ಬಿಜೆಪಿ ಕಗ್ಗಂಟು: ಇನ್ನೊಂದು ವಾರದಲ್ಲೇ ಶಾ, ನಡ್ಡಾ ಭೇಟಿ

| Published : Nov 21 2025, 01:15 AM IST

ಬಿಜೆಪಿ ಕಗ್ಗಂಟು: ಇನ್ನೊಂದು ವಾರದಲ್ಲೇ ಶಾ, ನಡ್ಡಾ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ, ಡಾ. ಎ.ಎಚ್. ಶಿವಯೋಗಿಸ್ವಾಮಿ ಸೇರಿದಂತೆ ಲಗಾನ್ ಟೀಂ ವಿರುದ್ಧ ಶಿಸ್ತು ಕ್ರಮ, ಜಿಲ್ಲಾಧ್ಯಕ್ಷರ ಬದಲಾವಣೆಗೆ ಒತ್ತಾಯಿಸಿ ಇನ್ನೊಂದು ವಾರದಲ್ಲೇ ದೆಹಲಿಯಲ್ಲಿ ರಾಷ್ಟ್ರೀಯ ನಾಯಕ ಅಮಿತ್ ಶಾ, ಜೆ.ಪಿ.ನಡ್ಡಾ ಭೇಟಿಯಾಗುವುದಾಗಿ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ನೇತೃತ್ವದ ಗುಂಪು ಹೇಳಿದ್ದಾರೆ.

- ಬೆಂಗಳೂರಲ್ಲಿ ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ಸಮ್ಮುಖ ಜಿ.ಎಂ. ಸಿದ್ದೇಶ್ವರ ನೇತೃತ್ವದ ಗುಂಪು ನಿರ್ಧಾರ

- - -

- ಸದಾಶಿವ ನಗರದಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸದಲ್ಲಿ ನಡೆದ ಸಭೆ

- ರೇಣುಕಾಚಾರ್ಯ-ರವೀಂದ್ರನಾಥ ಲಗಾನ್ ಟೀಂನಿಂದ ದಾವಣಗೆರೆ ಕ್ಷೇತ್ರದ ಸೋಲಾಯ್ತು - ಲಗಾನ್ ಟೀಂ ವಿರುದ್ಧ ಶಿಸ್ತು ಕ್ರಮ, ಜಿಲ್ಲಾಧ್ಯಕ್ಷರ ಬದಲಿಸಲು ಸಿದ್ದೇಶ್ವರ, ಹರೀಶ ಟೀಂ ಪಟ್ಟು

- ಯಾರ ಜೊತೆಗೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ, ನಾನು ಪಕ್ಷದ ಪರವಾಗಿಯೇ ಇದ್ದೇನೆ: ಸಿದ್ದೇಶ್ವರ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾದ ಎಂ.ಪಿ. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ, ಡಾ. ಎ.ಎಚ್. ಶಿವಯೋಗಿಸ್ವಾಮಿ ಸೇರಿದಂತೆ ಲಗಾನ್ ಟೀಂ ವಿರುದ್ಧ ಶಿಸ್ತು ಕ್ರಮ, ಜಿಲ್ಲಾಧ್ಯಕ್ಷರ ಬದಲಾವಣೆಗೆ ಒತ್ತಾಯಿಸಿ ಇನ್ನೊಂದು ವಾರದಲ್ಲೇ ದೆಹಲಿಯಲ್ಲಿ ರಾಷ್ಟ್ರೀಯ ನಾಯಕ ಅಮಿತ್ ಶಾ, ಜೆ.ಪಿ.ನಡ್ಡಾ ಭೇಟಿಯಾಗುವುದಾಗಿ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ನೇತೃತ್ವದ ಗುಂಪು ಹೇಳಿದೆ.

ಬೆಂಗಳೂರಿನ ಸದಾಶಿವ ನಗರದಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಇತರರ ಸಮಕ್ಷಮ ರಾಜ್ಯಮಟ್ಟದ ಸಭೆಯ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರದ ಸೋಲಿನ ವಿಚಾರವಾಗಿ ಜಿಲ್ಲೆಯ ಮುಖಂಡರ ಸಭೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾದವರ ವಿರುದ್ಧ ಮೊದಲು ಶಿಸ್ತು ಕ್ರಮ ಆಗಬೇಕು. ಒಂದು ಗುಂಪಿನ ಕಡೆಗೆ ಒಲವು ಹೊಂದಿರುವ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡುವಂತೆ ರಾಷ್ಟ್ರೀಯ ನಾಯಕರನ್ನು ಒತ್ತಾಯಿಸಲು ಸಭೆ ನಿರ್ಧರಿಸಿತು ಎನ್ನಲಾಗಿದೆ.

ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್‌ ಬೆಂಗಳೂರಿನಲ್ಲಿ ಜಿ.ಎಂ. ಸಿದ್ದೇಶ್ವರ- ಶಾಸಕ ಬಿ.ಪಿ.ಹರೀಶ ಹಾಗೂ ಎಂ.ಪಿ.ರೇಣುಕಾಚಾರ್ಯ- ಎಸ್.ಎ.ರವೀಂದ್ರನಾಥ ನೇತೃತ್ವದ ಗುಂಪುಗಳ ಪ್ರತ್ಯೇಕ ಸಭೆ ಮಾಡಿ, ನಂತರ ಜಿಲ್ಲಾಧ್ಯಕ್ಷರಿಗೆ ಕೋರ್ ಕಮಿಟಿ ಸಭೆ ನಡೆಸಲು ಸೂಚಿಸಿದ್ದರು. ಕೆಲ ದಿನಗಳ ನಂತರ ಜಿಲ್ಲಾ ಕೋರ್ ಕಮಿಟಿ ಸಭೆಗೆ ಆರಗ ಜ್ಞಾನೇಂದ್ರ, ಪ್ರೀತಂ ಗೌಡ ಇತರರು ಪಾಲ್ಗೊಂಡಿದ್ದರು. ರೇಣು ತಂಡ ಭಾಗವಹಿಸಿದ್ದರೆ, ಸಿದ್ದೇಶ್ವರ ನೇತೃತ್ವದ ತಂಡ ಮೂವರು ಕೋರ್ ಕಮಿಟಿಯ ಅಪೇಕ್ಷಿತರಿದ್ದರೂ ಗೈರಾಗಿದ್ದರು. ನಂತರ ಪ್ರೀತಂ ಗೌಡ ಜಿಎಂಐಟಿ ಅತಿಥಿ ಗೃಹದಲ್ಲಿ ರಹಸ್ಯವಾಗಿ ಮಾತನಾಡಿದ್ದರು. ಎರಡೂ ಗುಂಪನ್ನು ಸರಿಪಡಿಸಲು ಮನವೊಲಿಸಲು ಪ್ರೀತಂ ಗೌಡ ಪ್ರಯತ್ನಿಸಿದ್ದರು.

ಆದರೆ, ಸಿದ್ದೇಶ್ವರ ಅದನ್ನು ನಿರಾಕರಿಸಿದ್ದಲ್ಲದೇ, ನಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು, ಯಾವುದೇ ಮಾತುಕತೆ ಇಲ್ಲವೆಂದು ಹೇಳಿ ಕಳಿಸಿದ್ದರು. ವಿಜಯೇಂದ್ರ ಜೊತೆ ಮಾತುಕತೆಯಾಗಿ ಹೊಂದಾಣಿಕೆಯಾಗಿದೆ ಎಂದು ಪುಕಾರು ಹಬ್ಬಿದೆ. ಆದರೆ, ನಾನು ಯಾರ ಜೊತೆಗೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ನಾನು ಪಕ್ಷದ ಪರವಾಗಿಯೇ ಇದ್ದೇನೆ. ನಾನು ಪಕ್ಷದ ಪರವಾಗಿ ಕೆಲಸ ಮಾಡುವವನು. ನಮ್ಮ ಗುಂಪು ಇದೆ. ಲೋಕಸಭೆ ಚುನಾವಣೆಯಲ್ಲಿ ಯಾರು ಪಕ್ಷವಿರೋಧಿ ಚಟುವಟಿಕೆ ಮಾಡಿದ್ದವರ ವಿರುದ್ಧ ಶಿಸ್ತುಕ್ರಮ ಆಗಬೇಕು, ಒಂದು ಕಡೆ ಗುರುತಿಸಿಕೊಂಡ ಜಿಲ್ಲಾಧ್ಯಕ್ಷರ ಬದಲಾವಣೆ ಆಗಬೇಕೆಂಬುದನ್ನು ಸ್ಪಷ್ಟವಾಗಿ ಹೇಳಿ ಕಳಿಸಿದ್ದೆ ಎಂದು ಸಿದ್ದೇಶ್ವರ ಸಭೆಯಲ್ಲಿ ಹೇಳಿದ್ದಾರೆಂದು ಗೊತ್ತಾಗಿದೆ.

ಲೋಕಸಭೆ ಚುನಾವಣೆಯಲ್ಲಿ ನಮ್ಮದೇ ಪಕ್ಷವಿರೋಧಿ ಕೆಲಸ ಮಾಡಿದವರ ಜೊತೆಗೆ ನಾವು ಹೇಗೆ ಕೆಲಸ ಮಾಡಬೇಕು? ಜಿಲ್ಲಾಧ್ಯಕ್ಷ ನಮ್ಮ ವಿರುದ್ಧ ಲಗಾನ್ ಟೀಂ ಮಾಡಿದ್ದ ಎರಡೂ ಪತ್ರಕ್ಕೆ ಸಹಿ ಮಾಡಿದ್ದು, ಒಂದು ಗುಂಪಿನ ಪರವಿರುವ ಜಿಲ್ಲಾಧ್ಯಕ್ಷನ ಬದಲಾವಣೆಯೂ ಆಗಬೇಕೆಂಬ ಎರಡಂಶಕ್ಕೆ ಕ್ರಮ ಆಗಬೇಕು ಎಂದು ಸಿದ್ದೇಶ್ವರ ಪುನರುಚ್ಛರಿಸಿದ್ದಾರೆ.

ಹರಿಹರ ಶಾಸಕ ಬಿ.ಪಿ.ಹರೀಶ, ಜಗಳೂರು ಮಾಜಿ ಶಾಸಕ ಎಚ್.ಪಿ.ರಾಜೇಶ, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತ ರಾವ್ ಜಾಧವ್, ಎಸ್.ಎಂ. ವೀರೇಶ ಹನಗವಾಡಿ, ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಹೊನ್ನಾಳಿ ಕ್ಷೇತ್ರದ ಎ.ಬಿ.ಹನುಮಂತಪ್ಪ, ಶಾಂತರಾಜ ಪಾಟೀಲ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ‍‍‍ಶಿವಕುಮಾರ, ಸಂಗನಗೌಡ, ದೇವೇಂದ್ರಪ್ಪ, ಬಾತಿ ದೊಗ್ಗಳ್ಳಿ ವೀರೇಶ, ಗುಡ್ಡೇಶ ಸೇರಿದಂತೆ ಸುಮಾರು 30 ಮುಖಂಡರು ಸಭೆಯಲ್ಲಿದ್ದರು.

- - -

(ಬಾಕ್ಸ್‌) * ಲಗಾನ್ ಟೀಂಗೆ ಶಿಸ್ತು ಕ್ರಮ, ಜಿಲ್ಲಾಧ್ಯಕ್ಷ ಬದಲಾಗಲಿ ದೆಹಲಿಯಲ್ಲಿ ನಮ್ಮ ನಾಯಕರಾದ ಅಮಿತ್ ಶಾ, ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿದ್ದೇವೆ. ಜಿ.ಎಂ.ಸಿದ್ದೇಶ್ವರ, ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ ಸೇರಿದಂತೆ ನಮ್ಮೆಲ್ಲಾ ತಂಡದ ಸದಸ್ಯರು ಹೋಗುತ್ತೇವೆ. ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂಬುದಾಗಿ ನಮ್ಮ ರಾಷ್ಟ್ರೀಯ ನಾಯಕರಿಗೂ ಗೊತ್ತಿದೆ. ಆದರೆ, ಲಗಾನ್ ಟೀಂನವರ ಪಕ್ಷ ವಿರೋಧಿ ಚಟುವಟಿಕೆಯಿಂದ ಸೋಲುಂಟಾಗಿದೆ. ಈ ಎಲ್ಲ ವಿಚಾರ ನಾಯಕರಿಗೂ ಗೊತ್ತಿದೆ. ಲಗಾನ್ ಟೀಂ ವಿರುದ್ಧ ಶಿಸ್ತು ಕ್ರಮ, ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆ ಇವು ನಮ್ಮ ಮುಖ್ಯ ಬೇಡಿಕೆಗಳು ಎಂಬುದಾಗಿ ಸಭೆಯಲ್ಲಿದ್ದ ಅನೇಕರ ಒತ್ತಾಯವಾಗಿತ್ತು.

- - -

-20ಕೆಡಿವಿಜಿ11:

ಬೆಂಗಳೂರಿನ ಸದಾಶಿವ ನಗರದಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸದಲ್ಲಿ ರಮೇಶ ಜಾರಕಿಹೊಳಿ, ಜಿ.ಎಂ.ಸಿದ್ದೇಶ್ವರ, ಬಿ.ಪಿ.ಹರೀಶ ದಾವಣಗೆರೆ ಜಿಲ್ಲಾ ಬಿಜೆಪಿ ಮುಖಂಡರ ಜೊತೆ ಚರ್ಚೆ ನಡೆಯಿತು.