ಹಳದಿ ಮೆಟ್ರೋ ಸಂಚಾರ ಆರಂಭಕ್ಕೆಆಗ್ರಹಿಸಿ ಬಿಜೆಪಿ,ಕಾಂಗ್ರೆಸ್‌ ಪ್ರತಿಭಟನೆ

| Published : Jul 06 2025, 01:48 AM IST

ಹಳದಿ ಮೆಟ್ರೋ ಸಂಚಾರ ಆರಂಭಕ್ಕೆಆಗ್ರಹಿಸಿ ಬಿಜೆಪಿ,ಕಾಂಗ್ರೆಸ್‌ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೆಟ್ರೋದ ಹಳದಿ ಮಾರ್ಗ ಆರಂಭಿಸುವಂತೆ ಒತ್ತಾಯಿಸಿ ಲಾಲ್‌ಬಾಗ್ ಎದುರು ಬಿಜೆಪಿಯವರು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಆರ್‌.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗ ಆರಂಭಿಸುವಂತೆ ಒತ್ತಾಯಿಸಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡರು ಪ್ರತ್ಯೇಕವಾಗಿ ಶನಿವಾರ ಪ್ರತಿಭಟನೆ ನಡೆಸಿದರು.

ಹಳದಿ ಮಾರ್ಗ ವಿಳಂಬವಾಗಲು ಕೇಂದ್ರ ಸರ್ಕಾರದ ನೀತಿ ಕಾರಣವೆಂದು ಕಾಂಗ್ರೆಸ್ಸಿಗರು ದೂರಿದರೆ, ರಾಜ್ಯಸರ್ಕಾರ, ಬಿಎಂಆರ್‌ಸಿಎಲ್‌ ವಿರುದ್ಧ ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರವೇ ತಪಾಸಣೆ ನಡೆಸಿ ಜನಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಬಿಜೆಪಿಗರು ಬೃಹತ್ ಮೆರವಣಿಗೆ ಮೂಲಕ ಲಾಲ್ ಬಾಗ್‌ನಿಂದ ಬಿಎಂಆರ್‌ಸಿಎಲ್ ಕಚೇರಿಗೆ ಸಾಗಲು ಯೋಜಿಸಿದ್ದರೂ, ಪೊಲೀಸರಿಂದ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಲಾಲ್ ಬಾಗ್ ಹತ್ತಿರವೇ ಜಮಾಯಿಸಿ ಪ್ರತಿಭಟಿಸಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಮೆಟ್ರೋ ದರವನ್ನು ಏರಿಕೆ ಮಾಡುವುದಕ್ಕೂ ಮೊದಲು ಸಮಿತಿ 2-3 ದೇಶಕ್ಕೆ ಭೇಟಿ ನೀಡಿ ವರದಿ ನೀಡಿದೆ. ಬಳಿಕ ಶೇ.100 ರಷ್ಟು ದರ ಏರಿಸಲಾಗಿದೆ. ಹಲವು ಬಾರಿ ಪತ್ರ ಬರೆದು ವರದಿ ಬಹಿರಂಗಕ್ಕೆ ಬಿಎಂಆರ್‌ಸಿಎಲ್‌ ಹಿಂದೇಟು ಹಾಕಿದೆ. ಇದರಿಂದ ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ತೊರೆದಿದ್ದಾರೆ. ಜನರ ಹಣದಲ್ಲಿ ಓಡುವ ಮೆಟ್ರೋ ದರ ಏರಿಕೆಯ ಮಾನದಂಡ, ಕಾರಣವನ್ನು ತಿಳಿಸದಿರುವುದು ಯಾಕೆಂದು ಪ್ರಶ್ನಿಸಿದರು.

ಎರಡು ವರ್ಷದ ಹಿಂದೆ ಹಳದಿ ಮಾರ್ಗದ ಸಿವಿಲ್ ಕೆಲಸ ಮುಗಿಸಿದರೂ ಕೂಡ ಜನಸಂಚಾರವನ್ನು ಇನ್ನೂ ಯಾಕಾಗಿ ಆರಂಭಿಸಿಲ್ಲ. ರೈಲುಗಳ ಕೊರತೆ, ಪ್ರಾಯೋಗಿಕ ಸಂಚಾರ ಸಮಸ್ಯೆ, ಮೆಟ್ರೋ ಸುರಕ್ಷತಾ ಆಯುಕ್ತಾಲಯಕ್ಕೆ ಯಾಕಾಗಿ ಸಮರ್ಪಕ ವರದಿಯನ್ನು ಸಕಾಲಕ್ಕೆ ಕಳುಹಿಸಿಲ್ಲ ಎಂದು ಕಿಡಿ ಕಾರಿದರು.

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಎಲೆಕ್ಟ್ರಾನಿಕ್‌ ಸಿಟಿಗೆ ಮೆಟ್ರೋ ಸಂಪರ್ಕಿಸುವ ಯೋಜನೆ ಪೂರ್ಣಗೊಂಡಿದ್ದರೂ ಬಿಎಂಆರ್‌ಸಿಎಲ್‌ ನಿರ್ಲಕ್ಷ್ಯ ಸೇರಿ ಹಲವು ಕಾರಣದಿಂದ ಜನತೆಗೆ ಪ್ರಯೋಜನ ಆಗುತ್ತಿಲ್ಲ. ಇದರಿಂದ ಈ ಭಾಗಕ್ಕೆ ತೆರಳುವ ಜನಕ್ಕೆ ಸಮಸ್ಯೆ ಆಗಿದೆ. ಇನ್ನು ನಿರ್ಲಕ್ಷ್ಯ ಮಾಡದೆ ಆದಷ್ಟು ಬೇಗ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸಂಸದ ಪಿ.ಸಿ.ಮೋಹನ್‌, ಶಾಸಕ ರವಿಸುಬ್ರಹ್ಮಣ್ಯ, ಎಂ. ಕೃಷ್ಣಪ್ಪ, ಉದಯ್‌ ಗರುಡಾಚಾರ್‌, ಬಿಬಿಎಂಪಿ ಮಾಜಿ ಕಾರ್ಪೊರೆಟರ್‌ಗಳು ಸೇರಿದ್ದರು.

ಕಾಂಗ್ರೆಸ್‌ ಪ್ರತಿಭಟನೆ:

ಶನಿವಾರ ಬೆಳಗ್ಗೆ ಶಾಂತಿನಗರದಲ್ಲಿರುವ ಬಿಎಂಆರ್‌ಸಿಎಲ್‌ ಕಚೇರಿ ಎದುರು ಕಾಂಗ್ರೆಸ್‌ ಮುಖಂಡರು ಪ್ರತಿಭಟನೆ ನಡೆಸಿದರು.

ಮೆಟ್ರೋ ಆರಂಭ ವಿಳಂಬಕ್ಕೆ ಕೇಂದ್ರ ಸರ್ಕಾರವೇ ಹೊಣೆಗಾರ ಎಂದು ಆಕ್ಷೇಪಿಸಿದರು. ಮೆಟ್ರೋ ಬೋಗಿಗಳ ತುರ್ತು ಸರಬರಾಜು ಹಾಗೂ ಪರಿಶೀಲನೆ ತ್ವರಿತಗೊಳಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಕಳೆದ ನಾಲ್ಕು ವರ್ಷದಿಂದ ಈ ಮಾರ್ಗ ಆರಂಭಿಸುವುದಾಗಿ ಬಿಎಂಆರ್‌ಸಿಎಲ್‌ ಕಾಲಹರಣ ಮಾಡುತ್ತಿದೆ. ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ್‌ ರೆಡ್ಡಿ, ಕಾರ್ಪೊರೆಟರ್‌ ಮಂಜುನಾಥ್‌, ಎನ್‌. ನಾಗರಾಜ್‌ ಸೇರಿ ಹಲವರಿದ್ದರು.

ವಿಳಂಬಕ್ಕೆ ಕಾಂಗ್ರೆಸ್‌-ಬಿಜೆಪಿ ಕಾರಣ: ಆಪ್‌

ಬೆಂಗಳೂರು ನಗರದಲ್ಲಿ ಹಳದಿ ಮಾರ್ಗದ ವಿಳಂಬಕ್ಕೆ ಹಿಂದಿನ ಬಿಜೆಪಿ ಹಾಗೂ ಈಗಿನ ಕಾಂಗ್ರೆಸ್ ರಾಜ್ಯ ಸರ್ಕಾರ ನೇರ ಹೊಣೆ ಎಂದು ಆಮ್‌ ಆದ್ಮಿ ಪಕ್ಷ ಕಡಿಕಾರಿದೆ. ಜತೆಗೆ ಪಕ್ಷವು ಅತೀ ಶೀಘ್ರವೆ ಬೆಂಗಳೂರಿನ ಮೆಟ್ರೋ ಕಾಮಗಾರಿಗಳು ಮತ್ತು ಸಬ್ ಅರ್ಬನ್ ರೈಲು ಕಾಮಗಾರಿಗಳ ಪರಿಶೀಲನೆ ಮಾಡಿ ಜನರ ಮುಂದೆ ಸತ್ಯ ತೆರೆದಿಡುವ ಕೆಲಸ ಮಾಡಲಿದೆ ಎಂದು ಹೇಳಿದೆ.