- ಗ್ಯಾರಂಟಿಗೆ ಹಣ ನೀಡದಂತೆ ಚುನಾವಣಾ ‍ಆಯೋಗಕ್ಕೆ ಪತ್ರ, ನ್ಯಾಯಾಲಯಕ್ಕೆ ದೂರು ಕೊಟ್ಟ ಬಿಜೆಪಿ: ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಟೀಕೆ ಮಾಡಿದವರೆ ಇಂದು ಚುನಾವಣೆಗಳಲ್ಲಿ ಅವುಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಯುತ್ತಿರುವ ವೇಳೆಯಲ್ಲಿ ಗ್ಯಾರಂಟಿಗಳಿಗೆ ಹಣ ಬಿಡುಗಡೆ ಮಾಡದಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಪತ್ರ ಬರೆದಿದೆ, ದೂರು ನೀಡಿದೆ. ಇದರೊಂದಿಗೆ ಬಿಜೆಪಿ ಮುಖವಾಡ ಕಳಚಿದೆ ಎಂದರು.

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ದೊಡ್ಡ ಷಡ್ಯಂತ್ರ ಮಾಡುತ್ತಿದ್ದಾರೆ. ನಾವು ಕಾನೂನಿನಡಿ ಕೆಲಸ ಮಾಡುತ್ತಿದ್ದೇವೆ. ಕಳೆದ ತಿಂಗಳಿನದ್ದು, ಈ ತಿಂಗಳಿನಲ್ಲಿ ಹಣ ನೀಡಬಾರದೆಂದು ಕೋರ್ಟ್‌ಗೆ ಹಾಕಿದ್ದು ಖಂಡನೀಯ. ಇದು ರೆಗ್ಯುಲರ್ ಸ್ಕೀಂ ಆಗಿದ್ದು, ಎಲ್ಲರಿಗೂ ಹಣ ತಲುಪಿದೆ. ಜನರಲ್ಲಿ ಆತಂಕ ಮೂಡಿಸಿ, ಭಯದ ವಾತಾವರಣ ಉಂಟು ಮಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.


ಚುನಾವಣಾ ಆಯೋಗಕ್ಕೆ ಬಿಜೆಪಿ ನೀಡಿದ ದೂರಿನ ಪ್ರತಿಯನ್ನು ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ, ಚುನಾವಾಣಾ ಆಯೋಗಕ್ಕೆ ನಾವು ಉತ್ತರ ಕೊಟ್ಟಿದ್ದೇವೆ. ಕೋರ್ಟ್‌ಗೂ ಹಾಕಿದ್ದರು, ಅಲ್ಲಿ ನೋಟೀಸ್ ಆರ್ಡರ್ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದಿಲ್ಲ. ಇಲ್ಲಿ ಕೆಲಸವೂ ನಿಲ್ಲುವುದಿಲ್ಲ. 58 ಸಾವಿರ ಫಲಾನುಭ‍ವಿಗಳ ಕುಟುಬಗಳು ಗ್ಯಾರಂಟಿಗೆ ಅಡ್ಡಿಪಡಿಸುತ್ತಿರುವ ಬಿಜೆಪಿಗೆ ಉಪ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.

ಸುಮಾರು 1 ಕೋಟಿಗೂ ಅಧಿಕ ಫಲಾನುಭವಿಗಳು ಬಿಜೆಪಿ ವರ್ತನೆಯನ್ನು ಅರಿಯಬೇಕು. ಬಿಜೆಪಿಯ ನಿಜವಾದ ಮುಖವಾಡ ಜನರಿಗೆ ತಿಳಿಸಬೇಕು. ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದಲ್ಲಿ ಅತಿ ಹೆಚ್ಚು ಮತದಾನ ಮಾಡುವ ಮೂಲಕ ಬಿಜೆಪಿ ತಕ್ಕ ಪಾಠ ಕಲಿಸಬೇಕು. ಇಲ್ಲಿ ದಕ್ಷಿಣದಲ್ಲಿ ಸಮರ್ಥ ಶಾಮನೂರು ಹಾಗೂ ಬಾಗಲಕೋಟೆಯಲ್ಲಿ ಉಮೇಶ ಮೇಟಿಗೆ ಗೆಲ್ಲಿಸಬೇಕು ಎಂದು ಡಿ.ಕೆ. ಶಿವಕುಮಾರ ಮನವಿ ಮಾಡಿದರು.

ತೆಲಂಗಾಣ ಸಚಿವ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜ಼ರುದ್ದೀನ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಇತರರು ಇದ್ದರು.

- - -

(ಬಾಕ್ಸ್‌)

* ಉಪ ಚುನಾವಣೆಯಲ್ಲಿ ಸಮರ್ಥ, ಉಮೇಶ ಗೆದ್ದೇ ಗೆಲ್ತಾರೆ

- ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಕೊಡುಗೆ ಸ್ಮರಿಸುತ್ತಿರುವ ಜನ: ಡಿಸಿಎಂ ಶ್ಲಾಘನೆ ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಇಬ್ಬರು ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದೇವೆ. ಎರಡೂ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲೂ ಶಾಂತಿಯುತ ಪ್ರಚಾರವಾಗಿದೆ. ಎಲ್ಲ ಪಕ್ಷಗಳಿಗೂ ಧನ್ಯವಾದಗಳನ್ನು ಹೇಳುತ್ತೇನೆ. ನಾನು, ಸಿಎಂ ವಿಧಾನಸಭೆ ನಡೆಯುವಾಗ ಸಮರ್ಥ ಶಾಮನೂರು ಹಾಗೂ ಉಮೇಶ ಮೇಟಿ ನಾಮಪತ್ರ ಸಲ್ಲಿಕೆಗೆ ಬಂದಿದ್ದೆವು ಎಂದರು.

ನಾನೂ ಕೇರಳದಲ್ಲಿ ಪ್ರಚಾರ ಮುಗಿಸಿಕೊಂಡು ಬಂದಿದ್ದೇನೆ. ದಾವಣಗೆರೆ ದಕ್ಷಿಣದಲ್ಲಿ ಸಾದಿಕ್ ಪೈಲ್ವಾನ್ ಚುನಾವಣಾ ನಿವೃತ್ತ ಘೋಷಿಸುವ ಮೂಲಕ ಪಕ್ಷಕ್ಕೆ ಬಲ ತುಂಬಿದ್ದಾರೆ. ಇಲ್ಲಿನ ಜನ ಬಹಳ ಅದೃಷ್ಟವಂತರು. ಬೆಂಗಳೂರಿಗಿಂತಲೂ ಉತ್ತಮ ವ್ಯವಸ್ಥೆಯನ್ನು ಇಲ್ಲಿ ನೋಡಿ ಖುಷಿಯಾಯಿತು. ಶಾಮನೂರು ಶಿವಶಂಕರಪ್ಪ ನಗರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ ಎಲ್ಲ ಜಾತಿ, ಧರ್ಮೀಯರನ್ನೂ ಸಮಾನತೆಯಿಂದ ನೋಡುತ್ತಿದ್ದ ಹಿರಿಯ ಜೀವವಾಗಿದ್ದರು ಎಂದು ಅವರು ತಿಳಿಸಿದರು.

ಶಾಮನೂರು ಅವರ ಜೊತೆಗೆ ಸಂಪುಟದಲ್ಲೂ ನಾನು ಕೆಲಸ ಮಾಡಿದ್ದೇನೆ. ಎಲ್ಲ ಸಮಾಜಕ್ಕೂ ಕಚೇರಿಗೆ ಜಾಗ ಕೊಡಿಸಿದ್ದಾರೆ. ಎಲ್ಲ ಧರ್ಮಗಳ ದೇವಸ್ಥಾನ, ಈದ್ಗಾ, ದರ್ಗಾಗಳಿಗೆ ದಾನ ಮಾಡಿದ್ದಾರೆ. ನಾನೂ ಕ್ಷೇತ್ರದಲ್ಲೇ ಸರ್ವೇ ಮಾಡಿಸಿದ್ದು, ಸುಮಾರು 1 ಲಕ್ಷ ಜನರ ಸರ್ವೇ ಮಾಡಿಸಿದ್ದೇನೆ. ಶಿಕ್ಷಣ, ಆರೋಗ್ಯ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಕೆಲಸವನ್ನು ಶಾಮನೂರು ಕುಟುಂಬ ಮಾಡಿದೆ. ಇದನ್ನು ಇಂದಿಗೂ ಜನರು ಸ್ಮರಿಸುತ್ತಿದ್ದಾರೆ. ಶಾಮನೂರು ಕೊಡುಗೆಯನ್ನು ಅಭಿಮಾನದಿಂದ ಜನ ನನೆಯುತ್ತಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಮುಂಚಿನಿಂದಲೂ ಒಂದು ಸಿದ್ಧಾಂತವಿದೆ. ಅದೇ ಸಿದ್ಧಾಂತದಂತೆ ಸಮರ್ಥಗೆ ಇಲ್ಲಿ ಟಿಕೆಟ್ ನೀಡಲಾಗಿದೆ. ಸಮರ್ಥನ ತಾಯಿ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಲೋಕಸಭೆ ಚುನಾವಣೆಗೆ ನಾವೇ ನಿಲ್ಲಿಸಿದ್ದೆವು. ಈಗ ಸಂಸದರಾಗಿ ಡಾ.ಪ್ರಭಾರವರು ಸಹ ಉತ್ತಮ ಕೆಲಸ ಮಾಡುತ್ತಿದ್ದು, ಪಕ್ಷದ ಆಸ್ತಿಯಾಗಿದ್ದಾರೆ. ಶ್ರೀಮಂತಿಕೆ ಎಷ್ಟೇ ಇರಬಹುದು. ‍ ಆದರೆ, ಕೊಡುವ ಮನಸ್ಸು, ಕೈ ಇರಬೇಕು. ಅಂತಹ ಗುಣ ಶಾಮನೂರು ಮತ್ತು ಕುಟುಂಬಕ್ಕೆ ಇದೆ ಎಂದು ಅವರು ಶ್ಲಾಘಿಸಿದರು.

- - -

(ಟಾಪ್‌ ಕೋಟ್‌) ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಕೊಟ್ಟ ಮಾತಿನಂತೆ ನಡೆದಿಲ್ಲ ಅಂತಾ ಎಲ್ಲೋ ಭಾಷಣ ಮಾಡಿದ್ದು ಓದಿದ್ದೇನೆ. ಆದರೆ, ನಾವು ಘೋಷಿಸಿದ್ದ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ನುಡಿದಂತೆ ನಡೆದಿದ್ದೇವೆ. - ಡಿ.ಕೆ.ಶಿವಕುಮಾರ, ಉಪ ಮುಖ್ಯಮಂತ್ರಿ.

- - -

(-ಫೋಟೋಗಳಿವೆ)