ಚಿಂಚೋಳಿ ಮೀಸಲು ಮತಕ್ಷೇತ್ರದಲ್ಲಿ ಲೀಡ್‌ ಕೊಡಿಸಲು ಬಿಜೆಪಿ-ಕಾಂಗ್ರೆಸ್‌ ನಾಯಕರ ಜಿದ್ದಾಜಿದ್ದಿ

| Published : Apr 16 2024, 01:04 AM IST

ಚಿಂಚೋಳಿ ಮೀಸಲು ಮತಕ್ಷೇತ್ರದಲ್ಲಿ ಲೀಡ್‌ ಕೊಡಿಸಲು ಬಿಜೆಪಿ-ಕಾಂಗ್ರೆಸ್‌ ನಾಯಕರ ಜಿದ್ದಾಜಿದ್ದಿ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೀಸಲು ಚಿಂಚೋಳಿ ವಿಧಾನಸಭಾ ಮತಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಬಿಜೆಪಿ ನಾಯಕರ ಮಧ್ಯೆ ಪಕ್ಷದ ಅಭ್ಯರ್ಥಿಗಳಿಗೆ ಮತಗಳ ಲೀಡ್‌ ಕೊಡಿಸುವುದಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಬೀದರ್‌ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೀಸಲು ಚಿಂಚೋಳಿ ವಿಧಾನಸಭಾ ಮತಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಬಿಜೆಪಿ ನಾಯಕರ ಮಧ್ಯೆ ಪಕ್ಷದ ಅಭ್ಯರ್ಥಿಗಳಿಗೆ ಮತಗಳ ಲೀಡ್‌ ಕೊಡಿಸುವುದಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಚಿಂಚೋಳಿ ವಿಧಾನಸಭೆ ಕ್ಷೇತ್ರವು ಮೀಸಲು ಮತಕ್ಷೇತ್ರವೆಂದು ೨೦೦೮ರಲ್ಲಿ ವಿಧಾನಸಭೆ ಕ್ಷೇತ್ರ ಪುನರ್‌ ವಿಂಗಡಣೆ ನಂತರ ಬೀದರ್‌ ಲೋಕಸಭೆಗೆ ಒಳಪಟ್ಟಿದೆ. ೨೦೦೯ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎನ್‌. ಧರ್ಮಸಿಂಗ್‌ ಅವರಿಗೆ ೫ ಸಾವಿರ ಮತಗಳ ಮುನ್ನೆಡೆ ಮತ್ತು ೨೦೧೪ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಮುನ್ನಡೆ ಹಾಗೂ ೨೦೧೯ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ೧೩,೫೯೦ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.

ಆದರೆ, ಚಿಂಚೋಳಿ ಮೀಸಲು ವಿಧಾನಸಭೆ ಮತಕ್ಷೇತ್ರಕ್ಕೆ ೨೦೨೩ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿಯಿಂದಾಗಿ ಬಿಜೆಪಿ ಅಭ್ಯರ್ಥಿ ಶಾಸಕ ಡಾ. ಅವಿನಾಶ ಜಾಧವ್ ಕೇವಲ ೮೫೬ ಮತಗಳಿಂದ ಎರಡನೇ ಸಲ ಆಯ್ಕೆಯಾಗಿದ್ದಾರೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ ರಾಠೋಡ ಅವರು ಅಲ್ಪ ಮತಗಳಿಂದ ಸೋಲು ಕಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ನಡೆಸುತ್ತಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳು ಅವರ ನೆರವಿಗಿವೆ. ಅಲ್ಲದೆ ಕೆಪಿಸಿಸಿ ಉಪಾಧ್ಯಕ್ಷರಾಗಿಯೂ ನೇಮಕವಾಗಿದ್ದು ಕಾಂಗ್ರೆಸ ಅಭ್ಯರ್ಥಿ ಸಾಗರ ಖಂಡ್ರೆ ಅವರಿಗೆ ಚಿಂಚೋಳಿ ಮತಕ್ಷೇತ್ರದಿಂದ ಹೆಚ್ಚು ಮತಗಳ ಲೀಡ್‌ ಕೊಡಿಸಲು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಈಗಾಗಲೇ ತಾಲೂಕಿನ ಹಲವು ಗ್ರಾಮಗಳಲ್ಲಿ ಸಭೆ ನಡೆಸಿ ಬಿರುಸಿನಿಂದ ಪ್ರಚಾರ ನಡೆಸಿದ್ದಾರೆ. ಚಿಂಚೋಳಿ ಕಾಳಗಿ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ರಹೀಮಖಾನ್‌, ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಚಿವ ಈಶ್ವರ ಖಂಡ್ರೆ ಚುನಾವಣೆ ಪ್ರಚಾರ ನಡೆಸಿದ್ದಾರೆ.

ಶಾಸಕ ಡಾ. ಅವಿನಾಶ ಜಾಧವ್ ಕೂಡ ಲೀಡ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಚಿಂಚೋಳಿ ಮತಕ್ಷೇತ್ರದಿಂದ ೨೦೧೯ರಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಲೀಡ್‌ ನೀಡಲಾಗಿತ್ತು. ಗೆದ್ದ ಭಗವಂತ ಖುಬಾ ಕೇಂದ್ರ ಸಚಿವರಾಗಿಯೂ ಸಾಧನೆ ಮಾಡಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿಗೆ ಮತಗಳ ಲೀಡ್‌ಗಾಗಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸುನೀಲ್ ವಲ್ಲಾಪೂರೆ, ರಾಜಕುಮಾರ ಪಾಟೀಲ ತೇಲ್ಕೂರ ಕಾರ್ಯಕರ್ತರ ಸಭೆ ನಡೆಸಿ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಬೀದರ್‌ ಲೋಕಸಭೆ ಕಾಂಗ್ರೆಸ ಅಭ್ಯರ್ಥಿ ಸಾಗರ ಖಂಡ್ರೆ ಏ.೧೭ರಂದು ನಾಮಪತ್ರ ಸಲ್ಲಿಸಲಿದ್ದಾರೆ ಮತ್ತು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಏ.೧೮ರಂದು ನಾಮಪತ್ರ ಸಲ್ಲಿಸುತ್ತಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಚಿಂಚೋಳಿ ಮೀಸಲು ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕ ಡಾ. ಅವಿನಾಶ ಜಾಧವ್, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಇಬ್ಬರಿಗೂ ಪ್ರತಿಷ್ಠೆಯ ಕಣವಾಗಿರುವುದರಿಂದ ಯಾರು ಹೆಚ್ಚು ಲೀಡ್‌ ಕೊಡುತ್ತಾರೆ ಎಂಬುದು ಇಲ್ಲಿ ತೀವ್ರ ಕುತೂಹಲ ಕೆರಳಿಸಿದೆ.