ಉಪಚುನಾವಣೇಲಿ ಫ್ರೆಂಡ್ಲಿ ಫೈಟ್‌ಗೆ ಬಿಜೆಪಿ ಪಂಥಾಹ್ವಾನ

| Published : Jul 18 2024, 01:32 AM IST

ಉಪಚುನಾವಣೇಲಿ ಫ್ರೆಂಡ್ಲಿ ಫೈಟ್‌ಗೆ ಬಿಜೆಪಿ ಪಂಥಾಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಬೇಕು. ಇಲ್ಲದಿದ್ದಲ್ಲಿ ಜೆಡಿಎಸ್‌ನಿಂದ ನೀವು ಅಭ್ಯರ್ಥಿ ನಿಲ್ಲಿಸಿ, ಬಿಜೆಪಿಯಿಂದ ನಾವು ಅಭ್ಯರ್ಥಿ ಹಾಕುತ್ತೇವೆ. ಇಬ್ಬರು ಫ್ರೆಂಡ್ಲಿ ಫೈಟ್ ಆಡೋಣ ಎಂದು ಬಿಜೆಪಿ ಮುಖಂಡರು ಜೆಡಿಎಸ್‌ಗೆ ಪಂಥಾಹ್ವಾನ ನೀಡಿದ್ದಾರೆ.

ಚನ್ನಪಟ್ಟಣ: ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಬೇಕು. ಇಲ್ಲದಿದ್ದಲ್ಲಿ ಜೆಡಿಎಸ್‌ನಿಂದ ನೀವು ಅಭ್ಯರ್ಥಿ ನಿಲ್ಲಿಸಿ, ಬಿಜೆಪಿಯಿಂದ ನಾವು ಅಭ್ಯರ್ಥಿ ಹಾಕುತ್ತೇವೆ. ಇಬ್ಬರು ಫ್ರೆಂಡ್ಲಿ ಫೈಟ್ ಆಡೋಣ ಎಂದು ಬಿಜೆಪಿ ಮುಖಂಡರು ಜೆಡಿಎಸ್‌ಗೆ ಪಂಥಾಹ್ವಾನ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಬಿಜೆಪಿ ಮುಖಂಡರು, ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ಎದುರಾಗಿರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಬೇಕೆಂದು ಒತ್ತಾಯಿಸಿದ್ದಾರೆ.

ಸಿಪಿವೈಗೆ ಟಿಕೆಟ್ ನೀಡಿ:

ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮಾತನಾಡಿ, ನೀರಾವರಿ ಯೋಜನೆಗಳ ಅನುಷ್ಠಾನ ಸೇರಿದಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಯೋಗೇಶ್ವರ್ ಸಾಕಷ್ಟು ಶ್ರಮಿಸಿದ್ದಾರೆ. ಲೋಕಸಭೆ, ವಿಧಾನಸಭೆ ಚುನಾವಣೆ ಸೇರಿದಂತೆ ೫ ಬಾರಿ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದು, ಇದರಿಂದ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಸದೃಢ ಅಡಿಪಾಯ ದೊರೆತಿದೆ. ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಬೇಕು ಎಂದು ಮನವಿ ಮಾಡಿದರು.

ಎನ್‌ಡಿಎ ಅಭ್ಯರ್ಥಿ ಯಾರಾಗಬೇಕು ಎಂದು ಜೆಡಿಎಸ್ ಹಾಗೂ ಬಿಜೆಪಿ ವರಿಷ್ಠರು ಕುಳಿತು ನಿರ್ಧರಿಸಲಿದ್ದಾರೆ. ಪಕ್ಷ ಸೂಚಿಸಿದ ಅಭ್ಯರ್ಥಿ ಪರ ಎಲ್ಲರೂ ಕೆಲಸ ಮಾಡಬೇಕಾಗುತ್ತದೆ. ಅಭ್ಯರ್ಥಿ ಕುರಿತು ಯಾರು ಹೇಳಿಕೆಗಳನ್ನು ನೀಡಿ ಗೊಂದಲ ಮೂಡಿಸಬಾರದು ಎಂದು ಮನವಿ ಮಾಡಿದರು.

ಮೈತ್ರಿಧರ್ಮ ಪಾಲಿಸಿ:

ಬಿಜೆಪಿ ತಾಲೂಕು ಅಧ್ಯಕ್ಷ ತೂಬಿನಕೆರೆ ರಾಜು ಮಾತನಾಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ಉಪಚುನಾವಣೆಯಲ್ಲಿ ನಿಖಿಲ್ ಅವರೇ ಅಭ್ಯರ್ಥಿ, ಯೋಗೇಶ್ವರ್ ಅವರು ನಿಖಿಲ್ ಪರ ದುಡಿಯಲಿ ಎಂದು ಹೇಳಿದ್ದಾರೆ. ಇದನ್ನು ಹೇಳಲು ಇವರೇನು ಜೆಡಿಎಸ್ ವರಿಷ್ಠರಾ? ಬಿಜೆಪಿ ಅಥವಾ ಎನ್‌ಡಿಎ ವರಿಷ್ಠರು ಈ ರೀತಿ ಹೇಳಲು ಇವರಿಗೆ ಸೂಚಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಮೈತ್ರಿ ಅಬಾಧಿತವಾಗಿರಬೇಕು ಎಂಬುದು ನಮ್ಮ ಭಾವನೆ. ಆದರೆ, ಜಯಮುತ್ತು ಅವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಅವರದೇ ಪಕ್ಷದ ಸಾಕಷ್ಟು ಮುಖಂಡರು ಯೋಗೇಶ್ವರ್ ಪರ ಒಲವು ವ್ಯಕ್ತಪಡಿಸಿದ್ದಾರೆ. ಅವರು ಮೈತ್ರಿಗೆ ಧಕ್ಕೆ ತರುವುದನ್ನು ಬಿಡಬೇಕು ಎಂದು ಆಗ್ರಹಿಸಿದ್ದರು.

ಫ್ರೆಂಡ್ಲಿ ಫೈಟ್‌ಗೂ ಸಿದ್ಧ:

ಟಿಕೆಟ್ ವಿಚಾರದಲ್ಲಿ ನಿಮ್ಮ ಪ್ರಯೋಗ ನೀವು ಮಾಡಿ, ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ಅದಕ್ಕೂ ಮೀರಿ ಆಗಬೇಕು ಎಂದರೆ, ರಾಜ್ಯ ಮಟ್ಟದಲ್ಲಿ ಮೈತ್ರಿ ಮುಂದುವರಿಯಲಿ, ಕ್ಷೇತ್ರದಲ್ಲಿ ನಿಮ್ಮ ಪಕ್ಷದಿಂದ ನೀವು ಯಾರನ್ನೂ ಬೇಕಾದರೂ ಹಾಕಿ, ನಾವು ಬಿಜೆಪಿಯಿಂದ ಯೋಗೇಶ್ವರ್ ಅವರನ್ನು ಕಣಕ್ಕಿಳಿಸುತ್ತೇವೆ. ಇಬ್ಬರು ಫ್ರೆಂಡ್ಲಿ ಫೈಟ್ ಮಾಡೋಣ ಎಂದು ಸವಾಲು ಹಾಕಿದರು.

ಸಿಪಿವೈ ಶಕ್ತಿ ಎಲ್ಲರಿಗೂ ಗೊತ್ತಿದೆ:

ಮುಖಂಡ ಮುದುಗೆರೆ ಜಯಕುಮಾರ್(ಜೆ.ಕೆ) ಮಾತನಾಡಿ, ಜಯಮುತ್ತು ಅವರು, ಯೋಗೇಶ್ವರ್ ಮೊದಲು ಜೆಡಿಎಸ್‌ಗೆ ಸೇರ್ಪಡೆಯಾಗಲಿ ಟಿಕೆಟ್ ವಿಚಾರ ಕುರಿತು ಚರ್ಚಿಸೋಣ ಎಂದಿದ್ದಾರೆ. ಸಿಪಿವೈ ಯಾವಾಗ ಜೆಡಿಎಸ್‌ನಿಂದ ಟಿಕೆಟ್ ಕೇಳಿದ್ದಾರೆ?. ಸಿಪಿವೈ ಬಿಜೆಪಿಯಲ್ಲಿ ರಾಜ್ಯಮಟ್ಟದ ನಾಯಕರಾಗಿದ್ದಾರೆ. ಅವರ ಶಕ್ತಿ ಸಾಮರ್ಥ್ಯ ಏನೆಂಬುದು ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ಗೊತ್ತಿದೆ. ಸಿಪಿವೈಗೆ ಜೆಡಿಎಸ್ ಸೇರ್ಪಡೆಯಾಗುವ ಅನಿವಾರ್ಯತೆ ಏನಿದೆ ಎಂದು ಪ್ರಶ್ನಿಸಿದರು.

ಕಳೆದ ೨೫ ವರ್ಷಗಳಿಂದ ಜೆಡಿಎಸ್‌ನಲ್ಲಿ ದುಡಿದಿದ್ದಂತ ಹಲ ಮುಖಂಡರು ನಿಮ್ಮ ಧೋರಣೆಯಿಂದ ಬೇಸತ್ತು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮೊದಲು ನಿಮ್ಮ ಪಕ್ಷದಲ್ಲಿನ ಗೊಂದಲ ಪರಿಹರಿಸಿಕೊಳ್ಳಿ. ಸಿಪಿವೈ ವಿಧಾನ ಪರಿಷತ್ ಸದಸ್ಯತ್ವದ ಅವಧಿ ಇರುವುದು ಇನ್ನು ಒಂದುವರೆ ವರ್ಷ ಮಾತ್ರ, ಆದರೆ, ಇನ್ನು ನಾಲ್ಕು ವರ್ಷ ಶಾಸಕತ್ವವಿದ್ದರೂ ಕುಮಾರಸ್ವಾಮಿ ದೇಶ ಸೇವೆ ಮಾಡಲು ಹೋಗಿದ್ದಾರೆ. ನಿಖಿಲ್ ಸ್ವತಃ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದರೂ ನೀವು ಉದ್ದೇಶಪೂರ್ವಕವಾಗಿ ಇಂತಹ ವಾತಾವರಣ ಸೃಷ್ಟಿಸುತ್ತಿದ್ದು, ಮೈತ್ರಿ ಧರ್ಮ ಪಾಲಿಸಬೇಕು ಎಂದರು.

ಬಿಜೆಪಿ ನಿಕಟಪೂರ್ವ ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು ಮಾತನಾಡಿ, ಉಪಚುನಾವಣೆ ತಂತ್ರಗಾರಿಕೆ ಕುರಿತು ಕಾಂಗ್ರೆಸ್ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಿದೆ. ಕಾಂಗ್ರೆಸ್ ಚಕ್ರವ್ಯೂಹವನ್ನು ಭೇದಿಸುವುದು ಸಾಧ್ಯವಿದ್ದರೆ ಅದು ಯೋಗೇಶ್ವರ್ ಕೈಲಿ ಮಾತ್ರ. ನಿಖಿಲ್‌ಗೆ ರಾಮನಗರ ಕ್ಷೇತ್ರವಿದೆ. ಆದರೆ, ಸಿಪಿವೈಗೆ ಚನ್ನಪಟ್ಟಣ ಬಿಟ್ಟು ಬೇರೆ ಕ್ಷೇತ್ರವಿಲ್ಲ. ಆದ್ದರಿಂದ ಈ ಬಾರಿ ಯೋಗೇಶ್ವರ್‌ಗೆ ಅವಕಾಶ ಕೊಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ನಗರಾಧ್ಯಕ್ಷ ಶಿವು, ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಕುಳ್ಳಪ್ಪ ಇತರರಿದ್ದರು.

ಪೊಟೋ೧೭ಸಿಪಿಟ೧:

ಚನ್ನಪಟ್ಟಣದಲ್ಲಿ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.