ರಾಣಿಬೆನ್ನೂರು ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರು ಎನ್‌ಡಿಎ ನೇತೃತ್ವದಲ್ಲಿ ಸೋಮವಾರ ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರು ಎನ್‌ಡಿಎ ನೇತೃತ್ವದಲ್ಲಿ ಸೋಮವಾರ ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಮಯದಲ್ಲಿ ಕೃಷಿ ಇಲಾಖೆ ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಕಣ್ಣಿಗೆ ಕಾಣುವಂತಿದ್ದರೂ ಉಸ್ತುವಾರಿ ಸಚಿವರು ಬೆಳೆ ಚೆನ್ನಾಗಿದೆ ಅಂತಹ ಹೇಳುತ್ತಾರೆ. ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್ ಶಾಸಕರು ಇದ್ದರೂ ಇಲ್ಲಿನ ರೈತರ ಬಗ್ಗೆ ಅವರಿಗೆ ಯಾವುದೇ ಕಳಕಳಿ ಇಲ್ಲವಾಗಿದೆ. ಹಿರೇಕೆರೂರು, ಬ್ಯಾಡಗಿ, ರಟ್ಟೀಹಳ್ಳಿ, ರಾಣಿಬೆನ್ನೂರು ಕೆರೆ ತುಂಬಿಸುವ ಯೋಜನೆ ಮರೆತಿದ್ದಾರೆ. ಇದರಿಂದ ಮುಂದಿನ ಬೇಸಿಗೆಯಲ್ಲಿ ಬದುಕಲು ಕಷ್ಟವಾಗುತ್ತದೆ. ಈಗ ಕೆರೆ ತುಂಬಿಸಿ ಇಟ್ಟುಕೊಂಡರೆ ಬೇಸಿಗೆಯಲ್ಲಿ ಸಹಕಾರಿಯಾಗಲಿದೆ. ರಾಜ್ಯ ಸರ್ಕಾರ ಮೋಡ ಬಿತ್ತನೆ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 190 ಕೋಟಿ ಬೆಳೆ ಪರಿಹಾರ, ₹ 435 ಕೋಟಿ ವಿಮೆ ಹಣ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ನಿಲ್ಲಿಸಿದೆ. ರಾಜ್ಯದಲ್ಲಿ ಈ ವರ್ಷ ಶೇ.38ರಷ್ಟು ಮಳೆ ಕೊರತೆಯಿದೆ. ಪ್ರಜಾ ಸೇವಾ ಕಾರ್ಯಕ್ರಮವು ನಮ್ಮ ಸರ್ಕಾರದಲ್ಲಿ ಕೈಗೊಳ್ಳಲಾಗುತ್ತಿದ್ದ ಜನಸ್ಪಂದನಕ್ಕೆ ಪರ್ಯಾಯವಾಗಿದೆ. ಕಳೆದ ಆರು ತಿಂಗಳಿಂದ ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನ ಬರುತ್ತಿಲ್ಲ. ಇದನ್ನು ಕೇಳಿದರೆ ಗೃಹಲಕ್ಷ್ಮಿ, ಶಕ್ತಿ ಯೋಜನೆ ಬಗ್ಗೆ ಹೇಳುತ್ತಾರೆ. ರಾಜ್ಯ ಸರ್ಕಾರಕ್ಕೆ ಸಂಪೂರ್ಣ ರಾಜ್ಯದ ರೈತರ ಬಗ್ಗೆ ಕಾಳಜಿಯಿಲ್ಲ. ಬಿಡದಿಯಲ್ಲಿ ರಿಯಲ್ ಎಸ್ಟೇಟ್ ಮಾಡಲು ಹೊರಟಿದ್ದಾರೆ. ಇದರಲ್ಲಿ ಸಿಎಂಗೆ ರು.38 ಸಾವಿರ ಕೋಟಿ ಲಾಭವಾಗಲಿದೆ. ನಮ್ಮ ರೈತರಿಗೆ ಕೇವಲ ಬರಗಾಲ ಘೋಷಣೆ ಮಾಡಿದರೆ ಸಾಲದು. ಅದಕ್ಕೂ ಮೊದಲು ಬೆಳೆ ಪರಿಹಾರ ನೀಡಬೇಕು. ಪೂಜೆ ಮಾಡಿ ಮಠಕ್ಕೆ ಹೋದರೆ ಜನರು ಮರಳಾಗುವುದಿಲ್ಲ, ರೈತರ ಪೂಜೆ ಮಾಡಿ ಆಗ ರಾಜ್ಯ ಸುಭಿಕ್ಷೆಯಾಗಲಿದೆ ಎಂದರು.

ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ನಿಗಮದ ₹ 187 ಕೋಟಿ ಹಗರಣ, ಗೃಹಲಕ್ಷ್ಮೀ ಯೋಜನೆಯ ₹ 5 ಸಾವಿರ ಕೋಟಿ ಅವ್ಯವಹಾರ, ಎಸ್‌ಸಿಟಿ-ಟಿಎಸ್‌ಪಿ ಹಾಗೂ ಕೆಪಿಎಸ್ ಸೇರಿದಂತೆ ಹಲವು ಹಗರಣಗಳ ಆರೋಪಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬರುತ್ತಿವೆ. ಭ್ರಷ್ಟಾಚಾರ, ರೈತ ಹಾಗೂ ಬಡವರ ವಿರೋಧಿ ನೀತಿಗಳಿಂದ ಕೂಡಿರುವ ಇಂತಹ ಸರ್ಕಾರ ತೊಲಗಬೇಕು. ತಾಲೂಕಿನಲ್ಲಿ 2026-27ನೇ ಸಾಲಿನಲ್ಲಿ ಶೇ.99ರಷ್ಟು ಬಿತ್ತನೆಯಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆಯ ಪ್ರಮಾಣ ಶೇ.32ರಷ್ಟು ಕಡಿಮೆಯಾಗಿದೆ. ರೈತರು ವಿವಿಧ ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಹಾಗೂ ಇತರ ಸಂಸ್ಥೆಗಳಿಂದ ಸಾಲ ಪಡೆದು ಬಿತ್ತನೆ ಮಾಡಿದ್ದು, ಇದೀಗ ಬೆಳೆ ಫಲಕೊಡುವ ಹಂತದಲ್ಲಿ ಮಳೆ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಕೊರತೆಯಿಂದ ಬೆಳೆ ಇಳುವರಿ ಶೇ.40ರಿಂದ 50ರಷ್ಟು ಕುಸಿಯುವ ಸಾಧ್ಯತೆಯಿದೆ. ಇಂತಹ ಗಂಭೀರ ಪರಿಸ್ಥಿತಿಯ ನಡುವೆಯೂ ತಾಲೂಕನ್ನು 2026-27ನೇ ಸಾಲಿನ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ ತಾಲೂಕಿನ ರೈತರಿಗೆ ತೀವ್ರ ಅನ್ಯಾಯವಾಗಿದೆ. ಕೂಡಲೇ ಪರಿಸ್ಥಿತಿಯನ್ನು ಮರುಪರಿಶೀಲಿಸಿ ರಾಣಿಬೆನ್ನೂರು ತಾಲೂಕನ್ನು ಬರಪೀಡಿತವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಬಂದಾಗಲೆಲ್ಲ ರಾಜ್ಯದಲ್ಲಿ ಬರಗಾಲ ಬಂದಿದೆ. ಕುಮಾರಸ್ವಾಮಿಯವರು ಸಿಎಂ ಆದಾಗ ರೈತರ ಪರವಾಗಿ ಸಾಕಷ್ಟು ಕೆಲಸ ಮಾಡಿದರು. ಬಿಜೆಪಿ, ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಘೋಷಣೆ ಮಾಡಿದ ಯೋಜನೆಗಳು ಇಂದಿಗೂ ಜೀವಂತವಾಗಿವೆ. ತಾಲೂಕಿನಲ್ಲಿ ಸಾಕಷ್ಟು ಫಸಲು ಹಾಳಾಗಿದೆ. ರೈತರ ಬಗ್ಗೆ ರಾಜ್ಯದ ಸಿಎಂಗೆ ಕಿಂಚಿತ್ತೂ ಕಾಳಜಿಯಿಲ್ಲ. ಬಿ.ಸಿ. ಪಾಟೀಲರು ಮಂತ್ರಿಯಾಗಿದ್ದಾಗ ರೈತರ ಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯವಾಗಿದೆ ಎಂದರು.

ಬಿಜೆಪಿ ನಗರ ಘಟಕ ಅಧ್ಯಕ್ಷ ಮಂಜುನಾಥ ಕಾಟಿ, ಗ್ರಾಮೀಣ ಘಟಕ ಅಧ್ಯಕ್ಷ ಸುಭಾಸ ಶಿರಗೇರಿ, ಜೆಡಿಎಸ್ ಗ್ರಾಮೀಣ ಘಟಕದ ಅಧ್ಯಕ್ಷ ನಿಂಗಣ್ಣ ಸತ್ಯಪ್ಪನವರ, ನಗರ ಘಟಕದ ಅಧ್ಯಕ್ಷ ನಿಂಗರಾಜ ಹೊನ್ನಾಳಿ, ಎಸ್.ಎಸ್ ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ಪರಮೇಶ ಗೂಳಣ್ಣನವರ, ಚೋಳಪ್ಪ ಕಸವಾಳ, ನಿಂಗರಾಜ ಕೋಡಿಹಳ್ಳಿ, ಭಾರತಿ ಜಂಬಗಿ, ಶಿವಕುಮಾರ ನರಸಗೊಂಡರ, ಗಣೇಶ ಬಿದರಿ, ಮಂಜುನಾಥ ಹಲಗೇರಿ, ಎ.ಬಿ ಪಾಟೀಲ, ಪ್ರಕಾಶ ಪೂಜಾರ, ಸಂತೋಷ ತೇವರಿ, ನವೀನ ಅಡ್ಡಿ, ಅಶೋಕ ಪಾಸಿಗಾರ, ಅಮೋಘ ಬಾದಾಮಿ, ಹನುಮಂತಪ್ಪ ಹೆದ್ದೇರಿ, ಶ್ರೀನಿವಾಸ ಜಡಮಲಿ, ಮೌನೇಶ ತಳವಾರ, ಶಾನವಾಜ್ ಖಾನ್, ಕಿರಣ ಲಮಾಣಿ, ಅನಿಲ ಸಿದ್ದಾಳಿ, ಶಿವಕುಮಾರ ಗೌಡಶಿವಣ್ಣನವರ, ಅಜಯ ಮಠದ, ಅಕ್ಷತಾ, ಮಲ್ಲಿಕಾರ್ಜುನ ಮಸಿಂಗಪ್ಪನವರ, ಮಾಳಪ್ಪ ಪೂಜಾರ, ಕುಬೇರಪ್ಪ ಕೊಂಡಜ್ಜಿ, ಪ್ರಕಾಶ ಪೂಜಾರ, ಗೀತಾ ಜಂಬಗಿ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ಶ್ರೀನಿವಾಸ ಹಳ್ಳಳ್ಳಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.