ಭದ್ರಾ ನೀರಿಗಾಗಿ ಬಿಜೆಪಿ-ಜೆಡಿಎಸ್‌ನಿಂದ ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸುತ್ತಿರುವುದು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ನಿರಂತರ ಧರಣಿ ಸತ್ಯಾಗ್ರಹದ ಕಾವು ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನೂರಾರು ಕಾರ್ಯಕರ್ತರು ಹಾಗೂ ರೈತರು ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಹಾಗೂ ನೀರಾವರಿ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನೀರು ಬಿಡುಗಡೆ ಕುರಿತು ಸ್ಪಷ್ಟನೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಧಿಕಾರಿಗಳ ಆಗಮನ ವಿಳಂಬವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಆವರಣದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ನೂಕಿ ಕಚೇರಿಯ ಮುಖ್ಯ ದ್ವಾರದವರೆಗೂ ಮುನ್ನುಗಿದರು ಈ ವೇಳೆ ಮುಖ್ಯದ್ವಾರವನ್ನು ಪೋಲೀಸರು ಬಂದ್ ಮಾಡಿ ಅಲ್ಲಿಯೇ ಅವರನ್ನು ತಡೆದರು.ಸ್ಥಳಕ್ಕಾಗಮಿಸಿದ ಭದ್ರಾ ಮೇಲ್ದಂಡೆಯ ಸೂಪರಿಂಡೆಂಟ್ ಎಂಜಿನಿಯರ್ ಕವಿತಾ ಮಾತನಾಡಿ, ಚಿತ್ರದುರ್ಗ ನಾಲೆಯಲ್ಲಿ ನೀರು ಬಿಡುವ ವಿಚಾರ ಸೆ.3ರಂದು ನಡೆಯಲಿರುವ ಸಂಪುಟದ ಸಭೆಯಲ್ಲಿ ದಿನಾಂಕ ನಿಗದಿಯಾಗುವ ನೀರೀಕ್ಷೆ ಇದೆ ಅಲ್ಲಿಯವರೆಗೆ ಸಮಯಾವಕಾಶ ನೀಡುವಂತೆ ಕೋರಿದರು. ಅಲ್ಲಿದೆ ಉಳಿದ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ತಿಳಿಸಿದರು.
ಅಧಿಕಾರಿಗಳ ಕೋರಿಕೆಗೆ ಉತ್ತರಿಸಿದ ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ ನಿಮ್ಮ ಭರವಸೆಯ ಮೇರೆಗೆ ಧರಣಿ ಸತ್ಯಾಗ್ರಹವನ್ನು ಸಚಿವ ಸಂಪುಟ ಸಭೆಯ ನಿರ್ಧಾರದವರೆಗೆ ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಆದರೆ ಸಚಿವ ಸಂಪುಟ ಸಭೆಯಲ್ಲಿ ರೈತರ ಪರವಾಗಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಮುಂದಿನ ಹಂತದಲ್ಲಿ ಹೋರಾಟವನ್ನು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ರೂಪಿಸಿ ಮಠಾಧೀಶರು, ರೈತ ಮುಖಂಡರು, ವರ್ತಕರು, ಬಸ್ ಮತ್ತು ಆಟೋ ಮಾಲೀಕರ ಸಂಘಟನೆಗಳು ಸೇರಿದಂತೆ ವಿವಿಧ ವರ್ಗದವರನ್ನು ಒಳಗೊಂಡು ಸಭೆ ನಡೆಸಲಾಗುವುದು. ಬಳಿಕ ಸಾವಿರಾರು ಜನರೊಂದಿಗೆ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದು ಹಾಗೂ ತಾಲೂಕು ಬಂದ್‌ಗೆ ಕರೆ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಎಸ್. ಕಲ್ಮಠ, ತಾಲೂಕು ಬಿಜೆಪಿ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಜೆಡಿಎಸ್ ಅಧ್ಯಕ್ಷ ಕಿರಣ್‌ಕುಮಾರ್, ಹೆಬ್ಬಳ್ಳಿ ಮಲ್ಲಿಕಾರ್ಜುನ್ , ವಕೀಲ ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಬೋಕಿಕೆರೆ ನಾಗರಾಜ್, ಚಿತ್ತಪ್ಪ, ಪನ್ನಗರಾಯ್ಕರ್, ಮುಖಂಡರಾದ ಹೆಗ್ಗೆರೆ ಶಂಕರಪ್ಪ, ದೊಡ್ಡಘಟ್ಟ ದ್ಯಾಮಪ್ಪ, ಮಾವಿನಕಟ್ಟೆ ಗುರುಸ್ವಾಮಿ ಸೇರಿದಂತೆ ಬಿಜೆಪಿ–ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಭಾಗವಹಿಸಿದ್ದರು.