ಪಾಕ್‌ ಪರ ಘೋಷಣೆ ವಿರುದ್ಧ ಬಿಜೆಪಿ ದೂರು

| Published : Feb 28 2024, 02:31 AM IST / Updated: Feb 28 2024, 09:57 AM IST

bjp emblem flag logo

ಸಾರಾಂಶ

ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಪರ ಅವರ ಬೆಂಬಲಿಗರು ಘೋಷಣೆ ಕೂಗುವ ವೇಳೆ ಪಾಕಿಸ್ತಾನ ಜಿಂದಾ ಬಾದ್‌ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಬಿಜೆಪಿ ಶಾಸಕರು ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಪರ ಅವರ ಬೆಂಬಲಿಗರು ಘೋಷಣೆ ಕೂಗುವ ವೇಳೆ ಪಾಕಿಸ್ತಾನ ಜಿಂದಾ ಬಾದ್‌ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಬಿಜೆಪಿ ಶಾಸಕರು ದೂರು ನೀಡಿದ್ದಾರೆ.

ಮಂಗಳವಾರ ರಾತ್ರಿ ಪ್ರತಿಪಕ್ಷ ನಾಯಕ ಆರ್‌.ಆಶೋಕ್‌ ನೇತೃತ್ವದಲ್ಲಿ ವಿಧಾನಸೌಧ ಪೊಲೀಸ್‌ ಠಾಣೆಗೆ ಆಗಮಿಸಿದ ಬಿಜೆಪಿ ಶಾಸಕರ ನಿಯೋಗವು ರಾಜ್ಯಸಭೆಗೆ ಆಯ್ಕೆಯಾಗಿರುವ ನಾಸಿರ್‌ ಹುಸೇನ್‌ ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. 

ವಿಧಾನಪರಿಷತ್‌ ಸದಸ್ಯ ರವಿಕುಮಾರ್ ಮತ್ತು ಶಾಸಕ ದೊಡ್ಡನಗೌಡ ಪಾಟೀಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಅವರ ಗೆಲುವನ್ನು ಘೋಷಣೆ ಮಾಡಿದರು. 

ಬಳಿಕ ನಾಸಿರ್‌ ಬೆಂಬಲಿಗರು ವಿಧಾನಸೌಧಕ್ಕೆ ಆಗಮಿಸಿ ಅವರ ಜಯವನ್ನು ಸಂಭ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಮಾಡಲಾಗಿದೆ. ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಲಾಗಿದೆ. 

ಇದು ರಾಷ್ಟ್ರದ್ರೋಹವಾಗಿದೆ. ಅಲ್ಲದೇ, ಪವಿತ್ರವಾದ ವಿಧಾನಸೌಧದಲ್ಲಿ ರಾಷ್ಟ್ರದ್ರೋಹ ಘೋಷಣೆ ಕೂಗಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಾಸಿರ್‌ ಹುಸೇನ್‌ ಆಯ್ಕೆಯಾಗಿರುವುದು ದೇಶದ ಸಂಸತ್‌ಗೋ ಅಥವಾ ಪಾಕಿಸ್ತಾನದ ಸಂಸತ್‌ಗೋ ಎಂಬ ಅನುಮಾನ ಮೂಡಿದೆ. ನಾಸಿರ್‌ ಹುಸೇನ್‌ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲು ಅನರ್ಹರಾಗಿದ್ದಾರೆ. ಅಲ್ಲದೇ, ಅವರ ಬೆಂಬಲಿಗರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಲಾಗಿದೆ.

ಪೊಲೀಸರಿಗೆ ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ವಿಧಾನಸೌಧದ ಮೇಲೆ ಪಾಕಿಸ್ತಾನ ಬಾವುಟ ಹಾರಿಸುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. 

ಶಕ್ತಿಸೌಧದೊಳಗೆ ಇಂತಹವರು ಎಷ್ಟು ಜನ ಅಡಗಿದ್ದಾರೋ? ಮುಂಬೈಯ ತಾಜ್‌ ಹೊಟೇಲ್‌ನಲ್ಲಿ ನಡೆದಂತಹ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. 

ಪಾಕಿಸ್ತಾನ ಪರ ಘೋಷಣೆಗಳು ಕೂಗಿದರೂ ಪೊಲೀಸರು ಕೈಕಟ್ಟಿ ನಿಂತುಕೊಂಡಿದ್ದಾರೆ ಎಂದು ಹೇಳಿದರು. ಪಿಎಫ್‌ಐ ಸೇರಿದಂತೆ ದೇಶದ್ರೋಹಿಗಳ 1200 ಪ್ರಕರಣ ಈ ಸರ್ಕಾರ ವಾಪಸ್‌ ತೆಗೆದುಕೊಂಡಿದೆ. 

ಸಂವಿಧಾನ ಜಾಥಾ ಮಾಡಿದರು. ಪಾಕಿಸ್ತಾನ ಜಿಂದಾಬಾದ್‌ ಎನ್ನುವವರ ಕೈಗೆ ಸಂವಿಧಾನ ನೀಡಬೇಕಾ ಎಂದು ಟೀಕಾಪ್ರಹಾರ ನಡೆಸಿದರು.

ವಿಧಾನಸೌಧದಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿರುವ ನಾಸಿರ್‌ ಹುಸೇನ್‌ ಪರ ಘೋಷಣೆ ವೇಳೆ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಲಾಗಿದೆ ಎಂಬ ಆರೋಪದ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದಿಂದ ಪರೀಕ್ಷಿಸುವ ಸಾಧ್ಯತೆ ಇದೆ.

ನಾಸಿರ್‌ ಹುಸೇನ್‌ ಪರ ಘೋಷಣೆ ಕೂಗಿರುವುದರಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಲಾಗಿದೆಯೇ ಅಥವಾ ನಾಸಿರ್‌ ಸಾಬ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಲಾಗಿದೆಯೇ ಎಂಬ ಗೊಂದಲ ಮೂಡಿದೆ. 

ಈ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯತೆ ಕುರಿತು ತಿಳಿದುಕೊಳ್ಳಲು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಘೋಷಣೆ ಕೂಗಿದ ವಿಡಿಯೋ ತುಣುಕನ್ನು ಕಳುಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.