ಸಾರಾಂಶ
ಮೌನೇಶ ವಿಶ್ವಕರ್ಮ
ಕನ್ನಡಪ್ರಭ ವಾರ್ತೆ ಬಂಟ್ವಾಳಹಲವು ದರ ಏರಿಕೆಗಳ ಬಳಿಕ ಇದೀಗ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಅಗತ್ಯವಿರುವ ಜನನ ಮತ್ತು ಮರಣ ಪ್ರಮಾಣ ಪತ್ರದ ಪ್ರತಿಯ ಶುಲ್ಕವನ್ನೂ ಹತ್ತುಪಟ್ಟು ಏರಿಸಿದೆ.
ಪರಿಣಾಮ ಈ ತನಕ 5 ರು. ಇದ್ದ ಜನನ ಅಥವಾ ಮರಣ ಪ್ರಮಾಣ ಪತ್ರದ ಶುಲ್ಕ 50 ರು. ಆಗಿದ್ದು ಜನನ ಮರಣದ ವಿಚಾರದಲ್ಲೂ ಸರ್ಕಾರ ವಸೂಲಿ ಮಾಡುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.2024 ಡಿ.31 ರಂದು ರಾಜ್ಯ ಸರ್ಕಾರ ಹೊರಡಿಸಿರುವ ಗಜೆಟ್ ನೋಟಿಫಿಕೇಶನ್ ನಲ್ಲಿ ಈ ತಿದ್ದುಪಡಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅನುಮೋದನೆ ಪಡೆದು, 1999 ರ ಕರ್ನಾಟಕ ಜನನ ಮತ್ತು ಮರಣಗಳ ನಿಯಮಕ್ಕೆ ತಿದ್ದುಪಡಿ ತರಲು ಜನನ ಮರಣಗಳ ತಿದ್ದುಪಡಿ ನಿಯಮಗಳು, 2024 ನ್ನು ರಚಿಸಿದೆ. ಅದರಂತೆ ಕೈಗೊಳ್ಳಬೇಕಾದ ಹಲವು ಬದಲಾವಣೆಗಳನ್ನು ಅಧಿಸೂಚನೆಯ ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಕಳೆದ 2024ರ ಡಿ.31 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಈ ಬಗ್ಗೆ ಆದೇಶಗಳಿದ್ದರೂ, ಜನವರಿ ತಿಂಗಳ ಮಧ್ಯದಲ್ಲಿ ಈ ಕುರಿತಾದ ಈ ಮೇಲ್ ಸಂದೇಶ ಅಧಿಕಾರಿಗಳಿಗೆ ತಲುಪಿದೆ. ಕಳೆದ ಫೆ.1 ರ ಬಳಿಕ ಹೆಚ್ಚಳವಾಗಿರುವ ಶುಲ್ಕವನ್ನು ಅಧಿಕಾರಿಗಳು ನಾಗರಿಕರಿಂದ ವಸೂಲಿ ಮಾಡುತ್ತಿದ್ದಾರೆ.ಜನನ ಅಥವಾ ಮರಣ ಪ್ರಮಾಣ ಪತ್ರವನ್ನು ನಿಗದಿತ ಅವಧಿಯಲ್ಲಿ ನೋಂದಾಯಿಸಿದವರಿಗೆ ಉಚಿತ ಪ್ರಮಾಣ ಪತ್ರ ನೀಡುವ ಪದ್ಧತಿ ಹಿಂದಿನಂತೆ ಮುಂದುವರಿಯಲಿದ್ದು, ಆಗಾಗ್ಗೆ ಅಗತ್ಯ ಬೀಳುವ ಹೆಚ್ಚುವರಿ ಪ್ರತಿಗಳಿಗೆ ಈ ಶುಲ್ಕ ತಗುಲಲಿದೆ.
ಈ ಮೊದಲು 5 ರು. ಪ್ರತಿಯ ಶುಲ್ಕ ಇದ್ದು, ಪ್ರತಿ ಬೇಕಾದವರು ಕಡಿಮೆ ಎಂದರೂ ಐದೈದು ಪ್ರತಿಗೆ ಬೇಡಿಕೆ ಇರಿಸುತ್ತಿದ್ದರು. ಆದರೆ ಸರ್ಕಾರದ ಬೆಲೆ ಏರಿಕೆಯಿಂದಾಗಿ ಅಗತ್ಯ ಇದ್ದಷ್ಟೇ ಕೊಂಡೊಯ್ಯುತ್ತಾರೆ, ಒಂದು ರೀತಿಯಲ್ಲಿ ಒಳ್ಳೇಯದೇ ಆಯಿತು ಎಂದು ಬಂಟ್ವಾಳ ತಾಲೂಕು ಕಚೇರಿ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.---------------------
ಸರ್ಕಾರದ ಕಾರ್ಯಾದೇಶ ಪಾಲಿಸುವುದು ನಮ್ಮ ಕೆಲಸ, ಸರ್ಕಾರದ ಸುತ್ತೋಲೆಯಂತೆ ನಮ್ಮ ಇಲಾಖೆ ಕಾರ್ಯನಿರ್ವಹಿಸುತ್ತಿದೆ.-ಅರ್ಚನಾ ಭಟ್, ಬಂಟ್ವಾಳ ತಹಸೀಲ್ದಾರ್.-------
ಜನನ-ಮರಣ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿ ಸರ್ಕಾರ ಬೆಲೆ ಏರಿಕೆ ಮಾಡಿದ್ದು ಸರಿಯಲ್ಲ, ಜನರ ಭಾವನೆ ಅರಿತುಕೊಳ್ಳಬೇಕಿತ್ತು.-ಸನತ್ ಕುಮಾರ್ ರೈ, ಮಾಜಿ ಅಧ್ಯಕ್ಷ ಅನಂತಾಡಿ ಗ್ರಾ.ಪಂ.