ಷಿಗಳಿಗೆ ಯಾವುದೇ ಆತಂಕ ಎದುರಾಗಿಲ್ಲ. ಈಗ ಎಲ್ಲೆಡೆ ಹಕ್ಕಿಜ್ವರ/ ಕೋಳಿ ಜ್ವರದ ಭೀತಿ ಶುರುವಾಗಿದೆ. ಈ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಬರುವ ಪಕ್ಷಿಗಳ ತಾಣಗಳ ಮೇಲೆ ನಿಗಾ ಇಡಬೇಕಾದುದು ಸರಕಾರ ಮತ್ತು ಅಧಿಕಾರಿಗಳ ಕರ್ತವ್ಯ. ಜಿಲ್ಲಾಡಳಿತ, ಆರೋಗ್ಯ ಮತ್ತು ಅರಣ್ಯ ಇಲಾಖೆ ಏನು ಮಾಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಈಗಾಗಲೇ 2 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಆಗಮಿಸಿವೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ವಲಸೆ ಹಕ್ಕಿಗಳಿಂದ ಹಕ್ಕಿಜ್ವರ ಹರಡದಂತೆ ಅಗತ್ಯ ಕ್ರಮ ವಹಿಸುಬೇಕು ಎಂದು ಗ್ರಾಮದ ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಲಿಂಗೇಗೌಡ ಹಾಗೂ ಸ್ಥಳೀಯರ ಆಗ್ರಹವಾಗಿದೆ. ಹಕ್ಕಿಜ್ವರದ ಶಂಕೆ ಎಲ್ಲೆಡೆ ಕೇಳಿ ಬರುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಈ ಬಗ್ಗೆ ಮಾಹಿತಿ ಕೇಳಿದರೆ ಸಮರ್ಪಕ ಉತ್ತರ ನೀಡಿಲ್ಲ. ದೇಶ-ವಿದೇಶಗಳಿಂದ ಸಾವಿರಾರು ಪಕ್ಷಿಗಳು ಸಂತಾನೋತ್ಪತ್ತಿಗೆ ಆಗಮಿಸುತ್ತಿವೆ. ಹಕ್ಕಿಜ್ವರಿಂದ ಇಲ್ಲಿನ ಪಕ್ಷಿಗಳಿಗೆ ಹಾನಿಯಾದರೇ ಯಾರು ಹೊಣೆ?

- ಲಿಂಗೇಗೌಡ, ಅಧ್ಯಕ್ಷ, ಹೆಜ್ಜಾರ್ಲೆ ಬಳಗ, ಕೊಕ್ಕರೆಬೆಳ್ಳೂರು

ಕೊಕ್ಕರೆಬೆಳ್ಳೂರಿನಲ್ಲಿ ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಿಲ್ಲ. ಈ ಬಗ್ಗೆ ಪಶು ಇಲಾಖೆ ವೈದ್ಯರ ಬಳಿ ಮಾಹಿತಿ ಪಡೆಯಲಾಗಿದೆ. ಹಕ್ಕಿಜ್ವರದ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ.

- ಎನ್.ಎಸ್. ರಾಜೇಶ್ವರಿ, ವಲಯ ಅರಣ್ಯಧಿಕಾರಿ, ವನ್ಯಜೀವಿ ವಿಭಾಗ(ಅರಣ್ಯ ಇಲಾಖೆ), ಮೇಲುಕೋಟೆಹಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲಿ ಮುನ್ನೆಚ್ಚರಿ ಕ್ರಮ ವಹಿಸಲು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಪಕ್ಷಿಧಾಮಕ್ಕೆ ರೋಗ ನಿರೋಧಕ ಔಷಧ ಸಿಂಪಡಿಸಲು ತಿಳಿಸಲಾಗಿದೆ. ಹಕ್ಕಿಗಳ ಹಿಕ್ಕೆಯನ್ನು ಪ್ರಯೋಗಾಲಕ್ಕೆ ಕಳುಹಿಸಲು ಸಹ ಸಿದ್ಧತೆ ಕೈಗೊಳ್ಳಲಾಗಿದೆ.

- ಡಾ.ಟಿ.ಎಚ್.ಗೋವಿಂದ, ಸಹಾಯಕ ನಿರ್ದೇಶಕರು, ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮದ್ದೂರು