ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಾಂತ್ ಅಲಿಯಾಸ್ ಶ್ರೀಕಿ ಮತ್ತು ಆತನ ಸ್ನೇಹಿತ ರಾಬಿನ್ ಖಂಡೇಲವಾಲ್ ಅವರು ತಮ್ಮ ವಿರುದ್ಧದ ವಂಚನೆ ಮತ್ತು ನಂಬಿಕೆ ದ್ರೋಹ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಾಂತ್ ಅಲಿಯಾಸ್ ಶ್ರೀಕಿ ಮತ್ತು ಆತನ ಸ್ನೇಹಿತ ರಾಬಿನ್ ಖಂಡೇಲವಾಲ್ ಅವರು ತಮ್ಮ ವಿರುದ್ಧದ ವಂಚನೆ ಮತ್ತು ನಂಬಿಕೆ ದ್ರೋಹ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.ಬೆಂಗಳೂರು ಜಯನಗರದ ಶ್ರೀಕಾಂತ್ ಮತ್ತು ಪಶ್ಚಿಮ ಬಂಗಾಳದ ಮೂಲದವನಾದ ಬಿಟ್ ಕಾಯಿನ್ ಟ್ರೇಡರ್ ರಾಬಿನ್ ಖಂಡೇಲವಾಲ್ ಸಲ್ಲಿಸಿರುವ ಅರ್ಜಿ, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆ ನಡೆಸಿದ ಪೀಠ, ಅರ್ಜಿ ಕುರಿತಂತೆ ಪ್ರಕರಣದ ದಾಖಲೆ ಪರಿಶೀಲಿಸಿ ವಾದ ಮಂಡಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್ ಅವರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.ಪ್ರಕರಣವೇನು?
ಕಳೆದ 2019ರಲ್ಲಿ ಕೃಷ್ಣ ಹಾಗೂ ರಾಬಿನ್ ಖಂಡೇಲವಾಲ್ ಅವರು ಭೇಟಿಯಾಗಿ 28 ಲಕ್ಷ ನೀಡಿದರೆ ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡಿ 28 ಲಕ್ಷದ ಜೊತೆಗೆ 17 ಲಕ್ಷ ಸೇರಿಸಿ ಒಟ್ಟು 45 ಲಕ್ಷ ರು. ನೀಡುತ್ತೇವೆ ಎಂದು ತಿಳಿಸಿ ಹಣ ಪಡೆದಿದ್ದರು. ಹಣವನ್ನು ಅಜಿತ್ ಖಂಡೇಲವಾಲ್ ಎಂಬಾತನ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಒಂದು ತಿಂಗಳ ನಂತರ ಹಣ ಕೇಳಿದಾಗ ಸ್ವಲ್ಪ ದಿನಗಳಲ್ಲೇ ವಾಪಸ್ ಮಾಡುವುದಾಗಿ ಹೇಳಿ, ಆನಂತರ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಬೆಂಗಳೂರಿನ ಇಂದಿರಾ ನಗರದ ಯಶೋದಾ ದೇವಿ ದೂರು ನೀಡಿದ್ದರು.ಅದರನ್ವಯ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ, ರುಬಿಟ್ ಆನ್‌ಲೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ರಾಬಿನ್ ಖಂಡೇವಾಲ್ ಮತ್ತು ಅಜಿತ್ ಖಂಡೇಲವಾಲ್ ವಿರುದ್ಧ ಅಶೋಕ ನಗರ ಠಾಣೆಯಲ್ಲಿ 2020ರ ನ.19ರಂದು ಐಪಿಸಿ ಸೆಕ್ಷನ್‌ಗಳಾದ 406 (ನಂಬಿಕೆ ದ್ರೋಹ) 420 (ವಂಚನೆ) ಅಡಿ ಪ್ರಕರಣ ದಾಖಲಾಗಿತ್ತು. ಈ ಎಫ್‌ಐಆರ್ ಮತ್ತು ಅದರ ಸಂಬಂಧ 2021ರ ಫೆ.10ರಂದು ಪೊಲೀಸರು ಅಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಶ್ರೀಕಾಂತ್ ಮತ್ತು ರಾಬಿನ್ ಕೋರಿದ್ದಾರೆ.
