ಸಾರಾಂಶ
ಕನ್ನಡಪ್ರಭ ವಾರ್ತೆ ಹುಮನಾಬಾದ್
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ತನ್ನ 10 ವರ್ಷಗಳ ಅಧಿಕಾರದ ಅವಧಿಯಲ್ಲಿ ಕೇವಲ ದರ್ಪ, ದುರಹಂಕಾರ ಬಿಟ್ಟು ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ ಎಂದು ಜಿಲ್ಲಾ ಉಸ್ತವಾರಿ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.ಅವರು ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಾಜಿ ಸಚಿವ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಬೀದರ್ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಭಗವಂತ ಖೂಬಾ ತಮ್ಮ ಕುಟುಂಬದ ಸದಸ್ಯರಿಗೆ ಮಾತ್ರ ಗುತ್ತಿಗೆ ಕಾಮಗಾರಿ ನೀಡುವ ಮೂಲಕ ಕಳಪೆ ಕಾಮಗಾರಿ ಮಾಡಿಸಿದ್ದಾರೆ. ಹೊರತಾಗಿ ಕೇಂದ್ರದಿಂದ ನೀಡಿದ ಒಂದೂ ಷರತ್ತು ಜಾರಿಗೆ ತರದೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ.
ನನ್ನ 10 ವರ್ಷ ಅವಧಿಯಲ್ಲಿ ರಾರಾಜಿಸುತ್ತಿದ್ದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಬಿಜೆಪಿಯವರ ಕೈಗೆ ಸೇರಿದ ಬಳಿಕ ಸಂಪೂರ್ಣ ನಾಶವಾಗಿದೆ. ಜಿಲ್ಲೆಯ ಅಭಿವೃದ್ಧಿ ಕುರಿತು ಸಂಸತ್ ಭವನದಲ್ಲಿ ಎಂದಾದರೂ ಮಾತನಾಡಿದ್ದು ಕೇಳಿದ್ದೀರಾ ಎಂದು ಲೇವಡಿ ಮಾಡಿ, ಇಂತಹ ಸಂಸದರು ಒಂದು ಗ್ರಾಪಂ ಸದಸ್ಯರಾಗಲೂ ಯೋಗ್ಯರಿಲ್ಲ. ಇದಕ್ಕೆ ರಾಜ್ಯದಲ್ಲಿರುವ 30ರಿಂದ 40 ಲಕ್ಷ ಜನರಿಗೆ ಇನ್ನೂ ಮನೆಗಳು ಇಲ್ಲ. ಅವರ ಸ್ವಪಕ್ಷದ ಶಾಸಕರೊಬ್ಬರಿಗೆ ಕೊಲೆ ಬೆದರಿಕೆ, ಸ್ವಪಕ್ಷದ ಇನ್ನೋರ್ವ ಬಸವಕಲ್ಯಾಣ ಶಾಸಕರಿಂದ ಚಪ್ಪಲಿ ಏಟು ತಿಂದ ಸಂಸದ ಜಿಲ್ಲೆಗೆ ಬೇಕಾ ಎಂದು ಪ್ರಶ್ನಿಸಿದ ಅವರು. ಕ್ಷೇತ್ರದ ಜನ ಖೂಬಾಗೆ ತಿರಸ್ಕರಿಸುವ ಮೂಲಕ ಬದಲಾವಣೆ ಬಯಸುತ್ತಿದ್ದಾರೆ ಎಂದರು.ಹುಮನಾಬಾದ್ ಮತಕ್ಷೇತ್ರದ ಜನರು ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ತಪ್ಪು ಇದೀಗ ಮಾಡಬೇಡಿ. ಪರಿವಾರ ಒಡೆಯುವ ಭಗವಂತ ಖೂಬಾ ಅವರಿಗೆ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಅವರು, ಈ ಬಾರಿಯ ಲೋಕಸಭಾ ಚುನಾವಣೆ ಕ್ಷೇತ್ರದ ಹಾಗೂ ದೇಶದ ಜನರ ಭವಿಷ್ಯ ರೋಪಿಸುವ ಚುನಾವಣೆಯಾಗಿದೆ.ಭಾವನಾತ್ಮಕ ವಿಚಾರ ಮುಂದಿಟ್ಟು ಮತ ಕೇಳುವ ಬಿಜೆಪಿಗೆ ಈ ಬಾರಿ ಭಾರಿ ಮುಖಭಂಗ:
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮತ್ತು ಇಲ್ಲಿನ ಯುವಕರಿಗೆ ಅನುಕೂಲವಾಗುವಂತೆ ಯುಪಿಎ ಸರ್ಕಾರ 371ಜೆ ವಿಶೇಷ ಸ್ಥಾನಮಾನ ನೀಡಿದೆ. ಆದರೆ ಬಿಜೆಪಿಗೆ ನಮ್ಮ ಭಾಗದ ಅಭಿವೃದ್ಧಿ ಬೇಕಿಲ್ಲ. ಕೇವಲ ಭಾವನಾತ್ಮಕ ವಿಚಾರ ಮುಂದಿಟ್ಟು ಅವರು ಮತ ಕೇಳುತ್ತಿದ್ದು ಈ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸುತ್ತಾರೆ ಎಂದರು.ರಾಜ್ಯದಾದ್ಯಂತ ಕಾಂಗ್ರೆಸ್ ಪರವಾದ ಅಲೆ ಕಾಣಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ್ದ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದ್ದು, ನುಡಿದಂತೆ ನಡೆದ ಸರ್ಕಾರದ ಬಗ್ಗೆ ಜನರು ಸಂತುಷ್ಟರಾಗಿದ್ದಾರೆ. ಇದರ ಫಲಶ್ರುತಿ ಚುನಾವಣೆಯ ಫಲಿತಾಂಶದಲ್ಲಿ ಪ್ರತಿಫಲಿಸಲಿದೆ ಎಂದರು.
ತಮ್ಮ ಪುತ್ರ ಸಾಗರ ಖಂಡ್ರೆ ಕಾನೂನು ಪದವೀಧರನಾಗಿದ್ದು, ಸುಪ್ರೀಂಕೋರ್ಟ್ ನ್ಯಾಯವಾದಿಗಳ ಬಳಿ ಕೆಲಸ ಮಾಡಿದ್ದಾರೆ. ಅವರಿಗೆ ಸಂವಿಧಾನ, ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಕಾರ್ಯವಿಧಾನದ ಬಗ್ಗೆ ಸಂಪೂರ್ಣ ಅರಿವಿದ್ದು, ಬೀದರ್ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಸ್ಪಷ್ಟ ಮುನ್ನೋಟ ಹೊಂದಿದ್ದಾರೆ ಎಂದರು.ಇನ್ನು ಕಾರ್ಯಕರ್ತರು ಮನೆ ಮನೆಗೆ ತೆರಳಿ ರಾಜ್ಯ ಸರ್ಕಾರ ನೀಡಿದ ಐದು ಗ್ಯಾರಟಿ ಯೋಜನೆಗಳು ಸೇರಿದಂತೆ ಕಾಂಗ್ರೆಸ್ ಅಭಿವೃದ್ಧಿಯ ಕೆಲಸಗಳ ಕುರಿತು ಮಾಹಿತಿ ನೀಡುವ ಮೂಲಕ ಮತಯಾಚನೆ ಮಾಡಬೇಕೆಂದು ಕಾರ್ಯಕರ್ತರಲ್ಲಿ ಈಶ್ವರ ಖಂಡ್ರೆ ಮನವಿಸಿದರು.