ಸಾರಾಂಶ
2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಶತಸಿದ್ಧ ಎಂದು ನೂತನ ಬಿಜೆಪಿ ಜಿಲ್ಲಾಧ್ಯಕ್ಷ ನುಡಿದರು. ಶಹಾಪುರ ನಗರದ ಬೂತ್ ನಂ. 167ರಲ್ಲಿ ವಾರ್ಡ್ ನಂ.06ರ ಜೀವೇಶ್ವರ ನಗರದಲ್ಲಿ ಗೋಡೆ ಬರಹಕ್ಕೆ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಚಾಲನೆ ನೀಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಹಾಪುರ
2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ. ಕಾರ್ಯಕರ್ತರು ಹೆಚ್ಚು ಹುಮ್ಮಸ್ಸಿನಿಂದ ಪ್ರತಿ ಮನೆಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿಕೊಡಬೇಕು ಎಂದು ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಹೇಳಿದರು.ನಗರದ ಬೂತ್ ನಂ. 167ರ ವಾರ್ಡ್ ನಂ. 06ರ ಜೀವೇಶ್ವರ ನಗರದಲ್ಲಿ 2024ರಲ್ಲಿ ಮತ್ತೊಮ್ಮೆ ಬಿಜೆಪಿ ಎಂಬ ಗೋಡೆ ಬರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೋದಿ ಸರ್ಕಾರ ಈ ದೇಶದ ಪ್ರತಿ ನಾಗರಿಕನಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ ಎಂದರು.ಪಿಎಂ ಕಿಸಾನ್ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ, ಜನಧನ್, ಸ್ವಚ್ಛ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾ, ಸಂಸದರ ಆದರ್ಶ ಗ್ರಾಮ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಉಜ್ವಲ ಯೋಜನೆ, ಅಟಲ್ ಪಿಂಚಣಿ ಯೋಜನೆ, ಅಮೃತ ಯೋಜನೆ ಸೇರಿ ನೂರಾರು ಯೋಜನೆಗಳ ಮೂಲಕ ಈ ದೇಶದ ನಾಗರಿಕರು ಸ್ವಾಭಿಮಾನದಿಂದ ಬದುಕುವಂತೆ ಮಾಡಿದ್ದಾರೆ. ಈ ದೇಶದ ರಕ್ಷಣೆ, ಬಡತನ ನಿರ್ಮೂಲನೆ, ಉದ್ಯೋಗ ಯೋಜನೆಗಳಿಗಾಗಿ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ನಗರ ಮಂಡಲ ಅಧ್ಯಕ್ಷ ದೇವಿಂದ್ರಪ್ಪ ಕೊನೇರ, ಮಲ್ಲಿಕಾರ್ಜುನ ಚಿಲ್ಲಾಳ, ಮಲ್ಲಿಕಾರ್ಜುನ ಕಂದಕೂರ, ಬಸವರಾಜಪ್ಪ ವಿಭೂತಿಹಳ್ಳಿ, ರಾಜಶೇಖರ್ ಗೂಗಲ್, ಬಸವರಾಜ ಅರುಣಿ, ಶರಣಪ್ಪ ಟೂಕಾಪೂರ್, ಲಕ್ಷ್ಮಿಕಾಂತ್ ಬಿರಾಳ, ವೀರೇಶ್ ಸುರಪುರಕರ್, ವೆಂಕಟೇಶ್ ಗೌನಳ್ಳಿ ಇತರರಿದ್ದರು.