ಮತಗಳ್ಳತನದಿಂದ ಕೇಂದ್ರದ ಗದ್ದುಗೆಗೇರಿದ ಬಿಜೆಪಿ

| Published : Nov 07 2025, 01:30 AM IST

ಸಾರಾಂಶ

ಚಿತ್ರದುರ್ಗ ನಗರದ 15ನೇ ವಾರ್ಡ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಬಿಜೆಪಿ ಮತಗಳ್ಳತನ ವಿರುದ್ಧ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮತಗಳ್ಳತನ ನಡೆಸಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಆರೋಪಿಸಿದರು.

ಚಿತ್ರದುರ್ಗ ನಗರದ 15ನೇ ವಾರ್ಡನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಬಿಜೆಪಿ ಮತಗಳ್ಳತನ ವಿರುದ್ಧ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ನಿಜವಾಗಿಯೂ ಮತದಾರರು ಬೆಂಬಲಿಸಿಲ್ಲ. ಅಕ್ರಮ ಮತದಾನ ದಿಂದ ಅಧಿಕಾರವನ್ನು ಹಿಡಿಯಲಾಗಿದೆ ಎಂದರು.

ಬಿಜೆಪಿ ಸೇರಿದಂತೆ ಕೋಮುವಾದಿ ಪಕ್ಷಗಳು ದೇಶದಲ್ಲಿ ಸರ್ವಾಧಿಕಾರಿ ಅಧಿಕಾರಕ್ಕೋಸ್ಕರ ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವ ಮತಗಳ್ಳತನ ನಿಲ್ಲಬೇಕು. ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ ಯನ್ನು ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಕಳುವಿನ (ಚೋರಿ) ವಿರುದ್ಧ ಚಳುವಳಿ ಮಾದರಿಯಲ್ಲಿ ಅಭಿಯಾನವನ್ನು ನಡೆಸುತ್ತಿದೆ ಎಂದರು.

ಚುನಾವಣೆಗಳಲ್ಲಿ ಮತಗಳವು ಮುಂದುವರೆದಲ್ಲಿ ಪ್ರಜಾಪ್ರಭುತ್ವ ಇರಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಜಾಪ್ರಭುತ್ವ ಗೆಲ್ಲಬೇಕು. ಮತಗಳ್ಳತನದ ಮೂಲಕ ಜನಾದೇಶ ಕಗೊಲೆಯಾಗುತ್ತಿದೆ. ಇಂತಹ ಕೃತ್ಯದ ವಿರುದ್ಧ ರಾಹುಲ್ ಗಾಂಧಿ ಅವರು ಜನಜಾಗೃತಿಯ ಚಳುವಳಿ ನಡೆಸುತ್ತಿದ್ದಾರೆ. ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನು ಪ್ರತಿಯೊಬ್ಬ ಮತದಾರರು ತಮ್ಮ ಮತದ ಹಕ್ಕನ್ನು ಕದಿಯಲು, ಕಸಿಯಲು ಅವಕಾಶ ನೀಡದಂತೆ ಎಚ್ಚರಿಸಬೇಕು.ಸರ್ವಾಧಿಕಾರಿ ಧೋರಣೆಯುಳ್ಳವರ ಕೈಗೆ ಅಧಿಕಾರ ಕೊಟ್ಟರೆ ಜನರ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯದ ಹರಣವಾಗುತ್ತದೆ ಎಂದು ಚಂದ್ರಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ವಿಪಕ್ಷಗಳನ್ನು ಬೆಂಬಲಿಸುವ ಮತದಾರರನ್ನು ಮತದಾರ ಪಟ್ಟಿಯಿಂದಲೇ ಕಿತ್ತೆಸೆದು ಗೊಂದಲ ಸೃಷ್ಟಿಸುವ ಕೆಲಸವ ಬಿಜೆಪಿ ಮಾಡುತ್ತಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಓಟ್ ಚೋರಿ ಆಗಿರುವುದನ್ನ ಖಚಿತ ಪಡಿಸಿಕೊಂಡು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜೀವನದ ಹಂಗನ್ನು ತೊರೆದು ಹೋರಾಟ ನಡೆಸುತ್ತಿದ್ದಾರೆ. ಚುನಾವಣೆ ವೇಳೆ ಸುಳಿವು ಕೊಟ್ಟ ಕೂಡಲೇ ದಾಳಿ ಮಾಡುವ ಚುನಾವಣಾ ಆಯೋಗ ಮತಗಳವು ಬಗ್ಗೆ ರಾಹುಲ್ ಗಾಂಧಿ ಅವರನ್ನು ದಾಖಲೆ ಕೇಳುತ್ತಿದೆ ಎಂದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿಗೌಡ ಮಾತನಾಡಿ, ಎಐಸಿಸಿ ದೇಶದಾದ್ಯಂತ ವೋಟ್ ಚೋರಿ ವಿರುದ್ದ ಆಯೋಜಿಸಿರುವ ಹಕ್ಕುಗಳಿಗಾಗಿ ಸಹಿ ಸಂಗ್ರಹಣೆ ಭರದಿಂದ ಸಾಗಿದೆ. ಕೇಂದ್ರ ಸರ್ಕಾರ ಮತಗಳ್ಳತನ ನಿಲ್ಲಿಸಿ, ಪ್ರಜಾಪ್ರಭುತ್ವದ ಆಶಯಗಳ ಗೌರವಿಸಬೇಕು. ಈ ಕಾರಣಕ್ಕಾಗಿಯೇ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರ ಸಹಿಗಳನ್ನು ಪಡೆಯಲಾಗುತ್ತಿದೆ. ಅಭಿಯಾನವನ್ನು ಯಶಸ್ವಿಗೊಳಿಸಲು ಪಕ್ಷದ ಕಾರ್ಯಕರ್ತರು ಸೇರಿದಂತೆ ಮುಖಂಡರು ಹಾಗೂ ನಾಯಕರು ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ ಗಂಜಿಗಟ್ಟೆ, ಕೆಪಿಸಿಸಿ ಸದಸ್ಯೆ ಮೋಕ್ಷಾ ರುದ್ರಸ್ವಾಮಿ, ನಗರಾಧ್ಯಕ್ಷ ಲಕ್ಷ್ಮೀಕಾಂತ, ನಂದೀಶ್, ಆಶ್ವಕ್ ಆಲಿ, ಪೈಲಟ್, ನಗರಸಭೆ ಮಾಜಿ ಸದಸ್ಯ ನರಸಿಂಹ ಮೂರ್ತಿ, ಮುನ್ನಾ, ಖುದ್ದುೂಸ್ ಇದ್ದರು.