ತಲಕಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಪೂಜೆ ಸಲ್ಲಿಕೆ

| Published : Mar 23 2024, 01:02 AM IST

ಸಾರಾಂಶ

ಮಡಿಕೇರಿಯಿಂದ ನೇರವಾಗಿ ಭಾಗಮಂಡಲಕ್ಕೆ ಬೆಳಗ್ಗೆ ಆಗಮಿಸಿದ ಕೊಡಗು ಮೈಸೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಭಗಂಡೇಶ್ವರ ಸನ್ನಿಧಿಯಲ್ಲಿ ಸಂಕಲ್ಪದೊಂದಿಗೆ ಪೂಜೆ ಸಲ್ಲಿಸಿದರು. ನಂತರ ತಲಕಾವೇರಿಗೆ ತೆರಳಿ ಅಗಸ್ತ್ಯ, ಗಣಪತಿ ಗುಡಿಗಳಲ್ಲೂ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಮಂಡಲ ಹಾಗೂ ತಲಕಾವೇರಿಯ ಕಾವೇರಿ ಸನ್ನಿಧಿಯಲ್ಲಿ ಶುಕ್ರವಾರ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು.

ಮುಂಬರುವ ಚುನಾವಣೆಯಲ್ಲಿ ಯದುವೀರ್ ಗೆಲವಿಗಾಗಿ ಇದೇ ಸಂದರ್ಭ ಬಿಜೆಪಿ ಪದಾಧಿಕಾರಿಗಳು ಪ್ರಾರ್ಥನೆ ಸಲ್ಲಿಸಿದರು.

ಮಡಿಕೇರಿಯಿಂದ ನೇರವಾಗಿ ಭಾಗಮಂಡಲಕ್ಕೆ ಬೆಳಗ್ಗೆ ಆಗಮಿಸಿದ ಯದುವೀರ್ ಭಗಂಡೇಶ್ವರ ಸನ್ನಿಧಿಯಲ್ಲಿ ಸಂಕಲ್ಪದೊಂದಿಗೆ ಪೂಜೆ ಸಲ್ಲಿಸಿದರು. ನಂತರ ತಲಕಾವೇರಿಗೆ ತೆರಳಿ ಅಗಸ್ತ್ಯ, ಗಣಪತಿ ಗುಡಿಗಳಲ್ಲೂ ಪೂಜೆ ಸಲ್ಲಿಸಿದರು.

ಭಾಗಮಂಡಲ ಹಾಗೂ ತಲಕಾವೇರಿಯ ಪ್ರದೇಶ ವೀಕ್ಷಿಸಿದ ಯದುವೀರ್‌ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹ ಗೈರು ಹಾಜರಾಗಿದ್ದರು.

ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಮಹಾರಾಜ, ಜನಸಾಮಾನ್ಯರಿಗೆ ಸಿಗುವುದಿಲ್ಲ ಎಂಬ ಮಾತು ಸುಳ್ಳು. ರಾಜಪ್ರಭುತ್ವ ಸ್ವಾತಂತ್ರ್ಯಪೂರ್ವದಲ್ಲೇ ಹೊರಟು ಹೋಗಿದ್ದು, ಈಗ ಪ್ರಜಾಪ್ರಭುತ್ವ ಇದೆ. ಸಾರ್ವಜನಿಕ ಜೀವನಕ್ಕೆ ಬಂದ ಮೇಲೆ ಎಲ್ಲರಿಗೂ ಜನಪ್ರತಿನಿಧಿ ಲಭ್ಯರಾಗಬೇಕಾಗುತ್ತದೆ ಎಂದು ತಿಳಿಸಿದರು.

ಸಂಸದರ ಕಚೇರಿ ತೆರೆಯುತ್ತೇನೆ. ಅದರಲ್ಲಿ ಪಕ್ಷದ ಕಾರ್ಯಕರ್ತರೇ ಇರುತ್ತಾರೆ. ಕಾರ್ಯಕರ್ತರು ಮಾತ್ರವಲ್ಲ ಸಾರ್ವಜನಿಕರಿಗೂ ಸ್ಪಂದಿಸುವೆ ಎಂದು ಭರವಸೆ ನೀಡಿದರು.

ಹಾಲಿ ಸಂಸದ ಪ್ರತಾಪಸಿಂಹ ಅವರು 10 ವರ್ಷದ ಅವಧಿಯಲ್ಲಿ ಬಿಜೆಪಿಗೆ ಭದ್ರವಾದ ಬುನಾದಿ ಹಾಕಿದ್ದಾರೆ. ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವೆ. ಮೈಸೂರಿನಲ್ಲಿ ಈಗಾಗಲೇ ಪ್ರಚಾರ ಕಾರ್ಯಕ್ಕೆ ಅವರು ಜೊತೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ನಡೆಯುವ ಪ್ರಚಾರ ಕಾರ್ಯದಲ್ಲಿ ಅವರೂ ಭಾಗಿಯಾಗುವರು ಎಂಬ ವಿಶ್ವಾಸ ಇದೆ ಎಂದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಭಾರತ ವಿಶ್ವಗುರು ಸ್ಥಾನದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿಯನ್ನು ಜನಮೆಚ್ಚಿದ್ದಾರೆ. ಹಿಂದಿನ ಸಂಸದ ಪ್ರತಾಪ್ ಸಿಂಹ ಜನಪರ ಕಾರ್ಯಕ್ರಮ ಜಾರಿಗೊಳಿಸಿ ಕ್ಷೇತ್ರಕ್ಕೆ ಅಭ್ಯುಧಯಕ್ಕೆ ಶ್ರಮಿಸಿದ್ದಾರೆ. ಉದಾಸೀನ ತೋರದೆ ಕೇಂದ್ರ ಹಾಗೂ ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುವಂತೆ ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ದೇಶದ ಭದ್ರತೆ, ಆರ್ಥಿಕತೆ ರಕ್ಷಣೆ ಯುದ್ಧ ಮುಂದಿನ ಚುನಾವಣೆ. ಮೋದಿ‌ ಅವರ‌ ವಿದೇಶಾಂಗ ನೀತಿ ಮಾದರಿಯಾಗಿದೆ. ಆರ್ಥಿಕತೆಯಲ್ಲಿ ಭಾರತಕ್ಕೆ 5 ನೇ ಸ್ಥಾನ. ಹಿಂದಿನ ಚುನಾವಣೆಯಲ್ಲಿ ಕೊಟ್ಟ ಮಾತು ಈಡೇರಿಕೆ ಆಗಿದೆ. ಭಾರತ ‌ವಿಶ್ವ ಗುರು ಆಗಬೇಕು. ಈಗಿನ ಅಭಿವೃದ್ಧಿ ಮುಂದವರಿಯಬೇಕು. ಅಭಿವೃದ್ಧಿ ಕಾರ್ಯ ಎಲ್ಲರಿಗೂ ತಲುಪಿಸಬೇಕು ಎಂದರು.

ವಿಧಾನ ಪರಿಷತ್ತು ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ನೆಲ್ಲೀರ ಚಲನ್ ಕುಮಾರ್, ವಕ್ತಾರರಾದ ತಳೂರು ಕಿಶೋರ್ ಕುಮಾರ್, ಬಿ.ಕೆ. ಅರುಣ್ ಕುಮಾರ್, ಸುಬ್ರಮಣ್ಯ ಉಪಾಧ್ಯಾಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಫ್ರು ರವೀಂದ್ರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಭಾಗಮಂಡಲ ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಸತೀಶ್, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಮುಖರಾದ ಕಾಂಗೀರ ಸತೀಶ್, ಕಾರೇರ ಕವನ್ ಕಾವೇರಪ್ಪ, ಪಿ.ಡಿ. ಪೊನ್ನಪ್ಪ, ಡೀನ್ ಬೋಪಣ್ಣ, ಬಿ.ಎಂ. ಹರೀಶ್ ಮತ್ತಿತರರು ಹಾಜರಿದ್ದರು.

ಪೂಜೆಯ ಬಳಿಕ ಚೇರಂಬಾಣೆ, ಭಾಗಮಂಡಲ, ಕುಂದಚೇರಿ, ಅಯ್ಯಂಗೇರಿಯಲ್ಲಿ ಬಿಜೆಪಿಯಿಂದ ಪ್ರಚಾರ ಕಾರ್ಯ ನಡೆಯಿತು.