ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಐತಿಹಾಸಿಕ ನಾಡಾದ ಚನ್ನಮ್ಮನ ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ಅವರ ಹುಟ್ಟುಹಬ್ಬ ಜು.೨೨ರಂದು ಸೋಮವಾರ ಇದ್ದರೂ ಸಹ ಅಭಿವೃದ್ಧಿ ಹಾಗೂ ಹಲವಾರು ಜನಪರ ಕಾರ್ಯಗಳಿಗೆ ಶಾಸಕರು ಸೋಮವಾರ ಚಾಲನೆ ನೀಡಲಿದ್ದಾರೆ.ಎಂದಿನಂತೆ ಬೆಳಗ್ಗೆ ಮಾತೋಶ್ರೀ ಆರ್ಶಿವಾದ ಪಡೆದು ದಿನಾರಂಭ ಮಾಡುವ ಶಾಸಕ ಬಾಬಾಸಾಹೇಬ ಪಾಟೀಲ, ಬೆಳಗ್ಗೆ ೧೦ ಗಂಟೆಯವರೆಗೂ ನೇಗಿನಹಾಳದ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರಲಿದ್ದು, ೧೦.೩೦ಕ್ಕೆ ನೇಗಿನಹಾಳದ ಶ್ರೀಗುರು ಮಡಿವಾಳೇಶ್ವರ ಮಠದಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡುವರು.
ಬೆಳಗ್ಗೆ ೧೧ಕ್ಕೆ ಎಸ್.ವಿ. ಪ್ರೌಢಶಾಲೆಗೆ ಭೇಟಿ ನೀಡಲಿದ್ದು, ೧೧.೩೦ಕ್ಕೆ ಕಿತ್ತೂರು ಕೋಟೆಯ ಆವರಣದಲ್ಲಿರುವ ಶ್ರೀ ಗ್ರಾಮದೇವಿ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.ಮಧ್ಯಾಹ್ನ ೧೨ಕ್ಕೆ ಕಿತ್ತೂರು ಪಟ್ಟಣದ ಮಾದರಿ ಶಾಲೆ, ಸರ್ಕಾರಿ ಉರ್ದು ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕೊಂಡವಾಡ ಚೌಕ್ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಲಿದ್ದಾರೆ. ನಂತರ ಪಟ್ಟಣದ ವಿದ್ಯಾಗಿರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೀರು ಪೂರೈಸುವ ಸಂಚಾರಿ ವಾಹನ ಲೋಕಾರ್ಪಣೆಗೊಳಿಸಲಿದ್ದಾರೆ.
ಮಧ್ಯಾಹ್ನ ೨ಕ್ಕೆ ತಾಪಂನಲ್ಲಿ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಲಿದ್ದಾರೆ,ಮದ್ಯಾಹ್ನ ೩ಕ್ಕೆ ಸಂಪಗಾಂವದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಲಿದ್ದು, ನಂತರ ನೇಸರಗಿ ಪಟ್ಟಣಕ್ಕೆ ತೆರಳಲಿದ್ದಾರೆ. ೪.೩೦ಕ್ಕೆ ಸೋಮನಟ್ಟಿ ಗ್ರಾಮದಲ್ಲಿ ಹೋಲಿಗೆ ಯಂತ್ರ ವಿತರಿಸಲಿದ್ದು, ಸಂಜೆ ೫ಕ್ಕೆ ಸ್ವಗ್ರಾಮ ನೇಗಿನಹಾಳಕ್ಕೆ ಆಗಮಿಸಲಿದ್ದು ಆಪ್ತರ, ಅಭಿಮಾನಿಗಳ ಹಾಗೂ ಪಕ್ಷದ ಕಾರ್ಯಕರ್ತರ, ಮುಖಂಡರ ಜೊತೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ, ಹುಟ್ಟುಹಬ್ಬದ ದಿನದಂದೂ ಸಹ ಕ್ಷೇತ್ರ ಸಂಚಾರ ನಡೆಸಿ ಕ್ಷೇತ್ರದ ಜನರ ಸೇವೆಗೆ ಅಣಿಯಾಗಲಿದ್ದಾರೆ.