ಸಂಡೂರು ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಬಿ.ವೈ. ವಿಜಯೇಂದ್ರ

| Published : Nov 04 2024, 12:21 AM IST

ಸಂಡೂರು ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಬಿ.ವೈ. ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ರಾಜಕೀಯದ ದಿಕ್ಕನ್ನು ಬದಲಿಸುವ ಶಕ್ತಿ ಉಪ ಚುನಾವಣೆಗೆ ಇದೆ. ಸಂಡೂರು ಕ್ಷೇತ್ರ ಅಭಿವೃದ್ಧಿ ವಂಚಿತವಾಗಿದೆ.

ಸಂಡೂರು: ಸಂಡೂರು ವಿಧಾನಸಭಾ ಕ್ಷೇತ್ರವು ಸಂಪದ್ಭರಿತ ಕ್ಷೇತ್ರವಾಗಿದ್ದರೂ ಅಭಿವೃದ್ಧಿ ಆಗದಿರುವುದು ದುರಂತ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮನವಿ ಮಾಡಿದರು.

ತಾಲೂಕಿನ ಚೋರುನೂರು ಗ್ರಾಮದಲ್ಲಿ ಭಾನುವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ರಾಜಕೀಯದ ದಿಕ್ಕನ್ನು ಬದಲಿಸುವ ಶಕ್ತಿ ಉಪ ಚುನಾವಣೆಗೆ ಇದೆ. ಸಂಡೂರು ಕ್ಷೇತ್ರ ಅಭಿವೃದ್ಧಿ ವಂಚಿತವಾಗಿದೆ. ಇಲ್ಲಿ ಒಂದು ಉತ್ತಮ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿಲ್ಲ. ಬಡತನ ಹಾಗೆಯೇ ಇದೆ. ಮೂಲ ಸೌಕರ್ಯಗಳ ಅಭಿವೃದ್ಧಿಯಾಗಿಲ್ಲ ಎಂದರು.

ಬೆಂಗಳೂರಿನಿಂದ ಬಳ್ಳಾರಿ ವರೆಗೆ ಸಿದ್ದರಾಮಯ್ಯ ಈ ಹಿಂದೆ ಪಾದಯಾತ್ರೆ ಮಾಡಿದ್ದು ಕೇವಲ ಅಧಿಕಾರಕ್ಕಾಗಿ. ಅಧಿಕಾರಕ್ಕೆ ಬಂದ ಮೇಲೆ ಇವರು ಏನು ಕಡಿದು ಕಟ್ಟೆ ಹಾಕಿದ್ದಾರೆ? ಅಹಿಂದ ಹೆಸರು ಹೇಳಿಕೊಂಡು ಕೇವಲ ಸಮಾವೇಶ ಮಾಡಿದರೇ ಹೊರತು ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಹಿಂದುಳಿದ ವರ್ಗವನ್ನು ಸಿದ್ದರಾಮಯ್ಯ ಮರೆತಿದ್ದಾರೆ. ಇಂದು ನೌಕರರ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ಹಣವಿಲ್ಲ. ವಿವಿಧ ನಿಗಮಗಳ ಹಣಕ್ಕೆ ಕತ್ತರಿ ಹಾಕುತ್ತಿದ್ದಾರೆ. ಯಡಿಯೂರಪ್ಪ ಆರಂಭಿಸಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಸರ್ಕಾರ ಹಣ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ದೂರುತ್ತಿದ್ದಾರೆ. ಕಾಂಗ್ರೆಸ್ ಶಾಸಕ ರಾಜು ಕಾಗೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉದ್ಭವಿಸಿದೆ ಎಂದರೆ, ಆರ್.ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಛೀಮಾರಿ ಹಾಕಿದ್ದಾರೆ ಎಂದು ಸರ್ಕಾರದ ಆಡಳಿತ ಕ್ರಮವನ್ನು ಟೀಕಿಸಿದರು.

ಸಚಿವ ಜಮೀರ್ ಅಹಮದ್‌ ಖಾನ್ ಸಿಎಂ ಕುಮ್ಮಕ್ಕಿನಿಂದ ಜಿಲ್ಲಾಧಿಕಾರಿಗಳನ್ನು ಬೆದರಿಸಿ, ಮಠ-ಮಾನ್ಯಗಳು, ದೇವಸ್ಥಾನಗಳು, ರೈತರ ಜಮೀನನ್ನು ವಕ್ಫ್ ಹೆಸರಲ್ಲಿ ಕಿತ್ತುಕೊಳ್ಳುವ ಮತ್ತು ಆ ಮೂಲಕ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದ್ದಾರೆ. ಜಮೀರ್ ಅಹಮದ್ ಖಾನ್ ಅವರನ್ನು ಗಡಿಪಾರು ಮಾಡಿದರೆ ಮಾತ್ರ ರಾಜ್ಯದಲ್ಲಿ ಶಾಂತಿ ನೆಲೆಸಲಿದೆ. ರಾಜ್ಯದಲ್ಲಿ ನೆರೆಹಾವಳಿಯಿಂದ ಬೆಳೆ ನಷ್ಟ ಉಂಟಾಗಿದೆ. ಪರಿಹಾರ ಕೇಳಿದರೆ, ನರೇಂದ್ರ ಮೋದಿ ಪರಿಹಾರ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದುಕಿದ್ದೂ ಸತ್ತಂತಿದೆ ಎಂದು ಕಿಡಿಕಾರಿದರು.

ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಸಂಡೂರು ಬಿಜೆಪಿ ಅಭ್ಯರ್ಥಿಯ ಗೆಲುವು ೨೦೨೮ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಭದ್ರ ಬುನಾದಿಯಾಗಲಿದೆ. ಸಂಡೂರಿನ ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್ ಗೌಡ ಕಾಂಗ್ರೆಸ್ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಅವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡರೆ, ನಾನು ಏನು ಎಂಬುದನ್ನು ತೋರಿಸಬೇಕಾಗುತ್ತದೆ ಎಂದರು.

ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ಬಿಜೆಪಿ ಆಡಳಿತಾವಧಿಯಲ್ಲಿ ₹೧೩೦೦ ಕೋಟಿ ವೆಚ್ಚದಲ್ಲಿ ತಾಲೂಕಿನ ೭೪ ಕೆರೆಗಳಿಗೆ ತುಂಗಭದ್ರಾ ನದಿ ನೀರಿನಿಂದ ತುಂಬಿಸುವ ಯೋಜನೆ ರೂಪಿಸಿದ್ದೆವು. ಆದರೆ, ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಹಣ ಮಂಜೂರು ಮಾಡಲಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಜನತೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಮತಯಾಚಿಸಿದರು. ಶಾಸಕರಾದ ಕೆ.ಎಸ್. ನವೀನ್‌ಕುಮಾರ್, ಅರವಿಂದ ಬೆಲ್ಲದ್, ಕೃಷ್ನಾನಾಯ್ಕ್, ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ, ಜಿಲಾಧ್ಯಕ್ಷ ಅನಿಲ್‌ಕುಮಾರ್ ಮೋಕ, ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಅಭ್ಯರ್ಥಿ ಪರ ಮತಯಾಚಿಸಿದರು.

ಮಾಜಿ ಸಂಸದರಾದ ಅನಿಲ್ ಲಾಡ್, ಫಕ್ಕೀರಪ್ಪ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎನ್. ಸೋಮಪ್ಪ, ಮುಖಂಡರಾದ ಡಿ.ಕೃಷ್ಣಪ್ಪ, ಕಾರ್ತಿಕ್, ಅಡಿವೆಪ್ಪ, ಎಚ್.ಎಂ. ಮಂಜುನಾಥ, ನರೇಂದ್ರ ಪಾಟೀಲ್, ಓಬಳೇಶ್, ಜಿ.ಉಮೇಶ್, ಗಂಡಿ ಮಾರೆಪ್ಪ, ಮೋಯಿದ್ದೀನ್ ಸಾಹೇಬ್, ಸೂರ್ಯ ಪಾಪಣ್ಣ ಇದ್ದರು.