ಸಾರಾಂಶ
ತಹಸೀಲ್ದಾರ್ ರಾಮರಾವ್ ದೇಸಾಯಿಗೆ ಮನವಿ ಸಲ್ಲಿಕೆ । 6ನೇ ಗ್ಯಾರಂಟಿಯಾಗಿ ಸಂಬಳ ಹೆಚ್ಚಿಸಬೇಕು । ಅಹೋರಾತ್ರಿ ಧರಣಿ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಮಾಸಿಕ ಸಂಬಳ ಹೆಚ್ಚಳ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ನೀಡಬೇಕೆಂದು ಅಕ್ಷರ ದಾಸೋಹ ಕಾರ್ಯಕರ್ತೆಯರ ಫೆಡರೇಷನ್ ಮಂಗಳವಾರ ತಾಲೂಕು ತಹಸೀಲ್ದಾರ್ (ಗ್ರೇಡ್-2) ರಾಮರಾವ್ ದೇಸಾಯಿ ಅವರಿಗೆ ಮನವಿ ಸಲ್ಲಿಸಿತು
ಫೆಡರೇಷನ್ ಜಿಲ್ಲಾಧ್ಯಕ್ಷ ಜಿ.ರಘು ಮಾತನಾಡಿ, ಇಂದಿನ ಬೆಲೆ ಏರಿಕೆದಿಂದಾಗಿ ಬಿಸಿಯೂಟ ಮಹಿಳಾ ಕಾರ್ಯಕರ್ತೆಯರು ಜೀವನ ನಡೆಸುವುದು ಕಷ್ಟಕರವಾಗಿದ್ದು, ಶೀಘ್ರವೇ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕರ್ತೆಯರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಬೆಲೆ ಏರಿಕೆಯಿಂದ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಸೇರಿದಂತೆ ಇನ್ನಿತರೆ ಖರ್ಚುಗಳಿಗೆ ಬಹಳಷ್ಟು ಕಷ್ಟಕರವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ 6ನೇ ಗ್ಯಾರಂಟಿಯಾಗಿ ಬಿಸಿಯೂಟ ಕಾರ್ಯಕರ್ತೆಯರಿಗೆ 6 ಸಾವಿರ ರು. ಸಂಬಳ ನೀಡುವುದಾಗಿ ಘೋಷಿಸಿತ್ತು. ಆದರೂ ಸಹ ಈವರೆಗೆ ನೀಡದೇ ಮಹಿಳಾ ಶೋಷಣೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ 13 ವರ್ಷಗಳಿಂದ ನೀಡಬೇಕಾಗಿದ್ಧ ಶೇ.60 ರಷ್ಟು ಸಂಬಳವನ್ನು ನೀಡದೇ ಅಲ್ಪಮೊತ್ತದ ಸಂಬಳ ನೀಡಿ ತಾರತಮ್ಯ ನೀತಿ ಅನುಸರಿಸುತ್ತಿದೆ .ಎಂದು ಹೇಳಿದರು.ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್‌ಕುಮಾರ್ ಮಾತನಾಡಿ, ಸರ್ಕಾರಗಳು ಕಾರ್ಯಕರ್ತೆಯರಿಗೆ 2 ಲಕ್ಷ ರು. ನಿವೃತ್ತಿ ಇಡಿಗಂಟು ನೀಡಬೇಕು. 2022 ರಲ್ಲಿ ನಿವೃತ್ತಿಗೊಂಡ ಮತ್ತು 5 ವರ್ಷಗಳಿಂದ ಸೇವೆ ಸಲ್ಲಿಸಿರುವ, ಮಕ್ಕಳ ಕೊರತೆಯಿಂದಾಗಿ ಸೇವೆಯಿಂದ ಕೈ ಬಿಡಲಾದ ಕಾರ್ಯಕರ್ತೆಯರಿಗೂ, ಸೇವೆಯಲ್ಲಿ ಮೃತಪಟ್ಟವರಿಗೂ ಇಡಿಗಂಟು ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಫೆಡರೇಷನ್ ಉಪಾಧ್ಯಕ್ಷ ಕೆಲವಳ್ಳಿ ಕಳಸಪ್ಪ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಇಂದುಮತಿ, ಉಪಾಧ್ಯಕ್ಷರಾದ ನಾಗಮಣಿ, ಗ್ರೇಸಿ, ಕಾರ್ಯದರ್ಶಿ ಶಮೀಮ್ ಬಾನು, ಸಹ ಕಾರ್ಯದರ್ಶಿ ಭಾಗ್ಯ ಹಾಜರಿದ್ದರು.ಗೌರವಧನ ಹೆಚ್ಚಳಕ್ಕೆ ಒತ್ತಾಯ
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನ ಹೆಚ್ಚಿಸಬೇಕು ಎಂದು ಜಿಲ್ಲಾ ಎಐಟಿಯುಸಿ ಸಮಿತಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.ಈ ಸಂಬಂಧ ಶಿರಸ್ತೇದಾರ್ ಮನು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಮಿತಿ ಜಿಲ್ಲಾಧ್ಯಕ್ಷೆ ಗ್ರೇಟಾ ಫರ್ನಾಂಡೀಸ್, ರಾಜ್ಯದಲ್ಲಿ ಸುಮಾರು 1.40 ಲಕ್ಷ ಅಂಗನವಾಡಿ ಮಹಿಳಾ ನೌಕರರು ಸೇರಿದಂತೆ ದೇಶಾದ್ಯಂತ 28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ದುರ್ಬಲ ವರ್ಗದ ಮಕ್ಕಳ ಪೌಷ್ಟಿಕ ಆಹಾರ, ಪಾಲನೆ, ಮೊದಲಾದ ಸಮಸ್ಯೆಗಳನ್ನು ನಿವಾರಿಸಲು ಯೋಧರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಈ ಸಂಬಂಧ ಇತ್ತೀಚೆಗೆ ಗುಜರಾತ್ ಉಚ್ಚ ನ್ಯಾಯಾಲಯ ಅಂಗನವಾಡಿ ನೌಕರರ ಕನಿಷ್ಟ ವೇತನ ನಿಗದಿಗೆ ಆದೇಶ ಜಾರಿಗೊಳಿಸಿದೆ. ಅದರಂತೆ ರಾಜ್ಯ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕಾರ್ಯಕರ್ತರಿಗೆ ಮಾಸಿಕ 15 ಸಾವಿರ ರು. ಮತ್ತು ಸಹಾಯಕಿಯರಿಗೆ 10 ಸಾವಿರ ರುಪಾಯಿ ಗೌರವಧನ ನೀಡಬೇಕು ಎಂದು ಹೇಳಿದರು.ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ ಬಸವರಾಜ್, ತಾಲ್ಲೂಕು ಅಧ್ಯಕ್ಷೆ ಶೈಲಾ ಬಸವರಾಜ್, ಕಾರ್ಯದರ್ಶಿ ವಸಂತ ಧರ್ಮೇಗೌಡ, ಖಜಾಂಚಿ ಸುಖನ್ಯ, ಕಡೂರು ಅಧ್ಯಕ್ಷೆ ಪಾರ್ವತಮ್ಮ, ತರೀಕೆರೆ ಅಧ್ಯಕ್ಷೆ ಸವಿತಾ, ಅಜ್ಜಂಪುರ ಅಧ್ಯಕ್ಷೆ ವಿಜಯಕುಮಾರಿ, ಮೂಡಿಗೆರೆ ಅಧ್ಯಕ್ಷೆ ಶೈಲಾ, ನರಾಪುರ ಅಧ್ಯಕ್ಷೆ ಅನಿತಾ, ಸಮಾಜ ಸೇವಕಿ ರಾಧಾ ಸುಂದರೇಶ್ ಹಾಜರಿದ್ದರು.