ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ನಮ್ಮ ಸಂವಿಧಾನದ ವಿಧಿ 371, 5 ಮತ್ತು 6ರ ಅಡಿಯಲ್ಲಿ ಸ್ವಯಂ ಆಡಳಿತ, ವಿಶ್ವಸಂಸ್ಥೆಯ ಸನ್ನದು ಮತ್ತು ಸಂವಿಧಾನದ ಅಡಿಯಲ್ಲಿ ಆದಿಮ ಸಂಜಾತ ಸಮುದಾಯವಾಗಿ ಕೊಡವ ಜನಾಂಗೀಯತೆಗೆ ಸಾಂವಿಧಾನಿಕ ರಕ್ಷಣೆ ಹಾಗೂ ವಿಶೇಷ ಗುರುತಿಸುವಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಜನಸಂಪರ್ಕ ಅಭಿಯಾನವನ್ನು ಮಂಗಳವಾರ ಮರೆನಾಡಿನ ಬಿರುನಾಣಿಯಿಂದ ಆರಂಭಿಸಿತು.

ಮಡಿಕೇರಿ : ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ನಮ್ಮ ಸಂವಿಧಾನದ ವಿಧಿ 371, 5 ಮತ್ತು 6ರ ಅಡಿಯಲ್ಲಿ ಸ್ವಯಂ ಆಡಳಿತ, ವಿಶ್ವಸಂಸ್ಥೆಯ ಸನ್ನದು ಮತ್ತು ಸಂವಿಧಾನದ ಅಡಿಯಲ್ಲಿ ಆದಿಮ ಸಂಜಾತ ಸಮುದಾಯವಾಗಿ ಕೊಡವ ಜನಾಂಗೀಯತೆಗೆ ಸಾಂವಿಧಾನಿಕ ರಕ್ಷಣೆ ಹಾಗೂ ವಿಶೇಷ ಗುರುತಿಸುವಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಜನಸಂಪರ್ಕ ಅಭಿಯಾನವನ್ನು ಮಂಗಳವಾರ ಮರೆನಾಡಿನ ಬಿರುನಾಣಿಯಿಂದ ಆರಂಭಿಸಿತು.ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪರ ನೇತೃತ್ವದಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಯೋಜಿಸಿರುವ ಅಭಿಯಾನದ ಭಾಗವಾಗಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಮಂಗಳವಾರ ಬಿರುನಾಣಿಯಲ್ಲಿ ನಡೆಯಿತು. ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ ಮಾತನಾಡಿದ ಎನ್.ಯು. ನಾಚಪ್ಪ ಅವರು ಆದಿಮ ಸಂಜಾತ ಕೊಡವರು ಪ್ರತ್ಯೇಕ ಅನಿಮಿಸ್ಟಿಕ್ ನಂಬುಗೆಯ ಜನರೆಂದು ಸಂವಿಧಾನದ ಅಡಿಯಲ್ಲಿ ಗುರುತಿಸುವ ಮೂಲಕ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಶಾಸನದ ಜನ್ಮ ಭೂಮಿಯಾಗಿ ಭದ್ರತೆ ದೊರೆತರೆ ಮಾತ್ರ ಕೊಡವ ನೆಲ, ಜಲ, ಸಂಸೃತಿ, ಪರಂಪರೆ, ಪರಿಸರ, ಜೀವ ವೈವಿಧ್ಯ ರಕ್ಷಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಅದಕ್ಕಾಗಿ ನಮ್ಮ ಆಧ್ಯಾತ್ಮಿಕ ನೆಲೆಗಳಾದ ಮಂದ್, ಕೊಡವರ ವಿಶಿಷ್ಟ ವಂಶಾವಳಿ, ಸಾಂಪ್ರದಾಯಿಕ ನೆಲೆಯನ್ನು ಅನಾವರಣ ಮಾಡುವುದರೊಂದಿಗೆ ಮುಂಬರುವ 2027ರ ರಾಷ್ಟ್ರೀಯ ಜನಗಣತಿಯಲ್ಲಿ, ಕೊಡವರು ಪ್ರತ್ಯೇಕ ಅಪರೂಪದ ಜನಾಂಗ ಎಂದು ದಾಖಲೀಕರಣ ಮಾಡಬೇಕು ಎಂದರು.

ಅಂತಿಮವಾಗಿ ಗುರು-ಕಾರೋಣ, ಸೂರ್ಯ-ಚಂದ್ರ, ಭೂದೇವಿ, ವನದೇವಿ, ಜಲದೇವಿ ಕಾವೇರಿ, ಭಾರತದ ಸಂವಿಧಾನದ ಹೆಸರಿನಲ್ಲಿ ಸಿಎನ್‌ಸಿಯ ಹೋರಾಟದಲ್ಲಿ ಸಮರ್ಪಿಸಿಕೊಳ್ಳುವುದಾಗಿ ಭಾಗಿಯಾದ ಕೊಡವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕಾಳಿಮಾಡದ ಸವಿತಾ, ಅಣ್ಣಿರ ಸರಸು, ಪವಿತಾ, ಪೊನ್ನಮ್ಮ, ಶೆರಿ, ಬಲ್ಯಮೀದೇರಿರ ಸರಸ್ವತಿ, ಬೊಟ್ಟಂಗಡ ಗಿರೀಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅಣ್ಣಿರ ಧನು ಪೂಣಚ್ಚ, ಅಣ್ಣಳಮಾಡ ಲಾಲ ಅಪ್ಪಣ್ಣ, ಕುಪ್ಪಣಮಾಡ ಜೀವನ್, ಕೀಕಣಮಡ ಮನು ಕಾರ್ಯಪ್ಪ, ನೆಲ್ಲಿರ ರಘು ನಂದ, ಕಳಕಂಡ ಚೇತು, ನೆಲ್ಲಿರ ಸೋಮಣ್ಣ, ಅಣ್ಣಳಮಾಡ ರಂಜನ್, ಕೀಕಣಮಡ ಉದಯ ಮತ್ತಿತರರು ಪಾಲ್ಗೊಂಡಿದ್ದರು.