ಸಾರಾಂಶ
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಹಾಸನದ ಎಂ.ಜಿ.ರಸ್ತೆ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಜೈಕಾರ ಹಾಕುತ್ತ ಸಂಭ್ರಮಿಸಿದರು.
ಮೂರನೇ ಬಾರಿ ಪಿಎಂ ಆಗಿ ಮೋದಿ ಪ್ರಮಾಣ । ಪಟಾಕಿ ಸಿಡಿಸಿ, ಸಿಹಿ ಹಂಚಿದ ಕಾರ್ಯಕರ್ತರು । ಜೈಕಾರ ಕೂಗಿ ಸಂತಸ
ಕನ್ನಡಪ್ರಭ ವಾರ್ತೆ ಹಾಸನದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ಎಂ.ಜಿ.ರಸ್ತೆ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಜೈಕಾರ ಹಾಕುತ್ತ ಸಂಭ್ರಮಿಸಿದರು.
ಬಿಜೆಪಿ ನಗರಾಧ್ಯಕ್ಷ ಮಂಜು ಮಾಧ್ಯಮದೊಂದಿಗೆ ಮಾತನಾಡಿ, ‘ವಿಶ್ವ ಕಂಡಂತಹ ಶ್ರೇಷ್ಠ ನಾಯಕರಾದ ನರೇಂದ್ರ ಮೋದಿ ೩ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈಗಾಗಲೇ ಎರಡು ಬಾರಿ ೧೦ ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಇವರ ಕಾಲದಲ್ಲಿ ಭಾರತ ದೇಶ ಅತ್ಯಂತ ಪ್ರಬಲವಾಗಿ ಹೊರಹೊಮ್ಮಿದೆ. ಅವರು ಕೈಗೊಂಡಂತಹ ಕೆಲಸ ಕಾರ್ಯಗಳು, ಕಾರ್ಯಚಟುವಟಿಕೆಗಳು ಗಮನಾರ್ಹವಾಗಿವೆ. ಅವುಗಳಲ್ಲಿ ಸ್ವಚ್ಛ ಭಾರತ ಯೋಜನೆ, ಮೇಕ್ ಇನ್ ಇಂಡಿಯಾ, ದಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಪ್ರಧಾನ ಮಂತ್ರಿ ಅವಾಜ್ ಯೋಜನೆ, ಫಸಲ್ ಭೀಮಾ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಭಾರತ ದೇಶದ ಜನತೆಗೆ ಕೊಟ್ಟಿದ್ದಾರೆ’ ಎಂದು ಹೇಳಿದರು.‘ಭಾರತ ದೇಶ ಇಡೀ ವಿಶ್ವದಲ್ಲೆ ಬಲಿಷ್ಠ ರಾಷ್ಟ್ರವಾಗಿ ನಿರ್ಮಾಣವಾಗುತ್ತಿದೆ. ಇನ್ನು ರಕ್ಷಣಾ ವಿಚಾರದಲ್ಲಿ ಭಾರತ ದೇಶ ಹಿಂದೆಂದೂ ಕಾಣದಂತಹ ಭದ್ರತೆಯನ್ನು ನಮ್ಮ ದೇಶಕ್ಕೆ ಒದಗಿಸಿಕೊಂಡಿದೆ. ಆಂತರಿಕ ಭದ್ರತೆ, ವಿದೇಶಾಂಗ ನೀತಿ ಆಗಿರಬಹುದು, ಕೈಗಾರಿಕಾ ಉದ್ಯಮ ಆಗಿರಬಹುದು, ಜತೆಗೆ ರೈಲ್ವೆ ವಿಚಾರದಲ್ಲೂ ಕೂಡ ಅತ್ಯಂತ ಆಧುನಿಕ ರೈಲ್ವೆಯನ್ನು ಕಾಣುತ್ತಿದ್ದೇವೆ’ ಎಂದು ಸಂತಸ ವ್ಯಕ್ತಪಡಿಸಿದರು.
‘ವಿಮಾನಯಾನವು ಕೂಡ ಅಭಿವೃದ್ಧಿಯನ್ನು ಕಂಡಿದ್ದೇವೆ. ನೂರಾರು ವರ್ಷಗಳಿಂದ ಭಾರತದ ಹಿಂದೂ ಧರ್ಮದ ಜನರಲ್ಲಿ ಇದ್ದ ಏಕೈಕ ಮಹತ್ವಕಾಂಕ್ಷೆ ಯೋಜನೆಯಾದ ರಾಮ ಮಂದಿರ ನಿರ್ಮಾಣವನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸಿಕೊಟ್ಟಿದ್ದಾರೆ. ಮುಂದೆಯೂ ಕೂಡ ನಮ್ಮ ದೇಶವನ್ನು ಸುಭದ್ರವಾಗಿ ಮುನ್ನಡೆಸಿ ಮೂರನೇ ಆರ್ಥಿಕ ಶಕ್ತಿಯಾಗಿ ತರಲು ಪ್ರಯತ್ನ ಪಡುತ್ತಿದ್ದಾರೆ. ಅವರ ಯೋಜನೆ ಸಾಕಾರಗೊಳ್ಳಲಿ. ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದಕ್ಕೆ ಹಾಸನ ಜನತೆ ಪರವಾಗಿ ಶುಭಾಶಯ ಸಲ್ಲಿಸುತ್ತೇನೆ’ ಎಂದು ಹೇಳಿದರು.ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪುನೀತ್, ಬಿಜೆಪಿ ಮಖಂಡರಾದ ಅನ್ನಪೂರ್ಣ, ಪುರುಷೋತ್ತಮ್, ಪ್ರದೀಪ್, ಶ್ರೀಕಾಂತ್, ಪ್ರಸನ್ನ, ಪ್ರೀತಿವರ್ಧನ್ ಇತರರು ಇದ್ದರು.