ಸಾರಾಂಶ
ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸೇವಾ ಭಾರತಿ ಟ್ರಸ್ಟ್ ಅನೇಕ ಅನಾಥ ಮಕ್ಕಳ ಬದುಕಿಗೆ ಬೆಳಕಾಗಿದೆ. ಸಂಸ್ಥೆಯು ಮಕ್ಕಳ ತಂದೆ-ತಾಯಿಯಾಗಿ ಅವರಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ.
ಹುಬ್ಬಳ್ಳಿ:
ಸೇವಾ ಭಾರತಿ ಟ್ರಸ್ಟ್‌ನ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ರಜತ ಮಹೋತ್ಸವ ಹಾಗೂ ಶ್ರೀಸರಸ್ವತಿ ಜಯಂತಿ ಅಂಗವಾಗಿ ಬಾಲಕಲ್ಯಾಣ ಕೇಂದ್ರದ ಅನಾಥ ಮಕ್ಕಳ ಜನ್ಮದಿನವನ್ನು ಕೇಶ್ವಾಪುರದ ಸೇವಾ ಸದನದಲ್ಲಿ ಗಣ್ಯರ ನೇತೃತ್ವದಲ್ಲಿ ಸೋಮವಾರ ಆಚರಿಸಲಾಯಿತು. ಬಾಲ ಕಲ್ಯಾಣ ಕೇಂದ್ರದ 35ಕ್ಕೂ ಹೆಚ್ಚು ಮಕ್ಕಳಿಗೆ ಮಹಿಳೆಯರು ಆರತಿ ಬೆಳಗಿ ಜನ್ಮದಿನದ ಶುಭಾಶಯ ಕೋರಿದರು.ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸೇವಾ ಭಾರತಿ ಟ್ರಸ್ಟ್ ಅನೇಕ ಅನಾಥ ಮಕ್ಕಳ ಬದುಕಿಗೆ ಬೆಳಕಾಗಿದೆ. ಸಂಸ್ಥೆಯು ಮಕ್ಕಳ ತಂದೆ-ತಾಯಿಯಾಗಿ ಅವರಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ. ಅಲ್ಲದೇ, ಸ್ವತಃ ಸಂಸ್ಥೆಯ ಪದಾಧಿಕಾರಿಗಳೇ ಅವರ ಕಲ್ಯಾಣ ಕಾರ್ಯ ಮಾಡುತ್ತಾ ಬಂದಿದ್ದು, ಆ ಮೂಲಕ ಮಕ್ಕಳಿಗೆ ಹೊಸ ಬದುಕು ಕಲ್ಪಿಸುವ ಗುರುತರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಪೂರ್ವದಲ್ಲಿ ಬಾಲ ಕಲ್ಯಾಣ ಕೇಂದ್ರದ ಮಕ್ಕಳು ಭಗವದ್ಗೀತೆಯ 18 ಅಧ್ಯಾಯ ಶ್ಲೋಕದ ವಿವರಣೆಯನ್ನು ದೃಷ್ಟಾಂತದ ಮೂಲಕ ಪ್ರಸ್ತುತಪಡಿಸಿದರು. ಅಲ್ಲದೇ, ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೂಪಕ ಪ್ರದರ್ಶನ ಮಾಡಿದರು. ನಂತರ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.ಈ ವೇಳೆ ಜಯಪ್ರಕಾಶ ಟೆಂಗಿನಕಾಯಿ, ಗೋವಿಂದ ಜೋಶಿ, ವೀರೇಶ ಉಂಡಿ, ವಸಂತ ಹೊರಟ್ಟಿ, ಕಮಲಾ ಜೋಶಿ, ಮಂಜುಳಾ ಕೃಷ್ಣನ, ಜ್ಯೋತಿ ಜೋಶಿ, ಭಾರತಿ ನಂದಕುಮಾರ, ಆರ್‌ಎಸ್‌ಎಸ್‌ನ ಪ್ರಾಂತ ಪ್ರಚಾರಕ ಸು. ರಾಮಣ್ಣ, ಕೆ.ಡಿ. ಕುಲಕರ್ಣಿ, ಉಮಾ ಮುಕುಂದ, ಮೀನಾಕ್ಷಿ ವಂಟಮೂರಿ, ಸಂಧ್ಯಾ ದೀಕ್ಷಿತ್, ಭರತ್ ಜೈನ್, ಸುಲೋಚನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.