ಸಾರಾಂಶ
ಉಳಿದ ಲಿಂಗಾಯತ ಸಮುದಾಯದವರಿಗೆ ಅನ್ಯಾಯ-ಬಿಜೆಪಿ ಮುಖಂಡರುಕನ್ನಡಪ್ರಭ ವಾರ್ತೆ ಕುಷ್ಟಗಿ
ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ರೆಡ್ಡಿ ಜನಾಂಗದವರಿಗೆ ಮಾತ್ರ ಆದ್ಯತೆ ಕೊಡುವ ಮೂಲಕ ಉಳಿದ ಲಿಂಗಾಯತ ಸಮುದಾಯದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಮುಖಂಡರು ಆರೋಪಿಸಿದರು.ದೊಡ್ಡನಗೌಡ ಪಾಟೀಲ ತಾಲೂಕಿನಲ್ಲಿ ಲಿಂಗಾಯತರನ್ನು ತುಳಿಯುವ ಕೆಲಸ ಮಾಡಿದ್ದಾರೆ, ಅವರಿಗೆ ಮತಿಭ್ರಮಣೆಯಾಗಿದೆ ಎಂದು ಎರಡು ದಿನಗಳ ಹಿಂದೆ ಅಮರೇಗೌಡ ಬಯ್ಯಾಪುರ ಅವರು ತಮ್ಮ ಪಕ್ಷದ ಮುಖಂಡರ ಮೂಲಕ ಹೇಳಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಶಂಕರಗೌಡ ಪಾಟೀಲ, ರವಿಕುಮಾರ ಹಿರೇಮಠ ಇತರರು ಭಯ್ಯಾಪುರ ವಿರುದ್ಧ ಆರೋಪ ಮಾಡಿದ್ದಾರೆ.
ಅಮರೇಗೌಡ ಬಯ್ಯಾಪುರ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಕ್ಕಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಇದು ಸರಿಯಲ್ಲ. ಅವರು ರೆಡ್ಡಿ ಜನಾಂಗದವರನ್ನು ಮಾತ್ರ ರಾಜಕೀಯವಾಗಿ, ಆರ್ಥಿಕವಾಗಿ ಬೆಳೆಸಿದ್ದಾರೆಯೇ ಹೊರತು ವೀರಶೈವ ಲಿಂಗಾಯತ ಸಮುದಾಯದ ಜನರನ್ನು ಎಂದಿಗೂ ಬೆಳೆಸಿಲ್ಲ ಎಂದರು.ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕುಷ್ಟಗಿ ಕ್ಷೇತ್ರದಲ್ಲಿ ಮತಗಳು ಕಡಿಮೆ ಬಂದಿರಬಹುದು. ಪ್ರತಿಯೊಂದು ಚುನಾವಣೆಯಲ್ಲೂ ಬದಲಾವಣೆ ಆಗುವುದು ಸಹಜ. ನಮ್ಮ ಸೋಲಿನ ಕುರಿತು ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಅದರ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುವ ಅಗತ್ಯವಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ನಮ್ಮ ಕಾರ್ಯಕರ್ತರು ನಿಷ್ಠೆಯಿಂದ ಕಾರ್ಯ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಯಾರೂ ಮೋಸ ಮಾಡಿಲ್ಲ. ಬಿಟ್ಟಿ ಗ್ಯಾರಂಟಿಗಳು ನಮ್ಮ ಸೋಲಿಗೆ ಕಾರಣವಾಗಿದೆಯೇ ಹೊರತು ಯಾರ ಮೇಲೆಯೂ ಆರೋಪ ಮಾಡುವಂತಿಲ್ಲ ಎಂದರು.
ಶಾಸಕ ದೊಡ್ಡನಗೌಡ ಪಾಟೀಲ ಅವರು ಲಿಂಗಾಯತ ಸಮುದಾಯದವರಿಗೆ ಜಿಪಂ ಕ್ಷೇತ್ರ, ತಾಪಂ ಕ್ಷೇತ್ರ, ಎಪಿಎಂಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಕೊಟ್ಟು ಜನಪ್ರತಿನಿಧಿಗಳನ್ನಾಗಿ ಮಾಡಿದ್ದಾರೆ. ಅವರು ಸರ್ವ ಸಮಾಜದ ನಾಯಕ ಎಂದರು.ಪಕ್ಷದ ಮುಖಂಡರಾದ ಜಿ.ಕೆ. ಹಿರೇಮಠ, ಶಶಿಧರ ಕವಲಿ, ಸಂಗಪ್ಪ ಲಮಾಣಿ ಇದ್ದರು.