ರಾಮನಗರ: ಜಿಲ್ಲೆಯಲ್ಲಿ ಜನನ-ಮರಣ ನೋಂದಣಿಯನ್ನು ಶೇ.100ರಷ್ಟು ಸಾಧಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನನ ಮರಣ ನೋಂದಣಿ ಕುರಿತು ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನನ, ಮರಣ ಘಟನೆಗಳನ್ನು ಘಟಿಸಿದ 21 ದಿನಗಳೊಳಗಾಗಿ ವಿಳಂಬಕ್ಕೆ ಆಸ್ಪದವಿಲ್ಲದಂತೆ ನೋಂದಾಯಿಸಿಕೊಳ್ಳಲು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ 2024ರ ಸಾಲಿನಲ್ಲಿ 9,493 ಜನನ ಘಟನೆಗಳು 10,486 ಮರಣ ಘಟನೆಗಳು 2025 ಸಾಲಿನಲ್ಲಿ 10,207 ಜನನ ಘಟನೆಗಳು, 10,514 ಮರಣ ಘಟನೆಗಳು ಹಾಗೂ 2026ರ ಜನವರಿಯಿಂದ ಏಪ್ರಿಲ್ ಮಾಹೆಯವರೆಗೆ 3,153 ಜನನ ಘಟನೆಗಳು, 3,393 ಮರಣ ಘಟನೆಗಳಾಗಿವೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುನೀಲ್ ಕುಮಾರ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 2025ನೇ ಸಾಲಿನಲ್ಲಿ 1,722 ಹಾಗೂ 2026 ಜನವರಿಯಿಂದ ಮಾರ್ಚ್ ವರೆಗೆ 312 ಜನನ ಘಟನೆಗಳು ತಡವಾಗಿ ನೋಂದಣಿಯಾಗಿದೆ. 2025ನೇ ಸಾಲಿನಲ್ಲಿ 3,378 ಹಾಗೂ 2026 ಜನವರಿಯಿಂದ ಮಾರ್ಚ್ ವರೆಗೂ 674 ಮರಣ ಘಟನೆಗಳು ತಡವಾಗಿ ನೋಂದಣಿ ಆಗಿವೆ. ಜನನ-ಮರಣ ಘಟನೆಗಳು ತಡವಾಗಿ ನೋಂದಣಿಯಾಗದಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮ ಲೆಕ್ಕಾಧಿಕಾರಿಗಳು, ಸಾಂಖಿಕ ನಿರೀಕ್ಷಕರು ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸರ್ಕಾರಿ ಆಸ್ಪತ್ರೆಗಳು/ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ತಮ್ಮ ಆಸ್ಪತ್ರೆಗಳಲ್ಲಿ ಘಟಿಸುವ ಜನನ, ಮರಣ ಘಟನೆಗಳನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಅಗತ್ಯ ಕ್ರಮವಹಿಸಬೇಕು, ಈ ಸಂದರ್ಭದಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕು, ಜಿಲ್ಲೆಯ ಎಲ್ಲಾ ತಹಶೀಲ್ದಾರರು ಜನನ-ಮರಣ ಘಟನೆಗಳ ನೋಂದಣಿಯ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸುವಂತೆ ಚಂದ್ರಯ್ಯ ಸೂಚನೆ ನೀಡಿದರು.


ಸಭೆಯಲ್ಲಿ ಮಾಗಡಿ ತಾಲೂಕು ಯೋಜನಾಧಿಕಾರಿ ವೆಂಕಟರಾಮು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯ ಸಹಾಯಕ ನಿರ್ದೇಶಕರಾದ ಮಹೇಶ್, ಕಾವ್ಯ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು.

6ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಚಂದ್ರಯ್ಯರವರ ಅಧ್ಯಕ್ಷತೆಯಲ್ಲಿ ಜನನ ಮರಣ ನೋಂದಣಿ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಯಿತು.