ಮಾನವ ಕುಲದ ಉದ್ದಾರಕ್ಕೆ ಶ್ರಮಿಸಿದ ಮಹನೀಯರ ಜಯಂತಿಗಳು ಇಂದು ಜಾತಿ ಜಯಂತಿಗಳಾಗಿ ಪರಿವರ್ತನೆಯಾಗಿವೆ. ಇದೊಂದು ಸಾಮಾಜಿಕ ದುರಂತ. ನಾಡಿನ ಮಹನೀಯರು, ದಾರ್ಶನಿಕರು ಮತ್ತು ತತ್ವಜ್ಞಾನಿಗಳನ್ನು ಜಾತಿ ಚೌಕಟ್ಟಿನಿಂದ ಹೊರತರುವ ಕೆಲವಾಗಬೇಕಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಹನೀಯರ ಜಯಂತಿಗಳು ಜಾತಿಯ ಜಯಂತಿಗಳಾಗಿದ್ದು, ಎಲ್ಲಾ ಸಮುದಾಯದವರು ಸೇರಿ ಹಬ್ಬದಂತೆ ಆಚರಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.ಪಟ್ಟಣದ ಕೆ.ಪಿ.ಎಸ್.ಶಾಲೆ ಆವರಣದಲ್ಲಿ ತಾಲೂಕು ಆಡಳಿತ, ತಾಪಂ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವ ಕುಲದ ಉದ್ದಾರಕ್ಕೆ ಶ್ರಮಿಸಿದ ಮಹನೀಯರ ಜಯಂತಿಗಳು ಇಂದು ಜಾತಿ ಜಯಂತಿಗಳಾಗಿ ಪರಿವರ್ತನೆಯಾಗಿವೆ. ಇದೊಂದು ಸಾಮಾಜಿಕ ದುರಂತ. ನಾಡಿನ ಮಹನೀಯರು, ದಾರ್ಶನಿಕರು ಮತ್ತು ತತ್ವಜ್ಞಾನಿಗಳನ್ನು ಜಾತಿ ಚೌಕಟ್ಟಿನಿಂದ ಹೊರತರುವ ಕೆಲವಾಗಬೇಕಾಗಿದೆ ಎಂದರು.ದೇವರನ್ನು ಭಕ್ತಿಯಿಂದ ಪೂಜಿಸುವವರಿಗಿಂತಲೂ ಭಯದಿಂದ ಪೂಜಿಸುವವರೇ ಹೆಚ್ಚು. ಅದೇ ರೀತಿ ಮಹನೀಯರ ಜಯಂತಿಗಳಿಗೆ ನಿಷ್ಠೆಯಿಂದ ಭಾಗವಹಿಸುವವರಿಗಿಂತಲೂ ತೋರಿಕೆಗೆ ಬರುವವರೇ ಹೆಚ್ಚಿದ್ದಾರೆ. ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಸರ್ವ ಸಮಾಜಗಳು ಸಹಬಾಳ್ವೆಯ ಬದುಕನ್ನು ಅನುಸರಿಸಬೇಕಾಗಿದೆ ಎಂದು ಸಲಹೆ ನೀಡಿದರು.
ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಹಿಂದಿನ ಸರ್ಕಾರದಲ್ಲಿ .54 ಲಕ್ಷ ರು ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದ್ದು, ಇದಕ್ಕೆ ಪ್ರಾರಂಭಿಕ ಹಂತದಲ್ಲಿ 45 ಲಕ್ಷರೂ ಅನುದಾನ ಬಿಡುಗಡೆಯಾಗಿತ್ತು. ಅನುದಾನದ ಕೊರತೆಯಿಂದ ನಲುಗುತ್ತಿದ್ದ ವಾಲ್ಮೀಕಿ ಭವನ ನಿರ್ಮಾಣಕ್ಕೆ ನಾನು ಶ್ರಮವಹಿಸಿ 95 ಲಕ್ಷ ರು. ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದರು.ಕಾಮಗಾರಿ ಪೂರ್ಣಗೊಳ್ಳಲು 3 ಕೋಟಿ ಅನುದಾನದ ಅಗತ್ಯವಿದ್ದು ಹೆಚ್ಚುವರಿ ಅನುದಾನಕ್ಕೆ ಸರ್ಕಾರದ ಗಮನ ಸೆಳೆದಿದ್ದೇನೆ. ವಾಲ್ಮೀಕಿ ನಿಗಮ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ದಿ ನಿಗಮದ ಮೂಲಕ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಕೆಲಸವನ್ನು ಆಯಾ ಸಮುದಾಯದ ಮುಖಂಡರು ಮಾಡುವಂತೆ ಮನವಿ ಮಾಡಿದರು.
ಚನ್ನಪಟ್ಟಣ ತಾಲೂಕು ಸಾರ್ವಜನಿಕ ಆಸ್ಪತ್ರೆ ದಂತ ವೈದ್ಯೆ ಡಾ.ಡಿ.ಆರ್.ಸುಗುಣ ಮಾತನಾಡಿ, ವಾಲ್ಮೀಕಿ ಕೇವಲ ಕವಿಯಲ್ಲ, ಒಬ್ಬ ಸಮಾಜ ಸುಧಾರಕ. ಶ್ರೀರಾಮನಂತಹ ಆದರ್ಶ ಪುರುಷನನ್ನು ನಮ್ಮ ಬದುಕಿನ ಆದರ್ಶದ ಪಾತ್ರವಾಗಿ ಸೃಷ್ಟಿಸಿದ್ದಾನೆ ಎಂದು ಶ್ಲಾಘಿಸಿದರು.ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಅವರು ಮಹರ್ಷಿ ವಾಲ್ಮೀಕಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದದರು. ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಎ.ಬಿ.ಕುಮಾರ್, ದಿಶಾ ಸಮಿತಿ ಸದಸ್ಯ ನರಸನಾಯಕ್, ಜೆಡಿಎಸ್ ರೈತಮೋರ್ಚಾ ಘಟಕದ ಅಧ್ಯಕ್ಷ ಹುಲ್ಲೇಗೌಡ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಜನಾಯಕ್, ಜಿಪಂ ಮಾಜಿ ಉಪಾಧ್ಯಕ್ಷೆ ಗಾಯತ್ರಿ, ಟಿಎಪಿಸಿಎಂಎಸ್ ನಿರ್ದೇಶಕ ಕುರುಬರಹಳ್ಳಿ ನಾಗೇಶ್, ಮುಖಂಡರಾದ ಪೂವನಹಳ್ಳಿ ರೇವಣ್ಣ, ಶಿವಣ್ಣ, ಉಪನ್ಯಾಸಕ ಧನಂಜಯ, ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ಇಒ ಕೆ.ಸುಷ್ಮಾ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಸಮಾಜ ಕಲ್ಯಾಣ ಇಲಖೆಯ ಸಹಾಯಕ ನಿರ್ದೇಶಕ ಎಸ್.ಎಂ. ಅಶೋಕ್ ಕುಮಾರ್ ಸೇರಿದಂತೆ ಹಲವರು ಇದ್ದರು.