ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪೂಜ್ಯರು ಸಮಾಜದ ಉನ್ನತಿಗೆ ಹಲವಾರು ಸ್ಥರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಸಕೋಟೆ
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ 76ನೇ ವರ್ಷದ ವರ್ಧಂತಿ ದಿನದ ಪ್ರಯುಕ್ತ ನಗರದ ಇತಿಹಾಸ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಹೊಸಕೋಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಸೇವಾ ಬಳಗದ ವತಿಯಿಂದ ವಿಶೇಷ ಪೂಜೆ ಕಾರ್ಯಕ್ರಮ ನಡೆಸಲಾಯಿತು.
ಧರ್ಮಸ್ಥಳ ಸೇವಾ ಬಳಗದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಪೂಜ್ಯ ಖಾವಂದರು ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ದೇಶಾದ್ಯಂತ ಮಾಡುತ್ತಿದ್ದು, ಅವರಿಗೆ ಸೇವೆ ಮಾಡುವ ಶಕ್ತಿಯನ್ನು ಭಗವಂತ ಮತ್ತಷ್ಟು ಕರುಣಿಸಲಿ. ಹಾಗೂ ಅವರ ಸೇವಾ ಕಾರ್ಯ ವಿಶ್ವ ವಿಖ್ಯಾತಿಯಾಗಲಿ ಎಂದು ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪೂಜಾ ಕಾರ್ಯವನ್ನು ಪೂಜ್ಯರ ಅಭಿಮಾನಿಗಳು, ಶ್ರೀ ಕ್ಷೇತ್ರದ ಭಕ್ತರಾಗಿ ಹಮ್ಮಿಕೊಂಡಿದ್ದೇವೆ ಎಂದು ಆಶಿಸಿದರು.ಧರ್ಮಸ್ಥಳ ಸೇವಾ ಬಳಗದ ಖಜಾಂಚಿ ಯನಗುಂಟೆ ಆನಂದ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪೂಜ್ಯರು ಸಮಾಜದ ಉನ್ನತಿಗೆ ಹಲವಾರು ಸ್ಥರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ಮಹಿಳಾ ಸಬಲೀಕರಣ, ಕೃಷಿ, ಆರೋಗ್ಯ, ಶಿಕ್ಷಣ ಸೇರಿದಂತೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಿರುವ ಸೇವೆಗಳನ್ನು ಸರ್ಕಾರಕ್ಕೆ ಪರ‍್ಯಾಯವಾಗಿ ಮಾಡುತ್ತಿದ್ದಾರೆ. ಆದ್ದರಿಂದ ಅವರ ಸೇವಾ ಶಕ್ತಿ ನಿರಂತರವಾಗಿ ಮುಂದುವರಿಯಲಿ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹರೀಶ್, ಧರ್ಮಸ್ಥಳ ಸೇವಾ ಬಳಗದ ಕಾರ್ಯದರ್ಶಿ ಸೋಮಶೇಖರ್, ಸದಸ್ಯರಾದ ರಾಜಣ್ಣ, ನಟರಾಜ್, ರಾಮಾಂಜಿ, ಚಿಕ್ಕಈರಣ್ಣ ಸ್ವಾಮಿ, ಮಧುಸುಧನ್, ಮನೋಹರ್ ಸೇರಿದಂತೆ ಪ್ರಗತಿ ಬಂಧು ಸದಸ್ಯರು ಹಾಜರಿದ್ದರು.-----