ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಚಿವ ಸ್ಥಾನದ ಪ್ರಭಾವ ಬಳಸಿಕೊಂಡು ಪದೇ ಪದೆ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದು, ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕೆಂದು ಬಿಜೆಪಿ ಮುಖಂಡರು ಚುನಾವಣೆ ಆಯೋಗಕ್ಕೆ ಮಂಗಳವಾರ ದೂರು ನೀಡಿದರು.ಈ ವೇಳೆ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ಬೆಳಗಾವಿ ಲೊಕಸಭಾ ಕ್ಷೇತ್ರದಲ್ಲಿ ಪಕ್ಷಪಾತ, ಗೂಂಡಾ ವರ್ತನೆ, ಬಿಜೆಪಿ ನಾಯಕರನ್ನು ಗುರಿಯಾಗಿಸಿ ಸುಳ್ಳು ಆರೋಪ ಮಾಡುವುದು, ಅಧಿಕಾರ ದುರುಪಯೋಗ, ಸರ್ಕಾರಿ ನೌಕರರನ್ನು ಪಕ್ಷದ ಕೆಲಸಕ್ಕೆ ಬಳಸಿಕೊಂಡು ಚುನಾವಣೆ ಅಕ್ರಮ ಎಸಗುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕವೂ ಅಂಗನವಾಡಿ ಕಾರ್ಯಕರ್ತೆಯರನ್ನು ಮನೆಗೆ ಕರೆಸಿ ಸಭೆ ನಡೆಸಿ ಚುನಾವಣೆಯಲ್ಲಿ ತಮ್ಮ ಪರ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಬಗ್ಗೆ ದೂರು ದಾಖಲಾದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೊಕಸಭಾ ಕ್ಷೇತ್ರದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮೂಲಕ ಪ್ರತಿ ಗ್ರಾಮದಲ್ಲಿ ನರೆಗಾ ಕೂಲಿ ಕಾರ್ಮಿಕರ ಸಭೆ ನಡೆಸುತಿದ್ದಾರೆ. ಸಂಸದೆ ಮಂಗಲ ಅಂಗಡಿಯವರು ಏನು ಗೊತ್ತಿಲ್ಲದ ರಾಜಕಾರಣಿ. ಬೇರೆಯವರು ಬರೆದುಕೊಟ್ಟ ಭಾಷಣ ಓದುತ್ತಾರೆ ಎಂದಿದ್ದಾರೆ. ಬಿಜೆಪಿ ನಾಯಕರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರ ತೇಜೋವಧೆ ನಡೆಸುತ್ತಿದ್ದಾರೆ ಎಂದು ದೂರಿದರು.ಸಚಿವರಿಗೆ ಅನ್ಯಾಯವಾದರೆ ಚುನಾವಣೆ ಆಯೊಗ, ಪೊಲೀಸ್ ಇಲಾಖೆಗೆ ದೂರು ನೀಡದೆ ಕೆಲ ಬಾಡಿಗೆ ಗೂಂಡಾಗಳ ಮೂಲಕ ಮುಗ್ದ ಜನತೆಯನ್ನು ಕರೆದುಕೊಂಡು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ, ಮಾಜಿ ಶಾಸಕ ಸಂಜಯ ಪಾಟೀಲರ ಮನೆ ಮುಂದೆ ರಾತ್ರಿಯವರೆಗೆ ಅನಧಿಕೃತವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಆಪ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅವರು ಚನಾವಣೆ ಪ್ರಚಾರಕ್ಕೆ ಬರದಂತೆ ತಡೆಯುವುದು ಇದರ ಹಿಂದಿನ ಉದ್ದೇಶ ಎಂದು ಆರೋಪಿಸಿದರು.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಸರ್ಕಾರದ ಮೇಲೆ ಪ್ರಭಾವ ಬೀರಿ ದೂರಿನಲ್ಲಿ ತಮ್ಮ ಹೆಸರು ಕೈ ಬಿಡುವಂತೆ ಮಾಡಿದ್ದಾರೆ. ಸಚಿವರ ಹೆಸರನ್ನು ದೂರಿನಲ್ಲಿ ದಾಖಲಿಸಿಕೊಳ್ಳಬೇಕು, ಬಾಡಿಗೆ ಗೂಂಡಾಗಳನ್ನು ಬಂಧಿಸಿ ಶಾಂತಿಯುತ ಚುನಾವಣೆಗೆ ಸಹಕರಿಸಬೇಕು ಮನವಿ ಮಾಡಿದರು.ಬಿಜೆಪಿ ನಾಯಕರಿಗೆ ಮತ್ತು ಅವರ ಮನೆಗಳಿಗೆ ಸೂಕ್ತ ರಕ್ಷಣೆ ನಿಡಬೇಕು. ಅವರಿಗೆ ತೊಂದರೆಯಾದಲ್ಲಿ ಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರವೆ ಹೊಣೆಯಾಗಲಿದೆ. ನ್ಯಾಯಸಮ್ಮತ ಚುನಾವಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಅವರು,ಸಚಿವೆ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಸಚಿವ ಸ್ಥಾನದಿಂದ ವಜಾಗೊಳಿಸಿಬೇಕು. ಒಂದು ವೇಳೆ ಕ್ರಮ ಕೈಗೊಳ್ಳದೆ ಹೋದಲ್ಲಿ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಮ್.ಬಿ.ಝಿರಲಿ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ದೇಶಪಾಂಡೆ, ರಾಜಶೇಖರ ಡೋಣಿ, ಈರಯ್ಯ ಖೊತ, ಮಲ್ಲಿಕಾರ್ಜುನ ಮಾದಮ್ಮನವರ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್. ಸಿದ್ದನಗೌಡರ, ಸಂತೋಷ ದೇಶನೂರ, ಶಿವಾನಂದ ಹಣಮಸಾಗರ ಮುಂತಾದವರು ಇದ್ದರು.