ರಾಮನಗರ: ಸರ್ಕಾರ ಬರುತ್ತೆ ಹೋಗುತ್ತೆ, ಮುಖ್ಯಮಂತ್ರಿಗಳೂ ಬರ್ತಾರೆ ಹೋಗ್ತಾರೆ. ನಿಮ್ಮ ಮುಖ್ಯಮಂತ್ರಿ ಗೂಟ ಹೊಡೆದುಕೊಂಡು ಇರಲ್ಲ. ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್ )ಯಲ್ಲಿ ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿರುವ ನಿಯಮಾವಳಿ ಹಾಗೂ ಮಾರ್ಗಸೂಚಿಗಳನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗಾಳಿಗೆ ತೂರಿ ಅಕ್ರಮ ಎಸಗುತ್ತಿದೆ ಎಂದು ಆರೋಪಿಸಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಎಸ್ ಐಆರ್ ಪ್ರಕ್ರಿಯೆಯ ನಿಯಮ ಉಲ್ಲಂಘಿಸಿದ ಬಿಎಲ್‌ಒಗಳಿಗೆ ಕೇವಲ ನೋಟಿಸ್ ನೀಡಿ ನಾಟಕ ಮಾಡುತ್ತಿದ್ದಾರೆ. ಕೂಡಲೇ ಅವರೆಲ್ಲರನ್ನು ಅಮಾನತು ಮಾಡಬೇಕು. ರಾಮನಗರದ 35 ಸೂಕ್ಷ್ಮ ಮತಗಟ್ಟೆಗಳ ಎಸ್‌ಐಆರ್ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗವೇ ಖುದ್ದಾಗಿ ಬಂದು ನಡೆಸಬೇಕು. ಅಕ್ರಮದ ಎಲ್ಲಾ ವೀಡಿಯೋ ಸಾಕ್ಷ್ಯಗಳನ್ನು ಪೆನ್‌ಡ್ರೈವ್‌ನಲ್ಲಿ ಹಾಕಿ ರಾಜ್ಯ ಚುನಾವಣಾ ಆಯೋಗ ಹಾಗೂ ದೆಹಲಿಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗುವುದು. ಅಗತ್ಯಬಿದ್ದರೆ ಪಶ್ಚಿಮ ಬಂಗಾಳದಂತೆ ಸೆಂಟ್ರಲ್ ಫೋರ್ಸ್ ತಂದು ಎಸ್‌ಐಆರ್ ನಡೆಸುವಂತೆ ಒತ್ತಾಯಿಸುತ್ತೇವೆ ಎಂದರು.

ದೆಹಲಿಯಲ್ಲಿ ಇಂಗ್ಲಿಷ್‌ನಲ್ಲಿ ಪ್ರೆಸ್‌ಮೀಟ್:

ದೆಹಲಿಯಲ್ಲಿ ಕುಳಿತು ವೋಟ್ ಚೋರಿ ಬಗ್ಗೆ ಮಾತನಾಡುವ ರಾಹುಲ್‌ಗಾಂಧಿ ಅವರೇ, ಕರ್ನಾಟಕದಲ್ಲಿ ನಿಮ್ಮದೇ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಬಂದು ನೋಡಲಿ. ಈ ವಿಚಾರವನ್ನು ದೆಹಲಿಗೆ ತೆಗೆದುಕೊಂಡು ಹೋಗಿ, ರಾಹುಲ್ ಗಾಂಧಿಗೆ ಅರ್ಥವಾಗುವಂತೆ ಇಂಗ್ಲಿಷ್‌ನಲ್ಲೇ ಪ್ರೆಸ್‌ಮೀಟ್ ಮಾಡುತ್ತೇನೆ ಎಂದು ತಿಳಿಸಿದರು.


ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಡುತ್ತಿರುವ ಎಲ್ಲಾ ಯೋಜನೆಗಳು 30 ಸಾವಿರ ಕೋಟಿ ದಾಟುತ್ತಿವೆ. ಇದನ್ನು ನೋಡಿದರೆ ದೆಹಲಿಯ ಗಾಂಧಿ ಕುಟುಂಬಕ್ಕೆ ಇವರು ಯಾವುದೋ ದೊಡ್ಡ ಕಮಿಟ್‌ಮೆಂಟ್ ಕೊಟ್ಟು ಬಂದ ಹಾಗೆ ಕಾಣುತ್ತಿದೆ. ಸುಮಾರು 9 ಸಾವಿರ ಕೋಟಿ ರುಪಾಯಿ ಕೊಳ್ಳೆ ಹೊಡೆದು ಚುನಾವಣೆ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಮನಗರ ರಹೀಂನಗರ ಆಗುವ ಭಯ:

ಮುಸ್ಲಿಮರ ವಾರ್ಡುಗಳಾದ ಟಿಪ್ಪುನಗರ, ಯಾರಬ್‌ನಗರ, ಮೆಹಬೂಬ್ ನಗರಗಳಲ್ಲಿ ಅಕ್ರಮವಾಗಿ ಎಸ್‌ಐಆರ್ ನಡೆಯುತ್ತಿದೆ. ಅಲ್ಲಿಗೆ ಹೋಗಲು ಭಯದ ವಾತಾವರಣ ಸೃಷ್ಟಿಸಲಾಗಿದೆ. ಆದರೂ ನಮ್ಮ ಕಾರ್ಯಕರ್ತರು ಧೈರ್ಯ ಮಾಡಿ ಒಳಗೆ ಹೋಗಿ ವಿಡಿಯೋ ಸಾಕ್ಷ್ಯ ತಂದಿದ್ದಾರೆ. ಇದನ್ನು ನೋಡಿದರೆ ರಾಮನಗರ ಮುಂದೆ ‘ರಹೀಂನಗರ’ ಆಗುತ್ತೋ ಏನೋ ಎಂಬ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ ಚುನಾವಣೆಯಲ್ಲೂ ನನ್ನ ವಿರುದ್ಧ ಹೊರರಾಜ್ಯದ ಜನರನ್ನು ತಂದು ಕಳ್ಳ ಮತದಾನ ಮಾಡಿಸಿ ಇವರು ಗೆದ್ದಿದ್ದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ರಾಮನಗರದಿಂದ ಆಟೋಗಳಲ್ಲಿ ಬಂದು ಜನ ಮತ ಹಾಕಿದರು. ಈಗಲೂ ರಾಮನಗರದ ಜನತೆ ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ಹಾಳಾಗಲಿದೆ. ಐಎಎಸ್ ಓದಿರುವ ಈ ಆಸಾಮಿಗೆ ಮೂಲ ನಿಯಮಗಳೇ ಗೊತ್ತಿಲ್ಲ. ಅರ್ಜಿ ಹಂಚುವಾಗ ಮೂರೂ ಪಕ್ಷಗಳ ಬಿಎಲ್‌ಒಗಳು ಇರಬೇಕು, ಮೂರು ಬಾರಿ ಮನೆಮನೆಗೆ ಹೋಗಿ ಹಂಚಬೇಕು. ಆದರೆ ರಾಮನಗರ ಡೀಸಿ ತಾನೇ ಹೊಸ ಕಾನೂನು ಬರೆದಂತೆ ವರ್ತಿಸುತ್ತಾ ನನ್ನನ್ನೇ ದಾರಿ ತಪ್ಪಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದರು.

ಕೋಟ್ ...

ಕುಣಿಗಲ್‌ನಲ್ಲಿ ಒಂದು ಕೆಟ್ಟ ಜೀನ್ ಇದೆ. ಅವರು ಡಾಕ್ಟರ್ ಅಂತೆ, ಯಾವ ರೀತಿ ಆಪರೇಷನ್ ಮಾಡ್ತಾರೋ ಗೊತ್ತಿಲ್ಲ, ಅಲ್ಲೂ ಎಸ್‌ಐಆರ್ ಅಕ್ರಮ ಮಾಡ್ತಿದ್ದಾರೆ. ಇನ್ನು ಇಲ್ಲಿನ ಜನಪ್ರತಿನಿಧಿ ಪುಣ್ಯಾತ್ಮ ಆಸ್ಪತ್ರೆಯಲ್ಲೇ ಕೂತು ಬಿಎಲ್‌ಒಗಳಿಗೆ ಫೋನ್ ಮಾಡಿ ನಮ್ಮಪ್ಪನ ಸರ್ಕಾರ ಇದೆ, ನಾನು ಹೇಳಿದ ಹಾಗೆ ಮಾಡು ಎಂದು ಬೆದರಿಸುತ್ತಿದ್ದಾರಂತೆ.

-ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ಜೆಡಿಎಸ್ ಯುವ ಘಟಕ

3ಕೆಆರ್ ಎಂಎನ್ 4.ಜೆಪಿಜಿ

ಪ್ರತಿಭಟನೆಯಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.