ಸಾರಾಂಶ
ಬ್ರಹ್ಮಗಿರಿ ಸರ್ಕಲ್ ಬಳಿ ಜಮಾಯಿಸಿದ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಮೊದಲು ನಡುರಸ್ತೆಯಲ್ಲೇ ಕುಳಿತು ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ನಂತರ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಾಯರ್ ಕೆರೆ ಬಳಿಯಿರುವ ಕಾಂಗ್ರೆಸ್ ಭವನಕ್ಕೆ ತೆರಳಲು ಯತ್ನಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿಬೆಂಗಳೂರಿನಲ್ಲಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದನ್ನು ವಿರೋಧಿಸಿ ಬುಧವಾರ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.ನಗರದ ಬ್ರಹ್ಮಗಿರಿ ಸರ್ಕಲ್ ಬಳಿ ಜಮಾಯಿಸಿದ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಮೊದಲು ನಡುರಸ್ತೆಯಲ್ಲೇ ಕುಳಿತು ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ನಂತರ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಾಯರ್ ಕೆರೆ ಬಳಿಯಿರುವ ಕಾಂಗ್ರೆಸ್ ಭವನಕ್ಕೆ ತೆರಳಲು ಯತ್ನಿಸಿದರು. ಇದಕ್ಕೆ ಮೊದಲೇ ಪೊಲೀಸರು ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಬಿಜೆಪಿ ಕಾರ್ಯಕರ್ತರನ್ನು ತಡೆದರು. ಕಾರ್ಯಕರ್ತರು ಬ್ಯಾರಿಕೇಡನ್ನು ತಳ್ಳಿ ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರ ಜೊತೆ ಲಘು ತಳ್ಳಾಟ ಕೂಡ ನಡೆಯಿತು.
ನಂತರ ಪೊಲೀಸರು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಪಕ್ಷದ ನಾಯಕರಾದ ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಜಿತೇಂದ್ರ ಶೆಟ್ಟಿ ಉದ್ಯಾವರ, ಶ್ರೀನಿಧಿ ಹೆಗ್ಡೆ, ರಾಜೇಶ್ ಕಾವೇರಿ, ವಿಖ್ಯಾತ್ ಶೆಟ್ಟಿ, ನಯನಾ ಗಣೇಶ್, ವೀಣಾ ಎಸ್. ಶೆಟ್ಟಿ, ಶಿಲ್ಪಾ ಸುವರ್ಣ, ದಿನಕರ ಬಾಬು ಮತ್ತು ಕಾರ್ಯಕರ್ತರನ್ನು ನಾಲ್ಕು ಬಸ್‌ಗಳಲ್ಲಿ ತುಂಬಿಸಿ ಠಾಣೆಗೆ ಕರೆದುಕೊಂಡು ಹೋಗಿ ಬಿಡುಗಡೆ ಮಾಡಿದರು.* ಸರ್ಕಾರವೇ ಅವಕಾಶ ಕೊಟ್ಟಿತ್ತುಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್ಪಾಲ್ ಸುವರ್ಣ, ದೇಶವಿರೋಧಿ ಘೋಷಣೆಗಳು ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಬಯಲು ಮಾಡಿದೆ. ವಿಧಾನಸೌಧಕ್ಕೆ ಪಾಸ್ ಇಲ್ಲದೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೋಗಿದ್ದಾರೆ. ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಅವಕಾಶ ಮಾಡಿಕೊಟ್ಟಿರುವುದು ಸ್ಪಷ್ಟ ಎಂದು ಆರೋಪಿಸಿದರು.ವಿಧಾನ ಸೌಧದಲ್ಲಿಯೇ ನಡೆದ ಈ ಬೆಳವಣಿಗೆಯನ್ನು ಸ್ವೀಕರ್ ಯು.ಟಿ.ಖಾದರ್, ಮೂಕಪ್ರೇಕ್ಷಕರಂತೆ ನೋಡುವುದನ್ನು ಬಿಟ್ಟು ಸೂಕ್ತ ಕ್ರಮಕ್ಕೆ ಆದೇಶಿಸಬೇಕು. ಇಲ್ಲದಿದ್ದಲ್ಲಿ ಖಾದರ್ ಅವರಿಗೆ ಉಳ್ಳಾಲಕ್ಕೆ ಕಾಲಿಡದಂತೆ ಬಿಜೆಪಿ ಕಾರ್ಯಕರ್ತರು ತಡೆಯಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.