ಮನುಷ್ಯ ಮೊದಲು ತನ್ನ ತಂದೆ-ತಾಯಿ ಹಾಗೂ ಮನೆಯವರನ್ನು ಗೌರವಿಸಬೇಕು. ಅಕ್ಕಪಕ್ಕದವರನ್ನು ಪ್ರೀತಿಯಿಂದ ಕಂಡಾಗ ಬಸವ ತತ್ವಕ್ಕೆ ಬೆಲೆ ಬರುತ್ತದೆ. ನಮ್ಮ ನಡೆ-ನುಡಿ ಸ್ವಚ್ಛವಾಗಿದ್ದರೆ ಜೀವನ ಸುಂದರವಾಗಿರುತ್ತದೆ. ಮನೆಯ ಹಿರಿಯರು ಸಂಸ್ಕಾರವಂತರಾಗಿದ್ದರೆ ಆ ಕುಟುಂಬಕ್ಕೆ ಬೆಳಕು ಸಿಗುತ್ತದೆ ಎಂದು ಹುಬ್ಬಳ್ಳಿಯ ವಿಶ್ವದರ್ಶನ ಪತ್ರಿಕೆ ಸಂಪಾದಕ ಎಸ್.ಎಸ್.ಪಾಟೀಲ್ ಹೇಳಿದ್ದಾರೆ.

- ಶ್ರೀ ಬಸವೇಶ್ವರ ಜಯಂತ್ಯುತ್ಸವ, ಬಸವಶ್ರೀ ಪ್ರಶಸ್ತಿ ಪ್ರದಾನ- ಕವಿಗೋಷ್ಠಿ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮನುಷ್ಯ ಮೊದಲು ತನ್ನ ತಂದೆ-ತಾಯಿ ಹಾಗೂ ಮನೆಯವರನ್ನು ಗೌರವಿಸಬೇಕು. ಅಕ್ಕಪಕ್ಕದವರನ್ನು ಪ್ರೀತಿಯಿಂದ ಕಂಡಾಗ ಬಸವ ತತ್ವಕ್ಕೆ ಬೆಲೆ ಬರುತ್ತದೆ. ನಮ್ಮ ನಡೆ-ನುಡಿ ಸ್ವಚ್ಛವಾಗಿದ್ದರೆ ಜೀವನ ಸುಂದರವಾಗಿರುತ್ತದೆ. ಮನೆಯ ಹಿರಿಯರು ಸಂಸ್ಕಾರವಂತರಾಗಿದ್ದರೆ ಆ ಕುಟುಂಬಕ್ಕೆ ಬೆಳಕು ಸಿಗುತ್ತದೆ ಎಂದು ಹುಬ್ಬಳ್ಳಿಯ ವಿಶ್ವದರ್ಶನ ಪತ್ರಿಕೆ ಸಂಪಾದಕ ಎಸ್.ಎಸ್.ಪಾಟೀಲ್ ಹೇಳಿದರು.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಸ್ಫೂರ್ತಿ ಪ್ರಕಾಶನ ತೆಲಗಿ, ಹಾಗೂ ಸಿದ್ಧಗಂಗಾ ವಿದ್ಯಾಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ ಬಸವೇಶ್ವರ ಜಯಂತ್ಯುತ್ಸವ, ಬಸವಶ್ರೀ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೇ ಇಡೀ ಜಗತ್ತಿಗೇ ಶಿಸ್ತು, ದಯೆ ಮತ್ತು ಪ್ರೀತಿಯ ಹಾದಿ ತೋರಿಸಿದ್ದಾರೆ. ಅವರನ್ನು ಪೂಜಿಸುವುದೆಂದರೆ ಅವರ ವಿಚಾರಗಳನ್ನು ಬದುಕಿನಲ್ಲಿ ಪಾಲಿಸುವುದು ಎಂದರ್ಥ. ವಿಶ್ವಕ್ಕೆ ದಾಸೋಹ, ಜ್ಞಾನ ಮತ್ತು ಕಾಯಕದ ಮಹತ್ವ ಸಾರಿದ ಬಸವಣ್ಣನವರ ತತ್ವಗಳು ಮನುಕುಲದ ಸಾರ್ವಕಾಲಿಕ ಆಸ್ತಿಯಾಗಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕತೆ ಪಡೆಯಲು ಸಾಧ್ಯ ಎಂದರು.

ಚು.ಸಾ.ಪ. ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಓಂಕಾರಯ್ಯ ತವನಿಧಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣನವರು ಕಾಯಕವೇ ಕೈಲಾಸ ಎಂದು ಸಾರಿದ್ದರ ಹಿಂದೆ ಅರ್ಥವಿದೆ. ಕಾಯಕದಲ್ಲಿ ಪ್ರತಿಫಲದ ನಿರೀಕ್ಷೆ ಇರುವುದಿಲ್ಲ. ಬದಲಾಗಿ ಆತ್ಮಸಂತೋಷ ಮತ್ತು ನಿಷ್ಠೆ ಇರುತ್ತದೆ. ಕೆಲಸದಲ್ಲಿ ಕೇವಲ ಪಡೆದುಕೊಳ್ಳುವ ಗುಣವಿದ್ದರೆ ಕಾಯಕದಲ್ಲಿ ಕೊಡುವ ಗುಣವಿರುತ್ತದೆ. ಆದ್ದರಿಂದ ಕಾಯಕ ಮಾಡುವವರನ್ನು ಕಾಯಕಯೋಗಿ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ಚು.ಸಾ.ಪ. ಜಿಲ್ಲಾಧ್ಯಕ್ಷ ಕೆ.ಎಸ್.ವೀರಭದ್ರಪ್ಪ ತೆಲಗಿ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಹೊನ್ನಾಳಿಯ ಸಾಹಿತಿ ಯು.ಎನ್. ಸಂಗನಾಳಮಠ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಯಕಯೋಗಿ ಗೌರವವನ್ನು ಕೆ.ಪಿ. ದೇವೇಂದ್ರಯ್ಯ, ಗುರಪ್ಪ, ನಾಗರಾಜ, ಕೆ.ಕೆಂಚಪ್ಪ, ಆರ್.ನಾಗರಾಜ, ಎಸ್.ವಿ.ಶಾಂತಕುಮಾರ, ಯು.ಕೆ.ಅಣ್ಣಪ್ಪ ಭಾನುವಳ್ಳಿ, ಲೋಹಿತ್ ಅವರಿಗೆ ನೀಡಿ ಗೌರವಿಸಲಾಯಿತು.

ಚಿತ್ರಕಲಾವಿದ ಚಂದ್ರಶೇಖರ ಸಂಗಾ, ರಾಘವೇಂದ್ರ ನಾಯಕ, ಅತೀಕ್ ವುಲ್ಲಾ ರಚಿಸಿದ ಚಿತ್ರಕಲಾ ಪ್ರದರ್ಶನ ನೋಡುಗರ ಜನಮನ ಸೆಳೆಯಿತು. ಸ್ಫೂರ್ತಿ ಪ್ರಕಾಶನದ ಅಧ್ಯಕ್ಷ ಎಂ.ಬಸವರಾಜ, ಮಲ್ಲಮ್ಮ ನಾಗರಾಜ, ಹ.ರು. ಗಂಗಾಧರಯ್ಯ, ರಟ್ಟಿಹಳ್ಳಿ ಎಎಸ್‌ಐ ಅಶೋಕ ಬಸಪ್ಪ ಕೊಂಡ್ಲಿ, ಎಚ್.ಕೆ. ಸತ್ಯಭಾಮ, ಕವಿರಾಜ, ನಾರಾಯಣ ಸ್ವಾಮಿ, ನೀಲಗುಂದ ಜಯಮ್ಮ, ಇತರರು ಇದ್ದರು.

ಉಮಾದೇವಿ ಪ್ರಾರ್ಥಿಸಿ, ಡಾ. ಎಂ.ವಿ.ಮಂಜುನಾಥ ಸ್ವಾಗತಿಸಿದರು. ಪ್ರಕಾಶ ಬೂಸ್ನೂರು ಕಾರ್ಯಕ್ರಮ ನಿರೂಪಿಸಿ, ಬಿ.ಎಂ.ಜಿ.ವೀರೇಶ ವಂದಿಸಿದರು.

- - -

-2ಕೆಡಿವಿಜಿ33: ದಾವಣಗೆರೆಯಲ್ಲಿ ಬಸವೇಶ್ವರ ಜಯಂತಿ, ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಎಸ್.ಎಸ್.ಪಾಟೀಲ್ ಉದ್ಘಾಟಿಸಿದರು. ಎಸ್.ಓಂಕಾರಯ್ಯ ತವನಿಧಿ, ಕೆ.ಎಸ್.ವೀರಭದ್ರಪ್ಪ ತೆಲಗಿ, ಎಂ.ಬಸವರಾಜ ಇತರರು ಇದ್ದರು.