ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಬಿಜೆಪಿ ಅಭ್ಯರ್ಥಿ ಬಾಲರಾಜ್ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಿ ಶಾಸಕ ಮಂಜುನಾಥ್ ಜೊತೆಗೂಡಿ ಹನೂರು ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು. ಹನೂರು ಪಟ್ಟಣದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಪರ ರೋಡ್ ಶೋ ನೆಡೆಸಿ ಮಾತನಾಡಿದರು. ಹನೂರು- ಕೊಳ್ಳೇಗಾಲ- ಮಹದೇಶ್ವರಬೆಟ್ಟ ರಸ್ತೆ ಅಭಿವೃದ್ದಿ, ಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ದಿ ಪ್ರಾಧಿಕಾರವನ್ನು ರಚನೆ ಮಾಡಿ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಿದ ಕೀರ್ತಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಅದೇ ರೀತಿ ಮಾರ್ಟಳ್ಳಿ ಹಾಗೂ ಹಲಗಾಪುರ ನೀರಾವರಿ ಯೋಜನೆಗೆ 150 ಕೋಟಿ ರು.ಅನುದಾನದಲ್ಲಿ ಅಭಿವೃದ್ದಿ ಮಾಡಲು ಉದ್ದೇಶಿಸಲಾಗಿತ್ತು. ಅಂದು ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ಪರಿಣಾಮ ಆ ಯೋಜನೆ ನೆನೆಗುದ್ದಿಗೆ ಬಿದ್ದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಮ್ಮದೆ ಸರ್ಕಾರ ಬಂದಿದ್ದೇ ಆದ್ದಲ್ಲಿ ಈ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲಗಾಪುರ ಮತ್ತು ಮಾರ್ಟಳ್ಳಿಯ ಎರಡು ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸುವೆ ಎಂದರು. ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಪಕ್ಷ ಒಂದಾಗಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಕೈಜೋಡಿಸಿದ್ದಾರೆ. ಈ ಭಾಗದಲ್ಲಿ ಜೆಡಿಎಸ್ ಶಾಸಕ ಮಂಜುನಾಥ್ ಹಾಗೂ ಬಾಲರಾಜ್ ಜೋಡಿಯಾಗಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದರು.
ಎಸ್ಸಿ, ಎಸ್ಟಿ ಅಭಿವೃದ್ಧಿ ಗೆ ಮೀಸಲಾಗಿದ್ದ 28 ಸಾವಿರ ಕೋಟಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿ ಎಸ್ಸಿ,ಎಸ್ಟಿ ಸಮುದಾಯಕ್ಕೆ ಅನ್ಯಾಯಮಾಡಿದ್ದಾರೆ. ಮಹಿಳೆಯರಿಗೆ 2000 ರುಪಾಯಿ ಕೊಡ್ತೀವಿ ಅಂತಾರೆ, ಇನ್ನೊಂದ ಕಡೆ ಮದ್ಯದ ದರ ಶೇಕಡಾ 100 ರಷ್ಟು ಏರಿಕೆ ಮಾಡಿದ್ದಾರೆ. ಒಂದು ಕೈಲಿ ಕೊಟ್ಟು ಇನ್ನೊಂದು ಕೈಲಿ ಕಿತ್ತುಕೊಳ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯರನ್ನು ಟಿಕೀಸಿದರು.ಸಚಿವ ಮಹದೇವಪ್ಪ ದಲಿತರಿಗೇನೂ ಮಾಡಿಲ್ಲ:
ಬಿಜೆಪಿ ಅಭ್ಯರ್ಥಿ ಬಾಲರಾಜ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ದಲಿತರಿಗೇನೂ ಮಾಡಿಲ್ಲ, ಸಂವಿಧಾನ ಪರವಾಗಿ ಮಹಾದೇವಪ್ಪ ಒಂದೇ ಒಂದು ಕೆಲಸ ಮಾಡಿಲ್ಲ. ಸಂವಿಧಾನದ ಹೆಸರಲ್ಲಿ ದಲಿತರ ಕಲ್ಯಾಣ ಮಾಡಿಲ್ಲ. ಇರುವ ಸಚಿವಗಿರಿಯನ್ನೇ ಕರೆಕ್ಟಾಗಿ ಮಾಡಿ ಎಂದು ಕಿಡಿಕಾರಿದರು. ಸಚಿವಗಿರಿಯೂ ನಿಮಗೆ ಬೇಕು, ಶಾಸಕ ಸ್ಥಾನವು ನಿಮಗೆ ಬೇಕು, ಎಂಪಿ ಸ್ಥಾನವು ನಿಮಗೆ ಬೇಕು.! ಯಾಕೆ ಪಕ್ಷದಲ್ಲಿ ಯಾರೂ ಕಾರ್ಯಕರ್ತರು ಇರಲಿಲ್ಲವಾ..? ಪಕ್ಷಕ್ಕಾಗಿ ದುಡಿದವರು ಯಾರೂ ಇರಲಿಲ್ಲವಾ..? ಎಂದು ಟೀಕಿಸಿದರು.ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾದ್ಯಕ್ಷ ಜನದನಿ ವೆಂಕಟೇಶ್ ಮಾತನಾಡಿ, ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಬೂತ್ ಮಟ್ಟದಲ್ಲಿ ಬಿಜೆಪಿಗೆ ಹೆಚ್ಚು ಮತ ಹಾಕಿಸಿ ವಿಶ್ವನಾಯಕ ನರೇಂದ್ರ ಮೋದಿಯನ್ನು ಮತ್ತೇ ಪ್ರಧಾನಿ ಮಾಡಲು ಪಣ ತೊಡಿ ಎಂದರು.ಈ ವೇಳೆ ಶಾಸಕ ಮಂಜುನಾಥ್, ಬಿಜೆಪಿ ರಾಜ್ಯ ಉಪಾದ್ಯಕ್ಷ ಎನ್. ಮಹೇಶ್, ಜಿಲ್ಲಾದ್ಯಕ್ಷ ನಿರಂಜನ್‌ಕುಮಾರ್, ಮುಖಂಡರಾದ ಪ್ರೀತನ್ ನಾಗಪ್ಪ, ದತ್ತೇಶ್ ಕುಮಾರ್, ನಿಶಾಂತ್, ಎಂ.ರಾಮಚಂದ್ರ, ನಟರಾಜೇಗೌಡ, ಮಂಡಲ ಅದ್ಯಕ್ಷ ಚಂಗವಾಡಿ ರಾಜು, ಯುವ ಘಟಕದ ಅದ್ಯಕ್ಷ ಉಗನೀಯ ಮಹೇಶ್, ಸೇರಿದಂತೆ ಜೆಡಿಎಸ್ ಮುಖಂಡರು ಹಾಜರಿದ್ದರು.