ಕೊಪ್ಪಳ ಸುತ್ತಮುತ್ತಲಿನ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳು ಬುದ್ಧಿಮಾಂದ್ಯರಾಗಿ ಜನಿಸುತ್ತಿದ್ದಾರೆ, ಪದೇ ಪದೇ ಗರ್ಭಪಾತವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ಸುತ್ತಮುತ್ತಲಿನ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳು ಬುದ್ಧಿಮಾಂದ್ಯರಾಗಿ ಜನಿಸುತ್ತಿದ್ದಾರೆ, ಪದೇ ಪದೇ ಗರ್ಭಪಾತವಾಗುತ್ತಿದೆ. ಕ್ಯಾನ್ಸರ್, ಅಸ್ತಮಾ, ದೃಷ್ಟಿದೋಷ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿವೆ ಎಂದು ಹಿರೇಬಗನಾಳ, ಗಿಣಿಗೇರಿ ಸೇರಿದಂತೆ ಕಾರ್ಖಾನೆ ಬಾಧಿತ ಗ್ರಾಮಗಳ ಜನರು ಪರಿಸರ ತಜ್ಞರು ಹಾಗೂ ವಿಜ್ಞಾನಿಗಳ ತಂಡದ ಎದುರು ಅಳಲು ತೋಡಿಕೊಂಡಿದ್ದಾರೆ.

ಧಾರವಾಡದ ಡಾ. ಸಂಜೀವ ಕುಲಕರ್ಣಿ, ಕಾರ್ಕಳದ ಸಾಗರಧಾರಾ ಹಾಗೂ ಹೈದರಾಬಾದ್‌ನ ಶ್ರೀಕುಮಾರ್ ಅವರನ್ನೊಳಗೊಂಡ ಪರಿಸರ ತಜ್ಞರು ಮತ್ತು ವಿಜ್ಞಾನಿಗಳ ತಂಡ ಶುಕ್ರವಾರ ಗಿಣಿಗೇರಿ, ಬೇವಿನಹಳ್ಳಿ, ಹಿರೇಬಗನಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಪರಿಸರ ಪರಿಸ್ಥಿತಿ ಪರಿಶೀಲಿಸುವ ವೇಳೆ ಸ್ಥಳೀಯ ನಿವಾಸಿಗಳು ಈ ಸಂಕಷ್ಟ ಹೇಳಿಕೊಂಡಿದ್ದಾರೆ.

ಕಾರ್ಖಾನೆಗಳನ್ನು ಸ್ಥಳಾಂತರಿಸಬೇಕು ಹಾಗೂ ಹೊಸ ಕಾರ್ಖಾನೆಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಮತ್ತು ಕೊಪ್ಪಳ ತಾಲೂಕು ಪರಿಸರ ಹೋರಾಟ ಸಮಿತಿ ಜಂಟಿಯಾಗಿ ನಡೆಸುತ್ತಿರುವ ಹೋರಾಟ 300 ದಿನಗಳನ್ನು ದಾಟಿರುವ ಮಾಹಿತಿ ಪಡೆದ ತಂಡವು ಸ್ವಯಂಪ್ರೇರಿತವಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತ್ಯಾಜ್ಯದಿಂದ ಬುದ್ಧಿಮಾಂದ್ಯ ಮಗು: ವಿಜ್ಞಾನಿಗಳ ತಂಡದ ಎದುರು ಕಾರ್ಖಾನೆ ಬಾಧಿತ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಬುದ್ಧಿಮಾಂದ್ಯ ಮಗುವನ್ನು ಎತ್ತಿಕೊಂಡು ಬಂದಿದ್ದ ತಂದೆಯೊಬ್ಬರು, ‘ಕಾರ್ಖಾನೆಯ ತ್ಯಾಜ್ಯದಿಂದ ನನಗೆ ಇಂತಹ ಮಗು ಜನಿಸಿದೆ’ ಎಂದು ಅಳಲು ತೋಡಿಕೊಂಡರು.

ಕೆಲವು ಮಹಿಳೆಯರು ಗರ್ಭ ನಿಲ್ಲುತ್ತಿಲ್ಲ, ಪದೇ ಪದೇ ಗರ್ಭಪಾತವಾಗುತ್ತಿದೆ. ಹೀಗಾಗಿ ಗರ್ಭಿಣಿಯರನ್ನು ಬೇರೆ ಗ್ರಾಮಗಳಿಗೆ ಕಳುಹಿಸಿ ಆರೈಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಕಾರ್ಖಾನೆಗಳ ತ್ಯಾಜ್ಯದಿಂದ ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳು ಗೊಡ್ಡಾಗುತ್ತಿವೆ. ಹಾಲಿನ ಉತ್ಪಾದನೆಯೂ ಕಡಿಮೆಯಾಗಿದೆ ಎಂದು ಗ್ರಾಮಸ್ಥರು ದೂರಿದರು.

‘ಕಾರ್ಖಾನೆಗಳನ್ನು ಸ್ಥಳಾಂತರಿಸಿ ಇಲ್ಲವೇ ನಮ್ಮ ಗ್ರಾಮಗಳನ್ನಾದರೂ ಸ್ಥಳಾಂತರಿಸಿ’ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಮಕ್ಕಳ ಆರೋಗ್ಯದ ಬಗ್ಗೆ ಆತಂಕ: ಗಿಣಿಗೇರಿ, ಹಿರೇಬಗನಾಳ, ಕಾಸನಕಂಡಿ, ಬೇವಿನಹಳ್ಳಿ ಹಾಗೂ ಹಳೆ ಕನಕಾಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆ ಕುರಿತು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದರು. ಕೆಲವು ವಿಶೇಷಚೇತನ ಮಕ್ಕಳನ್ನು ಉಲ್ಲೇಖಿಸಿದ ಅವರು, ಆರೋಗ್ಯ ಸಮಸ್ಯೆಗಳಿಗೆ ಪರಿಸರ ಮಾಲಿನ್ಯ ಕಾರಣವೇ ಎಂಬುದನ್ನು ಸ್ವತಂತ್ರ ವೈಜ್ಞಾನಿಕ ಅಧ್ಯಯನದ ಮೂಲಕ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಜನವಸತಿ ಸಮೀಪವೇ ಕರಿಬೂದಿ: ಗಿಣಿಗೇರಿ ಗ್ರಾಮದ ಜನವಸತಿ ಪ್ರದೇಶದಿಂದ ಸುಮಾರು 100 ಮೀಟರ್ ಅಂತರದಲ್ಲೇ ಕಾರ್ಖಾನೆ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ ಎಂಬುದು ಗ್ರಾಮಸ್ಥರ ಪ್ರಮುಖ ಆಕ್ಷೇಪವಾಗಿದೆ. ಇದೇ ಪ್ರದೇಶದಲ್ಲಿ ಹಿಂದೆ ಸಂಗ್ರಹಿಸಲಾಗಿದ್ದ ಸುಮಾರು ನಾಲ್ಕು ಲಕ್ಷ ಟನ್ ತ್ಯಾಜ್ಯವನ್ನು ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೆ ಅದೇ ಪ್ರದೇಶದಲ್ಲಿ ಬೂದಿ ಹಾಕಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.

ಇದರಿಂದ ಮಕ್ಕಳು, ವೃದ್ಧರು ಸೇರಿದಂತೆ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆಯೇ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಗಾಳಿ, ನೀರು, ಮಣ್ಣಿನ ಪರೀಕ್ಷೆಗೆ ಆಗ್ರಹ: ಗಾಳಿ, ನೀರು, ಮಣ್ಣು ಹಾಗೂ ಭೂಗರ್ಭಜಲದ ಗುಣಮಟ್ಟ ಪರೀಕ್ಷಿಸಬೇಕು. ಕೈಗಾರಿಕಾ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ನಿಯಮಾನುಸಾರ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಮಕ್ಕಳ ಆರೋಗ್ಯದ ಸಮಗ್ರ ಸಮೀಕ್ಷೆ ನಡೆಸಬೇಕು. ನಿಯಮ ಉಲ್ಲಂಘನೆಯಾಗಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೋರಾಟ ಸಮಿತಿಗಳು ಆಗ್ರಹಿಸಿವೆ.

‘ಕೈಗಾರಿಕೆಗಳ ವಿರುದ್ಧ ನಮ್ಮ ಹೋರಾಟವಲ್ಲ. ನಮಗೆ ಉದ್ಯೋಗ ಮತ್ತು ಅಭಿವೃದ್ಧಿ ಬೇಕು. ಆದರೆ ಮಕ್ಕಳ ಆರೋಗ್ಯವನ್ನು ಬಲಿಕೊಟ್ಟು ಅಭಿವೃದ್ಧಿ ಬೇಡ. ಶುದ್ಧ ಗಾಳಿ, ಶುದ್ಧ ನೀರು ಮತ್ತು ಸುರಕ್ಷಿತ ಪರಿಸರ ನಮ್ಮ ಹಕ್ಕು’ ಎಂದು ಹೋರಾಟಗಾರರು ಹೇಳಿದ್ದಾರೆ.

ವಿಜ್ಞಾನಿಗಳ ಕಳವಳ: ಗ್ರಾಮಸ್ಥರು ತೋಡಿಕೊಂಡ ಸಮಸ್ಯೆಗಳನ್ನು ಆಲಿಸಿದ ಹಾಗೂ ಗ್ರಾಮಗಳಲ್ಲಿ ಖುದ್ದು ಪರಿಸ್ಥಿತಿ ಪರಿಶೀಲಿಸಿದ ವಿಜ್ಞಾನಿಗಳು ಮತ್ತು ಪರಿಸರ ತಜ್ಞರ ತಂಡ, ಪರಿಸರ ಹಾನಿ ಹಾಗೂ ಅದರ ಪರಿಣಾಮಗಳ ಕುರಿತು ಕಳವಳ ವ್ಯಕ್ತಪಡಿಸಿತು.

ಕಾರ್ಖಾನೆ ತ್ಯಾಜ್ಯದಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಿರುವುದು ಸ್ಥಳೀಯ ಪರಿಸ್ಥಿತಿಯನ್ನು ಗಮನಿಸಿದಾಗ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ತಂಡದ ಸದಸ್ಯರು ಬೇಸರ ವ್ಯಕ್ತಪಡಿಸಿದರು.ಮನವರಿಕೆಯಾಗಿದೆ: ಕಾರ್ಕಳ, ಹೈದರಾಬಾದ್ ಹಾಗೂ ಧಾರವಾಡದ ಪರಿಸರ ತಜ್ಞರು ಮತ್ತು ವಿಜ್ಞಾನಿಗಳ ತಂಡ ಸ್ವಯಂಪ್ರೇರಿತವಾಗಿ ಬಂದು ಕಾರ್ಖಾನೆ ಬಾಧಿತ ಗ್ರಾಮಗಳಲ್ಲಿನ ಅವ್ಯವಸ್ಥೆ, ಜನರ ಆರೋಗ್ಯದ ಮೇಲಿನ ಪರಿಣಾಮ ಹಾಗೂ ಕೃಷಿ ಉತ್ಪನ್ನಗಳ ಮೇಲಿನ ಹಾನಿಯನ್ನು ಪರಿಶೀಲಿಸಿದೆ. ಅವರಿಗೂ ಕಾರ್ಖಾನೆಗಳ ದುಷ್ಪರಿಣಾಮ ಮನವರಿಕೆಯಾಗಿದೆ ಎಂದು ಹೋರಾಟಗಾರ ಅಲ್ಲಮಪ್ರಭು ಬೆಟದೂರು ಹೇಳಿದರು.

ಕಾರ್ಖಾನೆಯ ತ್ಯಾಜ್ಯದಿಂದ ಬುದ್ಧಿಮಾಂದ್ಯ ಮಗು ಜನಿಸಿದೆ ಎಂದು ಮಗುವೊಂದನ್ನು ತೋರಿಸಿದ್ದಾರೆ. ಗರ್ಭಪಾತವಾಗಿರುವ ಬಗ್ಗೆಯೂ ಮಹಿಳೆಯರು ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವೈಜ್ಞಾನಿಕ ಅಧ್ಯಯನ ಅಗತ್ಯವಿದೆ. ಕಾರ್ಖಾನೆ ತ್ಯಾಜ್ಯದಿಂದ ಹಾನಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಕುರಿತು ನಮ್ಮ ತಂಡ ವರದಿ ಸಿದ್ಧಪಡಿಸಲಿದೆ. ಜನವಸತಿಗೆ ಇಷ್ಟು ಹತ್ತಿರ ಕಾರ್ಖಾನೆ ಸ್ಥಾಪಿಸಿರುವುದೇ ತಪ್ಪು. ಈಗ ಕೊಪ್ಪಳ ನಗರದ ಬಳಿಯೇ ಬಹುದೊಡ್ಡ ಕಾರ್ಖಾನೆ ಸ್ಥಾಪಿಸಿದರೆ ಜನರು ಇಲ್ಲಿ ಬದುಕಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ ಎಂದು ಡಾ. ಸಂಜೀವ ಕುಲಕರ್ಣಿ ಹೇಳಿದರು.