ನಗರದ ಹಬ್ಬುವಾಡಾದಲ್ಲಿ ಸುಸಜ್ಜಿತವಾಗಿದ್ದ ಕಾಂಕ್ರಿಟ್ ರಸ್ತೆಯ ಮೇಲೆ ಅನಗತ್ಯವಾಗಿ ಡಾಂಬರು ಸುರಿದು ರಸ್ತೆಯನ್ನು ವಿರೂಪಗೊಳಿಸಿರುವ ಅಧಿಕಾರಿಗಳ ಕ್ರಮ ಖಂಡಿಸಿರುವ ಬಿಜೆಪಿ ಕಾರವಾರ ಘಟಕದ ಪದಾಧಿಕಾರಿಗಳು, ಕೂಡಲೇ ರಸ್ತೆಯನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅನಗತ್ಯವಾಗಿ ಡಾಂಬರು ಸುರಿದು ರಸ್ತೆಯನ್ನು ವಿರೂಪಗೊಳಿಸಿರುವ ಅಧಿಕಾರಿಗಳ ಕ್ರಮಕ್ಕೆ ಖಂಡನೆ
ಕನ್ನಡಪ್ರಭ ವಾರ್ತೆ ಕಾರವಾರನಗರದ ಹಬ್ಬುವಾಡಾದಲ್ಲಿ ಸುಸಜ್ಜಿತವಾಗಿದ್ದ ಕಾಂಕ್ರಿಟ್ ರಸ್ತೆಯ ಮೇಲೆ ಅನಗತ್ಯವಾಗಿ ಡಾಂಬರು ಸುರಿದು ರಸ್ತೆಯನ್ನು ವಿರೂಪಗೊಳಿಸಿರುವ ಅಧಿಕಾರಿಗಳ ಕ್ರಮ ಖಂಡಿಸಿರುವ ಬಿಜೆಪಿ ಕಾರವಾರ ಘಟಕದ ಪದಾಧಿಕಾರಿಗಳು, ಕೂಡಲೇ ರಸ್ತೆಯನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಹಬ್ಬುವಾಡಾದ ಕಾಂಕ್ರಿಟ್ ರಸ್ತೆಗೆ ಕೆಶಿಫ್ ವತಿಯಿಂದ ಮರು ಡಾಂಬರೀಕರಣ ಮಾಡುವ ಕೆಲಸ ನಡೆದಿತ್ತು. ಆದರೆ, ಈಗಾಗಲೇ ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನು ಹಾಳು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಡಾಂಬರು ಹಾಕಿದ ಬಳಿಕ ಅದನ್ನು ಸರಿಯಾಗಿ ತೆರವುಗೊಳಿಸದ ಕಾರಣ, ರಸ್ತೆಯ ಮೇಲೆ ಸಣ್ಣ-ಸಣ್ಣ ಜಲ್ಲಿ ಕಲ್ಲುಗಳು ಹರಡಿಕೊಂಡಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಸಂಚರಿಸುವಾಗ ವಾಹನಗಳು ಸ್ಕಿಡ್ ಆಗಿ ಅಪಘಾತಕ್ಕೀಡಾಗುವ ಭೀತಿ ಎದುರಾಗಿದೆ ಎಂದು ಬಿಜೆಪಿ ಮುಖಂಡರು ದೂರಿದ್ದಾರೆ.ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಈಗ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆಯಲ್ಲಿ ಬಿದ್ದಿರುವ ಜಲ್ಲಿಕಲ್ಲುಗಳಿಂದ ಸವಾರರು ಬಿದ್ದು ಅನಾಹುತ ಸಂಭವಿಸಿದರೆ ಅದರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ? ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿ ತಕ್ಷಣವೇ ಮಧ್ಯಪ್ರವೇಶಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಹಾಗೂ ರಸ್ತೆಯನ್ನು ತಕ್ಷಣವೇ ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ನಗರಸಭೆಯ ಮಾಜಿ ಅಧ್ಯಕ್ಷ ರವಿರಾಜ ಅಂಕೋಲೆಕರ, ಬಿಜೆಪಿ ನಗರ ಅಧ್ಯಕ್ಷ ನಾಗೇಶ್ ಕುರ್ಡೇಕರ, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.