ರಾಮನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ಕೇಂದ್ರ ಚುನಾವಣಾ ಆಯೋಗ ನಿಗದಿ ಪಡಿಸಿರುವ ನಿಯಮಾವಳಿ ಮಹಾಗೂ ಮಾರ್ಗಸೂಚಿಗಳನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗಾಳಿಗೆ ತೂರುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌-ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಜಮಾಯಿಸಿದ ಉಭಯ ಪಕ್ಷಗಳ ಕಾರ್ಯಕರ್ತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಅಕ್ರಮ ಬಾಂಗ್ಲಾ ವಲಸಿಗರಿಗೂ ಮತದಾನದ ಹಕ್ಕು ನೀಡುತ್ತಿರುವ ಕಾಂಗ್ರೆಸ್ ಸರ್ಕಾರ, ಎಸ್‌ಐಆರ್ ನಿಯಮ ಗಾಳಿಗೆ ತೂರುತ್ತಿರುವ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಭಟನಾಕಾರರು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ದೇಶಕ್ಕೆ ಒಂದು ಕಾನೂನಾದರೆ, ರಾಮನಗರಕ್ಕೆ ಮತ್ತೊಂದು ಕಾನೂನು ಎನ್ನುವಂತಾಗಿದೆ. ಎಸ್ ಐಆರ್ ಪ್ರಕ್ರಿಯೆಯಲ್ಲಿ ನಿಯಮಾವಳಿಗಳನ್ನು ಗಾಳಿ ತೂರಿ ಕಾಂಗ್ರೆಸ್ ಚೇಲಾಗಳಂತೆ ಕೆಲಸ ಮಾಡುತ್ತಿರುವ ಬಿಎಲ್ ಒಗಳನ್ನು ಕೂಡಲೇ ಅಮಾನತು ಮಾಡಬೇಕು. ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿಶೇಷ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಎಸ್‌ಐಆರ್ ಪ್ರಕ್ರಿಯೆ ಹೊಸದಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೊರ ದೇಶದಿಂದ ಅಕ್ರಮವಾಗಿ ಬಂದು ನೆಲೆಸಿದವರು ಮತ್ತು ಮೃತರ ಹೆಸರನ್ನು ತೆಗೆಯುವ ಪ್ರಕ್ರಿಯೆ ಇದಾಗಿದೆ. ನಿಯಮಾವಳಿಗಳ ಪ್ರಕಾರ ಬಿಎಲ್ ಒಗಳು ಮನೆ ಮನೆಗೆ ಹೋಗಿ ಗಮತಿ ನಮೂನೆ ನೀಡಬೇಕು. ಆದರೆ, ಕಾಂಗ್ರೆಸ್ ಸರ್ಕಾರ ಬಿಎಲ್ ಒಗಳನ್ನು ತನ್ನ ಅಣತಿಯಂತೆ ನಡೆಸಿಕೊಳ್ಳುತ್ತಿದೆ. ಕೂಡಲೇ ತಪ್ಪಿತಸ್ಥ ಬಿಎಲ್ ಒಗಳನ್ನು ಅಮಾನತ್ತು ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ ಒತ್ತಾಯಿಸಿದರು.

ಜಿಲ್ಲಾಡಳಿತದ ಮೇಲೆ ನಂಬಿಕೆ ಇಲ್ಲ:


ಬಿಜೆಪಿ ರಾಮನಗರ ಮಂಡಲ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಎಸ್ ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪಾಲನೆಯನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗುತ್ತಿದೆ. ಮುಖ್ಯಮಂತ್ರಿಗಳ ಅಣತಿಯಂತೆ ನಡೆದುಕೊಳ್ಳುತ್ತಿರುವ ಜಿಲ್ಲಾಡಳಿತದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗವೇ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ , ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ಉಪಾಧ್ಯಕ್ಷ ಚಿನ್ನಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ರಾಮನಗರ ಮಂಡಲ ಅಧ್ಯಕ್ಷ ಗೌತಮ್ ಗೌಡ, ಮುಖಂಡರಾದ ಮಂಜುನಾಥ್, ಗೋವಿಂದನಹಳ್ಳಿ ನಾಗರಾಜ್, ಜಿ.ಟಿ.ಕೃಷ್ಣ, ಗೂಳಿಗೌಡ, ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ, ಜಯಕುಮಾರ್, ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು, ಬಿಜೆಪಿ ಮುಖಂಡರಾದ ಎಸ್.ಆರ್.ನಾಗರಾಜ್, ಮುರಳೀಧರ್, ದೇವರಾಜು, ರುದ್ರದೇವರು ಮತ್ತಿತರರು ಭಾಗವಹಿಸಿದ್ದರು.

3ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.