ಹುಬ್ಬಳ್ಳಿ:

ಸಂಸತ್ ಅಧಿವೇಶನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಸಂಸದೆ ಪ್ರಿಯಾಂಕಾ ಗಾಂಧಿ ಅವಹೇಳನಕಾರಿ ಪದ ಬಳಸಿದ್ದಾರೆಂದು ಆಕ್ರೋಶಗೊಂಡ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿಯು ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿ ವರೆಗೆ ತೆರಳಿತು. ಈ ವೇಳೆ ಪ್ರತಿಭಟನಾಕಾರರು ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಮಾರ್ಗ ಮಧ್ಯದಲ್ಲೇ ಪೊಲೀಸರು ಬ್ಯಾರಿಕೇಡ್‌ ಹಾಕಿ ತಡೆದರು. ಇದರಿಂದಾಗಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆಯಿತು.

ಕಾಂಗ್ರೆಸ್‌ ಮುಖಂಡರ ವಿರುದ್ಧ ಘೋಷಣೆ ಕೂಗಿ, ಅವರ ಪೋಸ್ಟರ್‌ ಹಾಗೂ ಭಾವಚಿತ್ರ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಬ್ಯಾರಿಕೇಡ್‌ ದಾಟಿ ನುಗ್ಗಲು ಯತ್ನಿಸಿದಾಗ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಹಳೇ ಸಿಎಆರ್‌ ಮೈದಾನಕ್ಕೆ ಕರೆದೊಯ್ದು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ವಿಪ ಸದಸ್ಯ ಲಿಂಗರಾಜ ಪಾಟೀಲ, ಕಾಂಗ್ರೆಸ್‌ ಮುಖಂಡರಿಗೆ ಆರ್‌ಎಸ್‌ಎಸ್‌ ಮತ್ತು ಹಿಂದೂಗಳನ್ನು ಟೀಕಿಸುವುದು ಬಿಟ್ಟು ಬೇರೇನೂ ಗೊತ್ತಿಲ್ಲ. ಸಂಸತ್‌ ಒಳಗೆ ಮತ್ತು ಹೊರಗೆ ಏನೇನು ಮಾತನಾಡಬೇಕು ಎನ್ನುವ ಕನಿಷ್ಠ ಜ್ಞಾನವೂ ಸಂಸದೆ ಪ್ರಿಯಾಂಕಾ ಗಾಂಧಿಗೆ ಇಲ್ಲ. ಸಚಿವ ಜೋಶಿ ಅವರನ್ನು ಟೀಕಿಸುವ ಭರದಲ್ಲಿ ಅಸಂಸದೀಯ ಪದ ಬಳಸಿದ್ದು ಸರಿಯಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ನಿಂದನೆ ಹಾಗೂ ಅವಹೇಳನಕಾರಿ ಪದಗಳ ಬಳಕೆ ಸಂಸದೀಯ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ತಕ್ಷಣ ಅವರು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.


ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವೆಂಕಟೇಶ ಕಾಟವೆ ಮಾತನಾಡಿ, ಸಂಸತ್ತು ದೇಶದ ಅತ್ಯುನ್ನತ ಪ್ರಜಾಪ್ರಭುತ್ವದ ವೇದಿಕೆ. ಅಲ್ಲಿ ವೈಯಕ್ತಿಕ ನಿಂದನೆ, ಆಧಾರ ರಹಿತ ಆರೋಪ ಮತ್ತು ಅವಹೇಳನಕಾರಿ ಪದಗಳಿಗೆ ಸ್ಥಾನವಿಲ್ಲ. ಪ್ರಹ್ಲಾದ ಜೋಶಿ ಅವರು ಹಲವು ದಶಕಗಳಿಂದ ಪ್ರಾಮಾಣಿಕ ಸಾರ್ವಜನಿಕ ಸೇವೆ ಸಲ್ಲಿಸಿರುವ ಹಿರಿಯ ನಾಯಕರು. ಅವರ ವ್ಯಕ್ತಿತ್ವದ ಮೇಲೆ ಕಳಂಕ ಎರಚುವ ಪ್ರಯತ್ನವನ್ನು ದೇಶದ ಜನತೆ ಎಂದಿಗೂ ಒಪ್ಪುವುದಿಲ್ಲ. ಪ್ರಿಯಾಂಕಾ ಗಾಂಧಿ ಆಧಾರವಿಲ್ಲದ ಆರೋಪಗಳು ಹಾಗೂ ವೈಯಕ್ತಿಕ ಟೀಕೆಗಳು ಕಾಂಗ್ರೆಸ್ ಪಕ್ಷದ ಹತಾಶ ಮನಸ್ಥಿತಿಯನ್ನು ಬಿಂಬಿಸುತ್ತವೆ ಎಂದರು.

ಪ್ರತಿಭಟನೆಯಲ್ಲಿ ಪಾಲಿಕೆ ಸಭಾನಾಯಕ ಶಿವು ಮೆಣಸಿನಕಾಯಿ, ಮುಖಂಡರಾದ ಪ್ರೀತಂ ಅರಕೇರಿ, ನಾರಾಯಣ ಜರತಾರಘರ, ಮಂಜುನಾಥ ಹೆಬಸೂರ, ಶಿವಯ್ಯ ಹಿರೇಮಠ, ಶಕ್ತಿ ಹಿರೇಮಠ, ಮಂಜುನಾಥ ಕಾಟ್ಕರ, ಅಮೃತ ದಾಮೋದರ, ಮಂಜು ಹೆಬಸೂರ, ಮುತ್ತು ಹೆಬ್ಬಳ್ಳಿ, ಹರೀಶ ಹಳ್ಳಿಕೇರಿ, ಹರೀಶ ಸರ್ವಳೆ, ಮಂಜುನಾಥ ಊಟವಾಲೆ, ಪ್ರವೀಣ ಬೆಳಗಲಿ, ಪ್ರಭು ನವಲಗುಂದಮಠ, ಅನೂಪ ಬಿಜವಾಡ, ರಾಜು ಕೋರ್ಯಾಣಮಠ ಸೇರಿದಂತೆ ಹಲವರಿದ್ದರು.