ಯಕ್ಷಗಾನ ಕಲಾವಿದರ ಮಾಸಶನ ಹೆಚ್ಚಿಸಿ: ಶಿವರಾಮ ಜೋಗಿ

| Published : Feb 29 2024, 02:03 AM IST

ಸಾರಾಂಶ

ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯುತ್ತಿರುವ ಕಲಾವಿದರ ಯಕ್ಷ ಪಯಣದ ಸ್ವಾಗತ ಯಕ್ಷಾಯಣ ದಾಖಲೀಕರಣ ಸರಣಿಯ ಮೂರನೇ ಕಾರ್ಯಕ್ರಮ ಉದ್ಘಾಟನೆ,

ಕನ್ನಡಪ್ರಭ ವಾರ್ತೆ ಉಳ್ಳಾಲ

ಕರ್ನಾಟಕ ಸರ್ಕಾರವು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಯಕ್ಷಗಾನ ಕಲಾವಿದರಿಗೆ ನೀಡುತ್ತಿರುವ ಮಾಸಾಶನ 2000 ರು. ವನ್ನು ಕನಿಷ್ಠ 5000 ರು. ಗಳಿಗೆ ಹೆಚ್ಚಿಸಿ ಉಪಕರಿಸಬೇಕು. ಈಗ ನೀಡುತ್ತಿರುವ ಮಾಸಾಶನ ಕಲಾವಿದರ ಔಷಧಿಗೂ ಸಾಕಾಗುತ್ತಿಲ್ಲ. ಆದ್ದರಿಂದ ಸರ್ಕಾರ ಈ ಕುರಿತು ಸ್ಪಂದಿಸಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯುತ್ತಿರುವ ಕಲಾವಿದರ ಯಕ್ಷ ಪಯಣದ ಸ್ವಾಗತ ಯಕ್ಷಾಯಣ ದಾಖಲೀಕರಣ ಸರಣಿಯ ಮೂರನೇ ಕಂತನ್ನು ಬಿ.ಸಿ ರೋಡಿನ ಯಕ್ಷದೀಪ ಮನೆಯಲ್ಲಿ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಕಲಾವಿದರೆಲ್ಲಾ ಜೊತೆಗಿದ್ದು ಪ್ರತಿಯೊಂದು ಪಾತ್ರವನ್ನೂ ನೋಡಿಕೊಂಡು ತಮ್ಮ ಅಭಿನಯ, ಅರ್ಥವನ್ನು ಕಟ್ಟುತ್ತಿದ್ದರು. ಅದರಿಂದ‌ ಒಟ್ಟು ಪ್ರದರ್ಶನಕ್ಕೆ ಸಾವಯವ ಶಿಲ್ಪವಿರುತ್ತಿತ್ತು. ಈಗ ತನ್ನ ಪಾತ್ರಕ್ಕಾಗುವಾಗ ಬರುವುದು ಮುಗಿದ ತಕ್ಷಣ ಹೊರಡುವುದು ಎಂಬಂತಾಗಿದೆ. ಇದರಿಂದ‌ ಪ್ರದರ್ಶನದ ಒಟ್ಟಂದಕ್ಕೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದರು.

ಕಲಾವಿದರು ಯಾವುದೇ ಜಾತಿ, ಧರ್ಮಕ್ಕೆ ವ್ಯಂಗ್ಯ ಮಾಡುವಂತೆ ಮಾತಾಡದೇ ಆಯಾ ಸಮಾಜದ ಆಶಯಗಳನ್ನು ಎತ್ತರಿಸುವಂತೆ ಮಾತಾಡಿದರೆ ಸಾಮರಸ್ಯಕ್ಕೆ ತೊಂದರೆಯಾಗುವುದಿಲ್ಲ. ನಾನು ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದಲ್ಲಿ ಬಪ್ಪಬ್ಯಾರಿ ವೇಷ ಹಾಕಿದ ಬಳಿಕ ಮುಸ್ಲಿಂ ಮಹಿಳೆಯರೇ ಬಂದು ಅಭಿನಂದಿಸಿದ್ದಾರೆ. ಕಲಾವಿದ ಸಾಮರಸ್ಯಕ್ಕೆ ಧಕ್ಕೆ ಬರುವಂತೆ ವರ್ತಿಸಬಾರದು ಎಂದರು. ಶಿವರಾಮ ಜೋಗಿ ಪರಿಪೂರ್ಣ ಕಲಾವಿದ: ಡಾ.ಧನಂಜಯ ಕುಂಬ್ಳೆ

ಆರು ದಶಕಗಳಿಗೂ ಹೆಚ್ಚು ಕಾಲ ವೇಷಧಾರಿಯಾಗಿ ಎಲ್ಲ ಮಾದರಿಯ ವೇಷಗಳನ್ನೂ ನಿರ್ವಹಿಸಿ ಪ್ರಸಿದ್ಧಿಗೆ ಬಂದ ಶಿವರಾಮ ಜೋಗಿಯವರು ಪರಿಪೂರ್ಣ ಕಲಾವಿದ. ಪ್ರೌಢ ಅರ್ಥಗಾರಿಗೆ, ಉತ್ತಮ ಕಂಠ ಮತ್ತು ಅಂಗಸೌಷ್ಠವ ಹಾಗೂ ಪರಂಪರೆಯ ನಾಟ್ಯವೈಭವದಿಂದ ತೆಂಕುತಿಟ್ಟು ಯಕ್ಷಗಾನಕ್ಕೆ ಗೌರವ ತಂದುಕೊಟ್ಟ ಕಲಾವಿದರು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಹೇಳಿದರು.

ಇಂದು ಯಕ್ಷಗಾನದಲ್ಲಿ ಪ್ರದರ್ಶನಗಳಿಗೆ ಪ್ರಧಾನ್ಯ ಸಿಗುತ್ತಿದೆ. ಆದರೆ ಯಕ್ಷಗಾನ ಕುರಿತ ವಿಮರ್ಶೆ ಅಧ್ಯಯನ ಕಡಿಮೆ. ಕೇಂದ್ರವು ಹಿರಿಯ ಕಲಾವಿದರ ಯಕ್ಷಯಾನದ ದಾಖಲೀಕರಣದ ಮೂಲಕ ಅಧ್ಯಯನಕ್ಕೆ ಬೇಕಾದ ಪೂರಕ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದೆ. ಆಧುನಿಕ ಸಾಮಾಜಿಕ ಜಾಲತಾಣಗಳಲ್ಲೂ ಯಕ್ಷಗಾನ ಅಧ್ಯಯನ ವಿಮರ್ಶೆಯ ಚಟುವಟಿಕೆಗಳು ನಡೆಯಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಡಾ. ಸತೀಶ್ ಕೊಣಾಜೆ, ಸಿಬ್ಬಂದಿ ಸ್ವಾತಿ ರಾವ್, ರತ್ನಾಕರವರ್ಣಿ ಪೀಠದ ಸಂಶೋಧನಾ ಸಹಾಯಕ ಪ್ರಸಾದ್, ದಾಖಲೀಕರಣದ ಹರಿಪ್ರಸಾದ್, ಲತಾ ಶಿವರಾಮ ಜೋಗಿ ಉಪಸ್ಥಿತರಿದ್ದರು.