ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭಾರತ ದೇಶಕ್ಕೆ ಅಪಮಾನ ಮಾಡುವ ರೀತಿಯಲ್ಲಿ ದೇಶದ ವಿರುದ್ಧ ನಮ್ಮ ಪ್ರತಿಭಟನೆಯಾಗಬೇಕು ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ಯುವ ನಾಯಕ ರಾಹುಲ್‌ಗಾಂಧಿ ವಿರುದ್ಧ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯಬಾಲರಾಜ್ ನೇತೃತ್ವದಲ್ಲಿ ಸಮಾವೇಶಗೊಂಡು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಹುಲ್ ವಿರುದ್ಧ ಘೋಷಣೆ ಕೂಗಿ ದೇಶ ವಿರೋಧಿ ರಾಹುಲ್ ಗಾಂಧಿಗೆ ಧಿಕ್ಕಾರ, ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿ, ಶ್ರೀ ಭುವನೇಶ್ವರಿ ವೃತ್ತಕ್ಕೆ ತಲುಪಿದರು. ಕೆಲಕಾಲ ರಸ್ತೆ ತಡೆ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದರು. ನಂತರ ರಾಹುಲ್ ಗಾಂಧಿ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಬಾಲರಾಜ್ ಮಾತನಾಡಿ, ರಾಹುಲ್‌ಗಾಂಧಿ ಅವರು ದೇಶದ ವಿರುದ್ಧವೇ ಪ್ರತಿಭಟನೆ ಮಾಡಬೇಕು ಎಂದು ಹೇಳುವ ಮೂಲಕ ಭಾರತೀಯರಿಗೆ ಅಪಮಾನ ಮಾಡಿದ್ದಾರೆ. ಅವರಿಗೆ ದೇಶ ಹಾಗೂ ದೇಶದಲ್ಲಿರುವ ಜನರ ಬಗ್ಗೆ ಕಿಂಚಿತ್ತು ಅಭಿಮಾನ ಪ್ರೀತಿ ಇಲ್ಲ, ದೇಶ ಮೊದಲು ನಂತರ ಪಕ್ಷ ಎಂಬ ಸಾಮಾನ್ಯ ತಿಳಿವಳಿಕೆ ಇಲ್ಲದಂತೆ ಮಾತನಾಡಿದ್ದಾರೆ. ದೇಶಕ್ಕೆ ಮೊದಲು ನಾವೆಲ್ಲರು ಋಣಿಯಾಗಿರಬೇಕು. ದೇಶ ಇದ್ದರೆ ನಾವು. ಮಹಾತ್ಮಗಾಂಧಿ ಅವರು ದೇಶದ ನೆಲಕ್ಕೆ ಹೆಚ್ಚಿನ ಗೌರವ ಕೊಟ್ಟಿದ್ದರು. ಅಂಥವರ ಹೆಸರು ಇಟ್ಟುಕೊಂಡಿರುವ ರಾಹುಲ್ ಗಾಂಧಿ, ಮಹಾತ್ಮಗಾಂಧಿ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದರು. ದೇಶ ಇದ್ದರೆ, ಅಂಬೇಡ್ಕರ್ ಅವರ ಸಂವಿಧಾನ ಇರುತ್ತದೆ. ಮಹಾತ್ಮಗಾಂಧಿ ಅವರು ರಾಮರಾಜ್ಯದ ಕನಸು ಕಂಡವರು. ಅಂಥವರ ಆಶಯಕ್ಕೆ ವಿರುದ್ಧವಾಗಿ ರಾಹುಲ್‌ಗಾಂಧಿ ನಡೆದುಕೊಂಡಿದ್ದಾರೆ. ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ಅಪಮಾನ ಮಾಡಿದ್ದಾರೆ. ದೇಶದ ಏಕತೆ, ಅಖಂಡತೆಗೆ ಧಕ್ಕೆ ಉಂಟು ಮಾಡಿರುವಂತಹ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರನ್ನು ಕೂಡಲೇ ಗಡಿಪಾರು ಮಾಡಿ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸೂರ್ಯ ಬಾಲರಾಜ್ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಂದ್ ಭಗೀರಥ, ನಟರಾಜು, ಬುಲೆಟ್ ಚಂದ್ರು, ಎಸ್ಟಿ ಮೋರ್ಚಾ ಚಂದ್ರು, ಬಂಗಾರು, ಕಿರಣ್, ಮೂಡಹಳ್ಳಿ ಮೂರ್ತಿ, ರಾಮಸಮುದ್ರ ಶಿವಣ್ಣ, ಭೋಗಾಪುರ ಕುಮಾರ್, ಮಂಜುನಾಥ್, ಕೋಂಟಬಳ್ಳಿಕುಮಾರ್, ತಮ್ಮಡಹಳ್ಳಿ ಮಹದೇವಪ್ರಸಾದ್, ಅನಂದ್, ಮಹೇಶ್, ವಿರೇಂದ್ರ, ಕೊಳ್ಳೇಗಾಲ ಲೊಕೇಶ್, ರಾಹುಲ್, ಪ್ರವೀಣ್ ಇದ್ದರು.